ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ದುಪ್ಪಟ್ಟು ಅನುದಾನ
ಬೆಂಗಳೂರು, ಮಾ.15- ರಾಜ್ಯದ ಪ್ರಮುಖ ರಸ್ತೆ ಜಾಲವನ್ನು ಅಭಿವೃದ್ಧಿಪಡಿಸಲು ಕೆಶಿಪ್-111 ಯೋಜನೆಯಡಿ ಪ್ರಸಕ್ತ ವರ್ಷ ಹೊಸ ರಸ್ತೆಗಳ ನಿರ್ಮಾಣಕ್ಕೆ 5310 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಎಡಿಬಿ ಎರಡನೆ ಲೋನ್ ಯೋಜನೆಯಡಿ 418 ಕಿಲೋ ಮೀಟರ್ ಉದ್ದದ ರಸ್ತೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ 5310 ಕೋಟಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಯವ್ಯಯದಲ್ಲಿ ತಿಳಿಸಿದ್ದಾರೆ.
ಕೊಳ್ಳೇಗಾಲ-ಹನೂರು ರಸ್ತೆ 23.8 ಕಿಮೀ, ಚಿಂತಾಮಣಿ-ಆಂಧ್ರ ಪ್ರದೇಶ ಗಡಿ ರಸ್ತೆ 39.8ಕಿಮೀ, ಬೆಂಗಳೂರು-ಮಾಗಡಿ ರಾಷ್ಟ್ರೀಯ ಹೆದ್ದಾರಿ 50.7ಕಿಮೀ, ಹುಲಿಯೂರು ದುರ್ಗ-ನಾಗಮಂಗಲ-ಕೆಆರ್ ಪೇಟೆ 166ಕಿಮೀ ಹಾಗೂ ಗದಗ-ಹೊನ್ನಾಳಿ 138.2ಕಿಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು. ಬೆಂಗಳೂರು ನಗರದ ವಾಹನದಟ್ಟಣೆ ಕಡಿಮೆ ಮಾಡಲು ಕೆಆರ್ಡಿಸಿಎಲ್ ಯೋಜನೆಯಡಿ 1455ಕೋಟಿ ರೂ. ಅಂದಾಜು ಮೊತ್ತದಲ್ಲಿ 150ಕಿಲೋ ಮೀಟರ್ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದರು.
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಹೊಸಕೋಟೆ-ಬೂದಿಗೆರೆ-ಮೈಲೇನಹಳ್ಳಿ, ನೆಲಮಂಗಲ-ಮಧುರೆ-ಬ್ಯಾತ, ಆನೇಕಲ್-ಅತ್ತಿಬೆಲೆ-ಸರ್ಜಾಪುರ-ವರ್ತೂರು-ವೈಟ್ಫೀಲ್ಡ್-ಹೊಸಕೋಟೆ ರಸ್ತೆ, ಹಾರೋಹಳ್ಳಿ-ಉರುಗನದೊಡ್ಡಿ-ಕೆಐಎಡಿಬಿ ಕೈಗಾರಿಕಾ ಪ್ರದೇಶ-ಜಿಗಣಿ- ಆನೇಕಲ್ ರಸ್ತೆ ಇದರ ವ್ಯಾಪ್ತಿಗೆ ಸೇರಿವೆ. ಮೈಸೂರು ನಗರದ ಸುತ್ತಮುತ್ತಲಿನ 22ಕಿಮೀ ಉದ್ದದ ರಸ್ತೆ ಅಭಿವೃದ್ಧಿಗೆ 117 ಕೋಟಿ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಂಗಳೂರು-ಅತ್ರಡಿಯ 2.5 ಉದ್ದದ ರಸ್ತೆಗೆ 50 ಕೋಟಿ, ಕೊಡಗು ಜಿಲ್ಲೆಗೆ 50 ಕೋಟಿ ವಿಶೇಷ ಪ್ಯಾಕೇಜ್, ಕಾರವಾರ ಬಂದರಿನಲ್ಲಿ ಆಮದು-ರಫ್ತು ಚಟುವಟಿಕೆಗಳನ್ನು ಉತ್ತೇಜಿಸಲು 17ಕಿಮೀ ಆಳದ 5 ಹಡಗುಗಳ ನಿಲುಗಡೆಗೆ 1508 ಮೀಟರ್ ಉದ್ದದ ದಕ್ಕೆಯನ್ನು ನಿರ್ಮಾಣ ಮಾಡಲಾಗುವುದು. ಪ್ರಸಕ್ತ ವರ್ಷ ಲೋಕೋಪಯೋಗಿ, ಬಂದರು, ಒಳನಾಡು, ಜಲಸಾರಿಗೆ ಇಲಾಖೆಗೆ 8559 ಕೋಟಿ ಒದಗಿಸಲಾಗಿದ್ದು, ರಸ್ತೆಗಳ ಸಂಪರ್ಕ ಜಾಲ ಸರ್ಕಾರದ ಪ್ರಮುಖ ಆದ್ಯತೆ ಎಂದು ತಿಳಿಸಿದ್ದಾರೆ.
[ ರಾಜ್ಯ ಬಜೆಟ್ 2017-18 (Live Updates) ]
< Eesanje News 24/7 ನ್ಯೂಸ್ ಆ್ಯಪ್ >