ರಾಜ್ಯ ಯುವ ಕಾಂಗ್ರೆಸ್ ನಲ್ಲಿ ಭಿನ್ನಮತದ ಕಿಡಿ, ಹಲವರ ರಾಜೀನಾಮೆ, ನಾಯಕರಿಗೆ ತಲೆನೋವು

Youth-Congress

ಬೆಂಗಳೂರು, ಜೂ.7-ಭಿನ್ನಮತ, ಆಂತರಿಕ ಕಲಹವನ್ನು ಬದಿಗೊತ್ತಿ ಪಕ್ಷದ ಹಿತದೃಷ್ಟಿಯಿಂದ ರಾಜ್ಯ ಕಾಂಗ್ರೆಸ್‍ನಲ್ಲಿ ಒಗ್ಗಟ್ಟು ಪ್ರದರ್ಶಿಸಿ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದರೆ ಇತ್ತ ಯುವ ಕಾಂಗ್ರೆಸ್‍ನಲ್ಲಿ ಅಧಿಕಾರ ಸ್ವೀಕಾರಕ್ಕೆ ಮುನ್ನವೇ ದೊಡ್ಡ ಬಿಕ್ಕಟ್ಟು ಸೃಷ್ಟಿಯಾಗಿದೆ. ಇತ್ತೀಚೆಗೆ ನಡೆದ ರಾಜ್ಯ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆಯಲ್ಲಿ ಆಯ್ಕೆಯಾದ ಪದಗ್ರಹಣ ಸಂಭ್ರಮಕ್ಕೆ ಗ್ರಹಣ ಬಡಿದಿದೆ. ಚುನಾವಣೆಯಲ್ಲಿ ಕ್ರಮಬದ್ಧವಾಗಿ ಆಯ್ಕೆಯಾದವರನ್ನು ಬದಿಗೆ ಸರಿಸಿ, ಆಯ್ಕೆಯಾಗದವರೇ ಅಧಿಕಾರ ಸ್ವೀಕಾರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿ ರಾಜ್ಯ ಯುವ ಕಾಂಗ್ರೆಸ್‍ಗೆ ಆಯ್ಕೆಯಾದ ನಾಲ್ವರು ಉಪಾಧ್ಯಕ್ಷರು ಮುಂದಾಗಿರುವುದರಿಂದ ಅಧಿಕಾರ ಸ್ವೀಕಾರಕ್ಕೆ ಮುನ್ನವೇ ಯುವ ಕಾಂಗ್ರೆಸ್ ಒಡೆದ ಮನೆಯಂತಾಗಿದೆ.ಕಳೆದ ತಿಂಗಳು ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗೆ ವಿಧಾನಸಭೆ, ಲೋಕಸಭೆ ಹಾಗೂ ರಾಜ್ಯ ಯುವ ಕಾಂಗ್ರೆಸ್‍ಗೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿಯೇ ವ್ಯಾಪಕ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಇದಲ್ಲದೆ, ಅರಮನೆ ಮೈದಾನದಲ್ಲಿ ನಡೆದ ಮತ ಎಣಿಕೆ ಸಂದರ್ಭದಲ್ಲಿ ಭಾರೀ ಅಕ್ರಮ ನಡೆದಿತ್ತು. ತಮಗೆ ಬೇಕಾದವರನ್ನು ಗೆಲ್ಲಿಸಿಕೊಳ್ಳಲು ಹೆಚ್ಚುವರಿಯಾಗಿ ಉಪಾಧ್ಯಕ್ಷ ಸ್ಥಾನವೊಂದನ್ನು ಮತ ಎಣಿಕೆ ಸಂದರ್ಭದಲ್ಲೇ ಸೃಷ್ಟಿ ಮಾಡಲಾಯಿತು. ಇದರಿಂದ ತೀವ್ರ ಗೊಂದಲ ಉಂಟಾಯಿತು. ನಾಲ್ವರು ಉಪಾಧ್ಯಕ್ಷರು ಆಯ್ಕೆಯಾಗಬೇಕಾದ ಜಾಗದಲ್ಲಿ ಐವರು ಉಪಾಧ್ಯಕ್ಷರು ಆಯ್ಕೆಯಾದರು.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಬಸವನಗೌಡ ಬಾದರ್ಲಿ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಶಿವಕುಮಾರ್, ರಾಜೇಂದ್ರ, ಕೆಂಪರಾಜು, ಸುಮಯ ತಬ್ರೇಜ್ ಆಯ್ಕೆಯಾಗಿದ್ದರು.  ಮತ ಎಣಿಕೆ ಸಂದರ್ಭದಲ್ಲಿ ಹಠಕ್ಕೆ ಬಿದ್ದು ಹೆಚ್ಚುವರಿಯಾಗಿ ಉಪಾಧ್ಯಕ್ಷ ಸ್ಥಾನ ಸೃಷ್ಟಿ ಮಾಡಿ ಅಮೃತಗೌಡ ಅವರನ್ನು ಆಯ್ಕೆ ಮಾಡಲಾಯಿತು ಎಂದು ಆರೋಪ ಕೇಳಿಬಂದಿದೆ.  ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತಿರುವ ಯುವ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಅಕ್ರಮದ ಬಗ್ಗೆ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರಿಗೆ ದೂರು ನೀಡಿದ್ದು, ಅವರು ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದು, ತನಿಖೆ ಕೂಡ ನಡೆಯುತ್ತಿದೆ. ತನಿಖೆ ಸಂದರ್ಭದಲ್ಲಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಮ್ಮಿಕೊಂಡಿರುವುದರಿಂದ ಸಹಜವಾಗಿಯೇ ಅಸಮಾಧಾನಗೊಂಡ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರತಿಭಟನೆಗಿಳಿದಿದ್ದಾರೆ.ಇಂದು ಹಲವರು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದರೆ, ಮತ್ತೆ ಆಯ್ಕೆಯಾದ ಕೆಲ ಪದಾಧಿಕಾರಿಗಳು ಸಮಾರಂಭಕ್ಕೆ ತೆರಳದೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.   ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶಿವಕುಮಾರ್, ಕೆಂಪರಾಜ್, ರಾಜೇಂದ್ರ ಅವರುಗಳು ಮಾತನಾಡಿ, ಚುನಾವಣಾ ಅಕ್ರಮಗಳಿಂದ ಬೇಸತ್ತು ತಮ್ಮ ಹುದ್ದೆಗಳಿಗೆ ಕೆಪಿಸಿಸಿ ಅಧ್ಯಕ್ಷರಾದ ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡಿದ್ದೇವೆ. ಮರು ಚುನಾವಣೆಗೆ ಆಗ್ರಹಿಸಿದ್ದೇವೆ ಅಲ್ಲದೆ, ಇಂದಿನ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ರೀತಿ ಅಕ್ರಮವಾಗಿ ಆಯ್ಕೆ ಮಾಡುವುದಾದರೆ ಚುನಾವಣೆ ಯಾಕೆ ಮಾಡಬೇಕು? ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳಲಿ. ನಮ್ಮದೇನೂ ಅಭ್ಯಂತರವಿರುತ್ತಿರಲಿಲ್ಲ. ನಮ್ಮನ್ನೆಲ್ಲ ಏಕೆ ಯಮಾರಿಸಬೇಕಿತ್ತು ಎಂದು ಯುವ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಬೆಂಗಳೂರು ನಗರ ಜಿಲ್ಲಾ ಯುವ ಕಾಂಗ್ರೆಸ್ ಘಟಕವೂ ಕೂಡ ಇಬ್ಭಾಗವಾಗಿದೆ. ರಘುವೀರ್ ಎಸ್.ಗೌಡ ಒಂದೆಡೆಯಾದರೆ ರಕ್ಷಿತ್, ಕಾರ್ತಿಕ್, ವಿಶ್ವನಾಥ್ ಮತ್ತೊಂದು ಭಾಗವಾಗಿದ್ದಾರೆ. ಪದಗ್ರಹಣ ಸ್ವೀಕಾರ ಸಮಾರಂಭದ ಫ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್‍ಗಳಲ್ಲಿ ಅಧಿಕೃತವಾಗಿ ಆಯ್ಕೆಯಾದ ಅಭ್ಯರ್ಥಿಗಳ ಭಾವಚಿತ್ರಗಳೇ ಇಲ್ಲ.  ಮತ್ತೆ ಕೆಲವೆಡೆ ಜೆಡಿಎಸ್‍ನ ಜಮೀರ್ ಅಹಮ್ಮದ್ ರವರ ಭಾವಚಿತ್ರಗಳನ್ನು ಹಾಕಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ಕಾಂಗ್ರೆಸ್ ಯುವ ಕಾರ್ಯಕರ್ತರನ್ನು ಕೆರಳಿಸಿದೆ.


