ರಾಜ್ಯಸರ್ಕಾರದ ಬಗ್ಗೆ ಮಾತನಾಡಲ್ಲ, ನನ್ನ ಆಕ್ಷೇಪಗಳೇನಿದ್ದರೂ ರಾಷ್ಟ್ರೀಯ ನಾಯಕರ ಜತೆ : ಎಸ್.ಎಂ.ಕೃಷ್ಣ
ಬೆಂಗಳೂರು, ಜ.29-ರಾಜ್ಯ ರಾಜಕಾರಣದ ಬಗ್ಗೆ ನಾನು ಮಾತನಾಡುವುದಿಲ್ಲ. ಅವರ ಪಾಡಿಗೆ ಅವರು ಕೆಲಸ ಮಾಡುತ್ತಿದ್ದಾರೆ. ನನ್ನ ಪಾಡಿಗೆ ನಾನು ಮನೆಯಲ್ಲಿದ್ದೇನೆ. ನನ್ನ ಆಕ್ಷೇಪಗಳೇನಿದ್ದರೂ ರಾಷ್ಟ್ರೀಯ ನಾಯಕರ ಜತೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸ್ಪಷ್ಟಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೇಳಿ ಬಂದ ನಾನಾ ರೀತಿಯ ಪ್ರಶ್ನೆಗಳಿಗೆ ನಾಜೂಕಾಗಿ ಉತ್ತರಿಸಿದ ಅವರು, ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ನಿಮ್ಮನ್ನು ನಿರ್ಲಕ್ಷಿಸಿದ್ದಾರೆಯೇ ಎಂಬ ಪ್ರಶ್ನೆಗೆ, ನಾನು ಉಪಾಧ್ಯಕ್ಷರ ಜತೆ ಮಾತನಾಡುವುದಿಲ್ಲ, ಅಧ್ಯಕ್ಷರ ಜತೆ ಮಾತ್ರ ಮಾತನಾಡುತ್ತೇನೆ ಎಂದರು. ನನ್ನ ಹಿರಿತನಕ್ಕೆ ತಕ್ಕಂತೆ ಮಾಡುತ್ತೇನೆ ಎಂದ ಅವರು, ರಾಷ್ಟ್ರೀಯ ಪಕ್ಷ ಎಂದ ಮೇಲೆ ಅಲ್ಲಿರುವ ಉಪಾಧ್ಯಕ್ಷರು, ಕಾರ್ಯಾಧ್ಯಕ್ಷರ ಜತೆ ಸಂವಾದ ಬಯಸುವುದಿಲ್ಲ. ನೇರವಾಗಿ ರಾಷ್ಟ್ರೀಯ ಅಧ್ಯಕ್ಷರ ಜತೆ ಮಾತನಾಡಲು ಬಯಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸಚಿವ ಸ್ಥಾನದಿಂದ ತೆಗೆದು ಹಾಕಿದರು:
2012ರಲ್ಲಿ ವಿದೇಶಾಂಗ ಸಚಿವರ ಸ್ಥಾನದಿಂದ ನನ್ನನ್ನು ತೆಗೆದುಹಾಕಿದರು. ಅನಂತರ ಬಂದವರು ಏನು ಮಾಡಿದರೋ ಗೊತ್ತಿಲ್ಲ. ಆ ಸಂದರ್ಭದಲ್ಲಿ ಸೋನಿಯಾಗಾಂಧಿಯವರನ್ನು ಭೇಟಿ ಮಾಡಿದ್ದೆ. ನಿಮಗೆ ರಾಜ್ಯಸಭಾ ಸದಸ್ಯರ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರೆ, ನಾನು ಹೊರಗೆ ಬಂದು ನನಗೆ ರಾಜ್ಯಸಭಾ ಸದಸ್ಯನ ಸ್ಥಾನದಲ್ಲಿ ಆಸಕ್ತಿ ಇಲ್ಲ ಎಂದು ಹೇಳಿ ಬಿಡುತ್ತಿದ್ದೆ. ಆದರೆ ಬೆಂಗಳೂರಿಗೆ ಬಂದ ಮೇಲೆ ಆ ಸ್ಥಾನ ಕೊಡುವುದಿಲ್ಲ ಎಂಬ ಸಂದೇಶ ಬಂತು. ಇದೆಲ್ಲ ಮನಸ್ಥಿತಿ ಮೇಲೆ ಆಘಾತ ಉಂಟು ಮಾಡುತ್ತದೆ. ಹಿರಿತನಕ್ಕೆ ಕೊಡುವ ಬೆಲೆ ಇದೆಯೇ ಎಂದು