ರಾಜ್ಯಪಾಲರ ವಿರುದ್ದ ತಿರುಗಿಬಿದ್ದ ಶಶಿಕಲಾ, ಸರ್ಕಾರ ರಚನೆಗೆ ಆಹ್ವಾನಿಸಲು ರಾವ್‍ಗೆ ಗಡುವು

Sasikala-natarajan-0002

ಚೆನ್ನೈ, ಫೆ.9– ತಮಿಳುನಾಡು ಮುಖ್ಯಮಂತ್ರಿ ಹುದ್ದೆಗೇರಲೇಬೇಕೆಂದು ಪಣತೊಟ್ಟಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಸರ್ಕಾರ ರಚಿಸಲು ಸಂಜೆಯೊಳಗೆ ತಮಗೆ ಅಹ್ವಾನ ನೀಡದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರಿಗೇ ಬೆದರಿಕೆ ಹಾಕಿದ್ದಾರೆ. ಈ ಬೆಳವಣಿಗೆಯಿಂದಾಗಿ ರಾಜ್ಯದಲ್ಲಿ ಉದ್ವಿಗ್ನಸ್ಥಿತಿ ತಲೆದೋರುವ ಆತಂಕವೂ ಎದುರಾಗಿದೆ.   ರಾಜಧಾನಿ ಚೆನ್ನೈನಲ್ಲಿ ಇಂದು ಬೆಳಗ್ಗೆ ಹೇಳಿಕೆ ನೀಡಿರುವ ಶಶಿಕಲಾ ಇಂದು ಸಂಜೆಯೊಳಗೆ ಸರ್ಕಾರ ರಚಿಸಲು ತಮ್ಮನ್ನು ಆಹ್ವಾನಿಸಬೇಕು. ಇಲ್ಲದಿದ್ದರೆ ನಿರಶನ ಸೇರಿದಂತೆ ಹೊಸ ರೀತಿಯ ಪ್ರತಿಭಟನೆ ನಡೆಸುವುದಾಗಿ ರಾಜಪಾಲರಿಗೆ ಗಡುವು ನೀಡಿದ್ದಾರೆ.

ಪಕ್ಷವನ್ನು ಒಡೆಯುವುದಕ್ಕಾಗಿ ತಾವು ಮುಖ್ಯಮಂತ್ರಿಯಾಗುವುದಕ್ಕೆ ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆ ಎಂದು ರಾವ್ ಮೇಲೆ ಚಿನ್ನಮ್ಮ ಇಂದು ಮತ್ತೆ ಕಿಡಿಕಾರಿದರು.   ರಾವ್ ಅವರ ವಿಳಂಬ ನೀತಿಯಿಂದ ಗೊಂದಲ ಸೃಷ್ಟಿಯಾಗಿದೆ. ತಮಿಳುನಾಡಿನಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಅವರು ಆರೋಪಿಸಿದ್ದಾರೆ.   ಇನ್ನೊಂದೆಡೆ ತಮ್ಮ ವಿರುದ್ಧ ಬಂಡಾಯವೆದ್ದಿರುವ ಉಸ್ತುವಾರಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಬಲ ದಿನೇ ದಿನೆ ಹೆಚ್ಚಾಗುತ್ತಿರುವುದು ಚಿನ್ನಮ್ಮ ಅಸಹನೆಯ ಕ್ರೋಧವನ್ನು ಇನ್ನಷ್ಟು ಹೆಚ್ಚಿಸಿದೆ.   ಈ ಎಲ್ಲ ಬೆಳವಣಿಗೆಗಳಿಂದ ಎಐಎಡಿಎಂಕೆ ಪಕ್ಷವು ವಿಭಜನೆಯತ್ತ ಸಾಗುತ್ತಿದ್ದು, ಎರಡು ಬಣಗಳ ನಡುವೆ ಪ್ರಾಬಲ್ಯ ಸಾಧನೆಯು ಪ್ರತಿಷ್ಠೆಯ ವಿಷಯವಾಗಿದೆ.  ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಯಾಗುತ್ತಿದ್ದು, ರಾಜ್ಯಪಾಲರು ಕಾದು ನೋಡುವ ತಂತ್ರ ಮುಂದುವರಿಸಿದ್ದಾರೆ.

ಕೃಷಿ ಸಚಿವ ನಾಪತ್ತೆ :

ಇದೇ ವೇಳೆ ಕೃಷಿ ಸಚಿವ ದುರೈ ಕಣ್ಣು ದಿಢೀರ್ ನಾಪತ್ತೆಯಾದ ಪ್ರಕರಣ ಮತ್ತಷ್ಟು ಆತಂಕ ಮತ್ತು ಗೊಂದಲಕ್ಕೆ ಕಾರಣವಾಗಿದೆ.  ಕೃಷಿ ಸಚಿವರು ನಾಪತ್ತೆಯಾಗಿದ್ದಾರೆ ಎಂದು ತಂಜಾವೂರು  ಜಿಲ್ಲೆಯ ಪಾಪನಾಶನ್ ಪೊಲೀಸ್ ಠಾಣೆಗೆ ಮಗಲಿಂಗಂ ಎಂಬುವರು ದೂರು ನೀಡಿದ್ದಾರೆ.   ಶಶಿಕಲಾ ಮತ್ತು ಅವರ ಬೆಂಬಲಿಗರು ಕೆಲವು ಸಚಿವರನ್ನು ದಿಗ್ಬಂಧನದಲ್ಲಿಟ್ಟಿದ್ದಾರೆಂಬ ಆರೋಪಗಳ ನಡುವೆಯೇ ದುರೈಕಣ್ಣು ಕಣ್ಮರೆಯಾಗಿರುವುದು ಉಹಾಪೋಹಾಗಳಿಗೆ ಎಡೆ ಮಾಡಿಕೊಟ್ಟಿದೆ.

ಡಿಎಂಕೆ ಕಾದು ನೋಡುವ ತಂತ್ರ :

ಇದೇ ವೇಳೆ ಸದ್ಯದ ಪರಿಸ್ಥಿತಿಯಲ್ಲಿ ಶಶಿಕಲಾ ಅಥವಾ ಪನ್ನೀರ್ ಬಣಕ್ಕೆ ಯಾವುದೇ ಬೆಂಬಲ ನೀಡದಿರಲು ವಿರೋಧಪಕ್ಷವಾದ ಡಿಎಂಕೆ ನಿರ್ಧರಿಸಿದೆ. ಈ ಕುರಿತು ಚೆನ್ನೈನಲ್ಲಿ ಹೇಳಿಕೆ ನೀಡಿರುವ ಡಿಎಂಕೆ ಸಂಸದೆ ಹಾಗೂ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಪುತ್ರಿ ಕನಿಮೋಳಿ ಮುಂದಿನ ಬೆಳೆವಣಿಗೆಯನ್ನು ಕಾದು ನೋಡಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin