ರಾಜ್ಯಾದ್ಯಂತ ಮತ್ತಷ್ಟು ಹೆಚ್ಚಾಗಲಿದೆ ಮೈಕೊರೆವ ಚಳಿ
ಬೆಂಗಳೂರು, ಡಿ.31-ರಾಜ್ಯಾದ್ಯಂತ ಚಳಿಯ ಪ್ರಮಾಣ ಹೆಚ್ಚಾಗಿದ್ದು , ಉತ್ತರ ಭಾಗದಿಂದ ಶೀತಗಾಳಿ ಬೀಸುವುದರಿಂದ ಮೈ ಕೊರೆಯುವ ಚಳಿ ಇನ್ನಷ್ಟು ತೀವ್ರವಾಗಲಿದೆ. ಮಕರ ಸಂಕ್ರಾಂತಿ ಹಬ್ಬದವರೆಗೂ ಚಳಿಯ ಪ್ರಮಾಣ ತೀವ್ರವಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ಈ ಸಂಜೆಗೆ ತಿಳಿಸಿದರು. ರಾಜ್ಯದಲ್ಲಿ ಒಟ್ಟಾರೆ ವಾಡಿಕೆಗಿಂತ ಕನಿಷ್ಟ ತಾಪಮಾನ 1.5 ಡಿಗ್ರಿ ಸೆಲ್ಷಿಯಸ್ನಿಂದ 5 ಡಿಗ್ರಿ ಸೆಲ್ಷಿಯಸ್ವರೆಗೆ ಕಡಿಮೆಯಾಗಿದೆ. ಎಲ್ಲ 30 ಜಿಲ್ಲೆಗಳಲ್ಲೂ ಕನಿಷ್ಟ ತಾಪಮಾನ 15 ಡಿಗ್ರಿ ಸೆಲ್ಷಿಯಸ್ಗಿಂತ ಕಡಿಮೆಯಿದೆ. ಅದರಲ್ಲೂ ಬೀದರ್, ವಿಜಯಪುರ, ಕಲ್ಬುರ್ಗಿ, ಕೊಡುಗು, ಕೊಪ್ಪಳ, ಚಿಕ್ಕಮಗಳೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಕನಿಷ್ಟ ತಾಪಮಾನ ಸರಾಸರಿ 7ರಿಂದ 8 ಡಿಗ್ರಿ ಸೆಲ್ಷಿಯಸ್ಗೆ ಇಳಿದಿದೆ. ಇದರಿಂದ ಚಳಿಯ ಪ್ರಮಾಣ ತೀವ್ರವಾಗಲಿದೆ.
ಇತರೆ ಜಿಲ್ಲೆಗಳನ್ನು 10ರಿಂದ 13 ಡಿಗ್ರಿ ಸೆಲ್ಷಿಯಸ್ನಷ್ಟು ಕನಿಷ್ಟ ತಾಪಮಾನ ದಾಖಲಾಗುತ್ತಿದೆ. ಜನವರಿಯಲ್ಲಿ ಕನಿಷ್ಟ ತಾಪಮಾನ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಚಳಿ ಇನ್ನಷ್ಟು ತೀವ್ರಗೊಳ್ಳುವ ಸಂಭವವೇ ಹೆಚ್ಚಾಗಿದೆ ಎಂದು ಅವರು ಹೇಳಿದರು. ಮೋಡರಹಿತ ವಾತಾವರಣ ಇರುವುದರಿಂದ ಹಗಲಿನ ವೇಳೆ ಬಿಸಿಲು ಕೂಡ ಹೆಚ್ಚಾಗಿರಲಿದೆ. ಆದರೆ ಸಂಜೆ ಮತ್ತು ಬೆಳಗಿನ ಜಾವ ಮಂಜುಕವಿದ ವಾತಾವರಣ ಹಲವು ಕಡೆ ಹೆಚ್ಚಾಗಿ ಕಂಡುಬರಲಿದೆ.
ಮಕರ ಸಂಕ್ರಾಂತಿಯವರೆಗೂ ಬಹುತೇಕ ಇದೇ ಪರಿಸ್ಥಿತಿ ಮುಂದುವರೆಯಲಿದೆ. ಮೋಡ ಕವಿದ ವಾತಾವರಣವಿದ್ದಾಗ ಕನಿಷ್ಠ ತಾಪಮಾನದಲ್ಲಿ ಏರಿಕೆ ಕಂಡುಬರುತ್ತದೆ.
ಜನವರಿಯಲ್ಲಿ ಉತ್ತರದಿಂದ ಶೀತ ಗಾಳಿ ಬೀಸುವುದರಿಂದಲೂ ಚಳಿ ಹೆಚ್ಚಾಗಲಿದೆ. ರಾಜಧಾನಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತಿತರ ಜಿಲ್ಲೆಗಳಲ್ಲೂ ಚಳಿ ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿದೆ ಎಂದು ಅವರು ಹೇಳಿದರು.