ಪ್ರಶ್ನಿಸಿದರು. ನಾನು ಆತ್ಮಗೌರವ, ಸ್ವಾಭಿಮಾನ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿರುವ ಮೌಲ್ಯಗಳು. ಎಲ್ಲಿ ಅದಕ್ಕೆ ಅವಕಾಶವಿಲ್ಲವೋ ಅಲ್ಲಿ ನಾನಿರುವುದಿಲ್ಲ. ಇಂದಿರಾಗಾಂಧಿ, ರಾಜೀವ್ಗಾಂಧಿ, ಸೋನಿಯಾ ಗಾಂಧಿಯವರನ್ನು ಸೇರಿ 3 ತಲೆಮಾರನ್ನು ನೋಡಿದ್ದೇನೆ ಎಂದು ಹೇಳಿದರು.
ನನಗೇನು ತಲೆ ಕೆಟ್ಟಿದೆಯೇ:
ಬಿಜೆಪಿ ಸೇರಿ ಉಪರಾಷ್ಟ್ರಪತಿಯಾಗಲು ಎಸ್.ಎಂ.ಕೃಷ್ಣ ಮನಸ್ಸು ಮಾಡಿದ್ದಾರೆ ಎಂಬ ವದಂತಿಗೆ ಉತ್ತರ ನೀಡಿದ ಅವರು, ನನಗೇನು ತಲೆ ಕೆಟ್ಟಿದೆಯೇ ಎಂದು ಪ್ರತಿಕ್ರಿಯಿಸಿದರು.
ರಾಜಕೀಯ ಸಂಬಂಧಿಸಿದಂತೆ ಕೆಲವರು ಆ ಕ್ಷಣಕ್ಕೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾನು ಟ್ಯೂಬ್ಲೈಟ್ ನಿಧಾನಕ್ಕೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಇದಕ್ಕೆಲ್ಲ ಉತ್ತರ ನೀಡಲು ವಿಧಾನಸಭೆ ಅಧಿವೇಶನ ಅಲ್ಲ. ಕೆಲ ಸಮಯ ಯೋಚಿಸಿ ನನ್ನ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದರು.
ರಾಜ್ಯಸರ್ಕಾರದ ಬಗ್ಗೆ ಮಾತನಾಡಲ್ಲ:
ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಗೆ ಕರೆ ತಂದಿದ್ದು ನಾನು ಎಂದು ಕೆಲವರು ಹೇಳಿದ್ದಾರೆ. ಅಂತಹ ದೊಡ್ಡ ಮಾತು ನಾನು ಹೇಳುವುದಿಲ್ಲ.ಆದರೆ ಅವರನ್ನು ಪಕ್ಷಕ್ಕೆ ಕರೆ ತರುವ ಪ್ರಯತ್ನ ನಡೆಸುವವರಲ್ಲಿ ನಾನೂ ಒಬ್ಬ ಎಂದರು. ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾಗ ಇವರೆಲ್ಲ ಬಂದಿದ್ದರು. ರಾಜಭವನದ ಅತಿಥಿಗಳಾಗಿದ್ದರು. ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದರು. ಅವರು ಬಂದರೆ ಕಾಂಗ್ರೆಸ್ಗೆ ಶಕ್ತಿ ಬರುತ್ತದೆ ಎಂದು ಸೋನಿಯಾ ಅವರಿಗೆ ಹೇಳಿದ್ದು ನಿಜ ಎಂದರು. ನಾನು ರಾಜ್ಯ ಸರ್ಕಾರ, ರಾಜ್ಯ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವುದಿಲ್ಲ. ಅವರ ಪಾಡಿಗೆ ಅವರು ಕೆಲಸ ಮಾಡುತ್ತಿದ್ದಾರೆ. ನನ್ನ ಪಾಡಿಗೆ ನಾನು ಮನೆಯಲ್ಲಿದ್ದೇನೆ.
