ರಾಜ್ಯ ಕಂಡ ಅತ್ಯುನ್ನತ ಸಾಮಾಜಿಕ ಪರಿವರ್ತಕ ಅರಸು

arasu

ಹಾಸನ, ಆ.31- ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಈ ರಾಜ್ಯ ಕಂಡ ಅತ್ಯುನ್ನತ ಸಾಮಾಜಿಕ ಪರಿವರ್ತಕರಲ್ಲೊಬ್ಬರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅಭಿಪ್ರಾಯಪಟ್ಟಿದ್ದಾರೆ.ಡಿ.ದೇವರಾಜ ಅರಸು ಅವರ 101ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗದ ಜನರಿಗೆ ಇಂದು ಬಂದಿರುವ ಶಕ್ತಿಗೆ ದೇವರಾಜ ಅರಸುರವರ ಸಾಮಾಜಿಕ ಸುಧಾರಣೆಗಳೇ ಕಾರಣ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರವು ಅರಸುರವರ ಚಿಂತನೆಗಳ ಅಡಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ದೀನ ದಲಿತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದ ಸಚಿವ ಎ.ಮಂಜು, ದೇವರಾಜ ಅರಸು ರವರು ಜಿಲ್ಲೆಯ ಅರಕಲಗೂಡು ಮತ್ತು ಹೊಳೆನರಸೀಪುರ ತಾಲ್ಲೂಕುಗಳ ನೀರಾವರಿ ಯೋಜನೆಗಳಿಗೂ ಕೊಡುಗೆÉ ನೀಡಿದ್ದಾರೆ ಎಂದರು.ಶಾಸಕ ಹೆಚ್.ಎಸ್.ಪ್ರಕಾಶ್ ಮಾತನಾಡಿ, ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಧ್ವನಿಯಾಗಿದ್ದರು. ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣ ಮಾಡಿದ್ದು, ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಿದರು. ವಿದ್ಯಾರ್ಥಿನಿಲಯ ಪ್ರಾರಂಭ, ಉಳುವ ಶ್ರಮಜೀವಿಗಳಿಗೆ ಭೂಮಿಯನ್ನು ನೀಡಿದ ಮಹಾನ್ ಪುರುಷ ಎಂದರು.

ಜಿಪಂ ಅಧ್ಯಕ್ಷೆ ಶ್ವೇತ ದೇವರಾಜ್ ಮಾತನಾಡಿ, ಸಣ್ಣಹಳ್ಳಿಯಲ್ಲಿ ಬಡತನದಲ್ಲಿ ಹುಟ್ಟಿ ಬೆಳೆದ ಡಿ.ದೇವರಾಜ ಅರಸು ಬದುಕಿನುದ್ದಕ್ಕೂ ಬಡವರ ಉದ್ಧಾರಕ್ಕಾಗಿ ಹತ್ತಾರು ಕಾರ್ಯಕ್ರಮ ಜಾರಿಗೆ ತಂದು ಎಲ್ಲರ ಮನಸ್ಸಿನಲ್ಲಿ ಉಳಿದುಹೋಗಿದ್ದಾರೆ ಎಂದರು.ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಮಾತನಾಡಿ, ಸಾಮಾಜಿಕ ಸಮಾನತೆಗಾಗಿ ಅರಸುರವರ ಪರಿಶ್ರಮ ಅಪಾರ, ಶ್ರಮಿಕರ ಪರವಾದ ಕಳಕಳಿಯಿಂದ ಲಕ್ಷಾಂತರ ಜನರಿಗೆ ಜೀವನಾಶ್ರಯ ಕಲ್ಪಿಸಿದ್ದಾರೆ ಎಂದು ಹೇಳಿದರು.ಎವಿಕೆ ಕಾಲೇಜಿನ ಉಪನ್ಯಾಸಕ ಪ್ರೊ .ಮಲ್ಲೇಶ್‍ಗೌಡ ಅವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಬಾಲ್ಯದ ಬದುಕು, ಸಾಧನೆ, ಚಿಂತನೆ ಕೈಗೊಂಡ ನಿರ್ಧಾರಗಳು ಮತ್ತು ಅದರಿಂದಾದ ಪರಿಣಾಮಗಳು ಹಾಗೂ ಸಾಮಾಜಿಕ ಬದಲಾವಣೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿರುವ ಬಿ.ಟಿ.ಮಾನವ ಅವರನ್ನು ಸನ್ಮಾನಿಸಲಾಯಿತು.  ನಗರಸಭೆ ಅಧ್ಯಕ್ಷ ಡಾಹೆಚ್.ಎಸ್.ಅನಿಲ್‍ಕುಮಾರ್, ಜಿಪಂ ಉಪಾಧ್ಯಕ್ಷ ಶ್ರೀನಿವಾಸ್, ತಾಪಂಅಧ್ಯಕ್ಷ ಸತೀಶ್, ಜಿಲ್ಲಾಧಿಕಾರಿ ವಿ. ಚೈತ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ, ಬೆಂಗಳೂರು ಡಿ.ದೇವರಾಜ ಅರಸು ಜನ್ಮ ಶತಮಾನೋತ್ಸವ ಜಿಲ್ಲಾ ಮಟ್ಟದ ಸಮಿತಿ ಸಮಾಜ ಸೇವಕರು ಹಾಗೂ ಜಿಲ್ಲಾ ಸಂಚಾಲಕ ಜಿ.ದಯಾನಂದ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಗೂ ಜಿಲ್ಲಾ ಸಮಿತಿ ಸದಸ್ಯ ಕೆ.ಬಿ.ನಿಂಗರಾಜಪ್ಪ ಹಾಗೂ ಇತರರು ಸಮಾರಂಭದಲ್ಲಿ ಹಾಜರಿದ್ದರು.

► Follow us on –  Facebook / Twitter  / Google+

Sri Raghav

Admin