ರಾಜ್ಯದ ಪ್ರಮುಖ ಮಠಗಳ ಮೇಲೆ ಕಣ್ಣು ಹಾಕಿದ ಸರ್ಕಾರ..!

Siddaramaiah--01

ಬೆಂಗಳೂರು, ಫೆ.7- ರಾಜ್ಯದ ಪ್ರಮುಖ ಮಠಗಳನ್ನು ಸರ್ಕಾರ ತನ್ನ ಸುಪರ್ದಿಗೆ ತೆಗದುಕೊಳ್ಳಲು ಮುಂದಾಗಿರುವುದು ಭಾರೀ ವಿವಾದಕ್ಕೆ ಎಡೆಮಾಡಿದೆ. ಹಾಲಿ ಇರುವ ಕಾಯ್ದೆಗೆ ಧಾರ್ಮಿಕ ದತ್ತಿ ಇಲಾಖೆ ತಿದ್ದುಪಡಿ ಮಾಡಲು ಮುಂದಾಗಿದ್ದು, ಬಜೆಟ್ ಅಧಿವೇಶನದಲ್ಲಿ ಹೊಸ ಕಾಯ್ದೆ ಮಂಡನೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಒಂದು ವೇಳೆ ಈ ಕಾಯ್ದೆ ಜಾರಿಯಾದರೆ ಪ್ರಮುಖ ಮಠಗಳಾದ ತುಮಕೂರಿನ ಸಿದ್ಧಗಂಗಾ, ಮೈಸೂರಿನ ಜೆಎಸ್‍ಎಸ್, ನಾಗಮಂಗಲದ ಆದಿಚುಂಚನಗಿರಿ ಪೀಠ, ಧರ್ಮಸ್ಥಳದ ಮಂಜುನಾಥೇಶ್ವರ, ಹುಬ್ಬಳ್ಳಿಯ ಮೂರು ಸಾವಿರ ಮಠ, ಸಿರಿಗೆರೆ ಮಠ, ಚಿತ್ರದುರ್ಗದ ಮುರುಘಾಮಠ, ಉಡುಪಿಯ ಪೇಜಾವರ ಮಠ, ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕ, ಹೊರನಾಡಿನ ಅನ್ನಪೂರ್ಣೇಶ್ವರಿ, ರಾಮಚಂದ್ರಾಪುರ ಮಠ ಸೇರಿದಂತೆ ಬಹುತೇಕ ಮಠಗಳು ಸರ್ಕಾರದ ಅಧೀನಕ್ಕೆ ಒಳಪಡಲಿವೆ.

ಮಠಗಳನ್ನು ಸರ್ಕಾರ ತನ್ನ ಅಧೀನಕ್ಕೆ ತೆಗೆದುಕೊಳ್ಳುವ ಸಂಬಂಧ ಧಾರ್ಮಿಕ ದತ್ತಿ ಇಲಾಖೆಯು ಹಿಂದು ಮಠ-ಮಾನ್ಯ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಿ ಕಾನೂನು ಇಲಾಖೆಯ ಅಭಿಪ್ರಾಯ ಪಡೆಯಲು ಮುಂದಾಗಿದೆ ಎಂದು ತಿಳಿದುಬಂದಿದೆ. ಇದೇ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಮಂಡಿಸಲಿದ್ದು, ಉಭಯ ಸದನಗಳಾದ ವಿಧಾನಸಭೆ ಹಾಗೂ ವಿಧಾನ ಪರಿಷತ್‍ನಲ್ಲಿ ಕಾಯ್ದೆ ಮಂಡಿಸಿ ಅಂಗೀಕಾರ ಪಡೆದು ಬಳಿಕ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಚರ್ಚೆ ನಡೆಸಿದ್ದಾರೆ. ಕಾರಣವೇನು..? ರಾಜ್ಯದ ಪ್ರಮುಖ ಮಠಗಳನ್ನು ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕೆಂಬ ಬೇಡಿಕೆ ಕೆಲವರಿಂದ ಕೇಳಿಬಂದಿತ್ತು.  ಸರ್ಕಾರವನ್ನೇ ನಿಯಂತ್ರಿಸುವ ಧಾರ್ಮಿಕ ಕೇಂದ್ರಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡರೆ ಧಾರ್ಮಿಕ ಮುಖಂಡರ ಹಸ್ತಕ್ಷೇಪವನ್ನು ತಪ್ಪಿಸಬಹುದು ಎಂಬುದು ಸರ್ಕಾರದ ಇರಾದೆಯಾಗಿದೆ.

ವಿರೋಧ:

ಸರ್ಕಾರದ ಈ ಕ್ರಮಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.  ಸರ್ಕಾರ ಅನಗತ್ಯವಾಗಿ ಮಠಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವುದು ದುರದ್ದೇಶದಿಂದ ಕೂಡಿದೆ. ಸರ್ಕಾರ ಮಾಡದ ಸಮಾಜ ಸೇವೆಯನ್ನು ಮಠಗಳು ಮಾಡುತ್ತಿವೆ. ಒಂದು ವೇಳೆ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾದರೆ ನಾವು ಕಾಯ್ದೆ ಮಂಡನೆಗೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಪಕ್ಷಗಳ ಮುಖಂಡರು ಎಚ್ಚರಿಸಿದ್ದಾರೆ.

Sri Raghav

Admin