ರಾಜ್ಯ ಸರ್ಕಾರ ಮತ್ತು ನನ್ನ ನಡುವೆ ಯಾವುದೇ ಹಗ್ಗಜಗ್ಗಾಟ ಇಲ್ಲ. ಒಂದು ವರ್ಷ 3 ತಿಂಗಳು ಚುನಾವಣೆ ಇದ್ದಾಗ ಪಕ್ಷ ಬಿಡುವ ನಿರ್ಧಾರದಿಂದ ಕಾಂಗ್ರೆಸ್ಗೆ ಹಾನಿಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಇದರ ಪರಿಣಾಮಗಳ ಬಗ್ಗೆ ನಾನು ಹೇಳಲು ಬಯಸುವುದಿಲ್ಲ. ಮಾಧ್ಯಮಗಳೇ ವಿಶ್ಲೇಷಣೆ ಮಾಡಲಿ. ನಾನು ಪಕ್ಷಕ್ಕೆ ಹಾನಿ ಮಾಡಲು ಇಚ್ಛಿಸಲ್ಲ. ಪಕ್ಷ ತೊರೆಯುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಅರ್ಥಗರ್ಭಿತವಾಗಿ ಉತ್ತರಿಸಿ, ನಾನು ಒಕ್ಕಲಿಗ ನಾಯಕ ಎಂದು ಪಕ್ಷದಲ್ಲಿ ಪಾಲು ಕೇಳುತ್ತಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದೇನೆ. ನಾನು ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿದ್ದು ನಿಜ ಎಂದರು. ಬಿಜೆಪಿ ಸೇರುವ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳಿಗೆ ನೇರ ಉತ್ತರ ನೀಡಲು ನಿರಾಕರಿಸಿದರು.
ನಾನು ಕಾಲದ ಮೂಸೆಯಲ್ಲಿ ಬೆಳೆದು ಬಂದ ನಾಯಕ ಜನಸಾಮಾನ್ಯರ ನಡುವೆ ಇರುವವನು. ಸಂಘರ್ಷಮಯ ಜೀವನ ಮಾಡಿದ್ದೇನೆ. ರಾಜಕೀಯ ನಿವೃತ್ತಿಯಾಗುವುದಿಲ್ಲ. ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂದು ಯೋಚಿಸಿ ನಿರ್ಧರಿಸುತ್ತೇನೆ. ಸುಮ್ಮನೆ ಕೂರುವುದಿಲ್ಲ ಎಂದು ಮತ್ತೆ ಮತ್ತೆ ಸ್ಪಷ್ಟಪಡಿಸಿದರು. ಪಕ್ಷ ತೊರೆಯುವ ಬಗ್ಗೆ ನಾನು ಯಾರನ್ನೂ ಸಂಪರ್ಕಿಸಿಲ್ಲ. ನಾನು ಪತ್ನಿಯ ಸಲಹೆ ಮಾತ್ರ ಪಡೆದಿದ್ದೇನೆ. ನಾನು ಕಾಂಗ್ರೆಸ್ ತೊರೆಯುವ ಸಂದರ್ಭದಲ್ಲಿ ಸರ್ಕಾರಕ್ಕೆ ಹಾನಿಯಾಗುತ್ತದೆ ಎಂದು ಭಾವಿಸುವುದಿಲ್ಲ. ನನ್ನ ಜತೆ ಯಾರಿಗೂ ಬನ್ನಿ ಎಂದು ಹೇಳಿಲ್ಲ ಎಂದರು.
< Eesanje News 24/7 ನ್ಯೂಸ್ ಆ್ಯಪ್ >