ಏನೋ ಸಣ್ಣಪುಟ್ಟ ಅಧಿಕಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಚುನಾವಣೆಯ ಹಾದಿ ಹಿಡಿದ ಯುವ ಕಾರ್ಯಕರ್ತರಿಗೆ ಈ ಬೆಳವಣಿಗೆಗಳಿಂದ ಭ್ರಮನಿರಸನವಾಗಿದೆ.  ಮುಂಬರುವ ಚುನಾವಣೆಗೆ ಒಂದು ಶಕ್ತಿಯಾಗಿ ಹೊರಹೊಮ್ಮಬೇಕಾಗಿದ್ದ ಯುವ ಕಾಂಗ್ರೆಸ್ ಆರಂಭದಲ್ಲೇ ಮುಗ್ಗರಿಸಿದೆ. ಕಳೆದ ಬಾರಿ ಅಧ್ಯಕ್ಷರಾಗಿದ್ದ ರಿಜ್ವಾನ್ ಅವರು ತಮ್ಮ ಬೆಂಬಲಿಗರನ್ನೇ ಮುನ್ನಡೆಸಬೇಕು ಎಂಬ ಹಿನ್ನೆಲೆಯಲ್ಲಿ ಹೈಕಮಾಂಡ್‍ನಲ್ಲಿ ತಮಗಿರುವ ಪ್ರಭಾವ ಬಳಸಿಕೊಂಡು ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳಲು ಈ ರೀತಿ ಮಾಡಿದ್ದಾರೆ ಎಂದು ಯುವ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin