ರಾಜ್ಯಪಾಲ ವಿ.ಆರ್.ವಾಲಗೆ ಉಪರಾಷ್ಟ್ರಪತಿ ಹುದ್ದೆ…?

Spread the love

Vajubhai-wala

ಬೆಂಗಳೂರು,ಮಾ.24-ರಾಜ್ಯಪಾಲ ವಿ.ಆರ್.ವಾಲ ಅವರಿಗೆ ಉಪರಾಷ್ಟ್ರಪತಿ ಹುದ್ದೆ ದೊರೆಯಲಿದೆಯೇ…? ರಾಜಕೀಯ ಪಡೆಸಾಲೆಯಲ್ಲಿ ಇಂಥದೊಂದು ವದ್ದಂತಿ ಹಬ್ಬಿದ್ದು ವಜುಭಾಯಿ ವಾಲ ಅವರನ್ನು ಉಪರಾಷ್ಟ್ರಪತಿ ಮಾಡಲು ಕೇಂದ್ರ ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.   ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ವಿ.ಆರ್.ವಾಲ ಅವರನ್ನು ಉಪರಾಷ್ಟ್ರಪತಿ ಹುದ್ದೆಗೆ ತರಲು ಗಂಭೀರ ಚಿಂತನೆ ನಡೆದಿದೆ ಎನ್ನಲಾಗಿದೆ.   ಹಾಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಜುಲೈ ತಿಂಗಳ ಅಂತ್ಯಕ್ಕೆ ನಿವೃತ್ತಿಯಾಗಲಿದ್ದಾರೆ. ತೆರವಾಗಲಿರುವ ಈ ಸ್ಥಾನಕ್ಕೆ ತಮ್ಮ ತವರು ರಾಜ್ಯದವರನ್ನೇ ಕೂರಿಸಬೇಕೆಂಬ ಹೆಬ್ಬಯಕೆ ಮೋದಿ ಮತ್ತು ಅಮಿತ್ ಷಾ ಜೋಡಿಯದ್ದು.

ಗುಜರಾತ್‍ನಲ್ಲಿ ನರೇಂದ್ರಮೋದಿ ಮುಖ್ಯಮಂತ್ರಿಯಾಗಿದ್ದ ವೇಳೆ ಅವರ ಯಶಸ್ಸಿನ ಪಾಲು ವಾಲ ಅವರಿಗೂ ಸಲ್ಲುತ್ತದೆ. ಹಣಕಾಸು ಖಾತೆಯನ್ನು ಹೊಂದಿದ್ದ ಅವರು ಒಟ್ಟು 18 ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದಿದ್ದಾರೆ. ಅಲ್ಲದೆ ವಿಧಾನಸಭೆಯ ಸ್ಪೀಕರ್ ಆಗಿ ಪಕ್ಷದ ವಿವಿಧ ಸ್ಥರಗಳ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.   ಅಲ್ಲದೆ ಆರ್‍ಎಸ್‍ಎಸ್ ಜೊತೆಯೂ ಉತ್ತಮ ಒಡನಾಡಿಯಾಗಿರುವ ವಾಲ ಉಪರಾಷ್ಟ್ರಪತಿ ಹುದ್ದೆಗೆ ಸಹಜವಾಗಿ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಕರ್ನಾಟಕದಲ್ಲಿ ಪ್ರಸ್ತುತ ರಾಜ್ಯಪಾಲರಾಗಿರುವ ಅವರ ಮೇಲೆ ಈವರೆಗೂ ಯಾವುದೇ ರೀತಿಯ ಗುರುತರವಾದ ಆಪಾದನೆಗಳು ಕೇಳಿಬಂದಿಲ್ಲ.

ಅಲ್ಲದೆ ಕಾಂಗ್ರೆಸ್ ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿದವರಲ್ಲ. ಹಿಂದಿನ ರಾಜ್ಯಪಾಲ ಭಾರದ್ವಾಜ್ ಅವರಿಗೆ ಹೋಲಿಸಿದರೆ ವಾಲ ವಿವಾದರಹಿತ ವ್ಯಕ್ತಿ.ಹೀಗಾಗಿ ಸಹಜವಾಗಿ ಅವರಿಗೆ ಉಪರಾಷ್ಟ್ರಪತಿ ಹುದ್ದೆ ಹೊಂದುವ ಸಂಭವವಿದೆ ಎನ್ನಲಾಗಿದ.   ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ಭೀಷ್ಮ ಪಿತಾಮಹ ಎಲ್.ಕೆ.ಅಡ್ವಾಣಿ ಅಭ್ಯರ್ಥಿಯಾದರೆ ವಾಲ ಉಪರಾಷ್ಟ್ರಪತಿ ಹುದ್ದೆ ಪಡೆಯುವುದು ಬಹುತೇಕ ಖಚಿತ.   ಕೇಂದ್ರದಲ್ಲಿ ಬಿಜೆಪಿ ಆಡಳಿತವಿರುವುದು ಹಾಗೂ ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಗೋವಾ, ಮಹಾರಾಷ್ಟ್ರ , ಛತ್ತೀಸ್‍ಗಢ್, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ.

ಹಾಲಿ ರಾಷ್ಟಪತಿಯಾಗಿರುವ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತೊಂದು ಅವಧಿಗೆ ಮುಂದುವರೆಯುವ ಸಾಧ್ಯತೆಗಳಿಲ್ಲ. ಕಾಂಗ್ರೆಸ್ ಅನೇಕ ರಾಜ್ಯಗಳಲ್ಲಿ ಪರಾಭವಗೊಂಡಿರುವುದು ಹಾಗೂ ವಯಸ್ಸಿನ ಕಾರಣ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಾರೆ ಎನ್ನಲಾಗಿದೆ.   ಮುಂದಿನ ತಿಂಗಳು ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗುವ ಸಂಭವವಿದ್ದು, ತದನಂತರ ಇದರ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin