ರಾಜ್ಯ ರಾಜಕಾರಣದಲ್ಲಿ ಹಸ್ತಕ್ಷೇಪ ಬೇಡ, ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್‍ಗೆ ವರಿಷ್ಠರ ಎಚ್ಚರಿಕೆ

BJP-Santosh

ಬೆಂಗಳೂರು, ಮಾ.13-ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಗದ್ದುಗೆ ಹಿಡಿಯಲು ಕಾರ್ಯ ತಂತ್ರ ರೂಪಿಸಲಾಗುತ್ತಿದೆ. ನೀವು ಇದರಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಕೇಂದ್ರ ಬಿಜೆಪಿ ವರಿಷ್ಠರು ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರಿಗೆ ಸೂಚಿಸಿದ್ದಾರೆ.  ಕರ್ನಾಟಕದಲ್ಲಿ ಪಕ್ಷದ ಬೆಳವಣಿಗೆ ಹಾಗೂ ಚಟುವಟಿಕೆ ಕುರಿತಂತೆ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡಬಾರದು, ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಉಸ್ತುವಾರಿಗಳು ನೋಡಿಕೊಳ್ಳುತ್ತಾರೆ. ನಿಮಗೆ ವಹಿಸಿರುವ ಜವಾಬ್ದಾರಿಯನ್ನಷ್ಟೇ ನಿರ್ವಹಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಾಕೀತು ಮಾಡಿದ್ದಾರೆ .   ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪೂರಕವಾದ ವಾತಾವರಣವಿದೆ. ಇಂತಹ ಸಂದರ್ಭದಲ್ಲಿ ನೀವು ಮಧ್ಯಪ್ರವೇಶ ಮಾಡುವುದರಿಂದ ಭಿನ್ನಮತ ಹಾಗೂ ಬಂಡಾಯಕ್ಕೆ ಎಡೆಮಾಡಿಕೊಡುತ್ತದೆ. ಸದ್ಯಕ್ಕೆ ನೀವು ಕರ್ನಾಟಕದ ಬಗ್ಗೆ ಗಮನಹರಿಸದೆ ರಾಷ್ಟ್ರಮಟ್ಟದಲ್ಲಿ ತೊಡಗಿಸಿಕೊಳ್ಳಬೇಕೆಂದು ಅಮಿತ್ ಷಾ ಹೇಳಿದ್ದಾರೆಂದು ತಿಳಿದುಬಂದಿದೆ.

ಪಕ್ಷದಲ್ಲಿ ಪದೇ ಪದೇ ಭಿನ್ನಮತ ಬಂಡಾಯ ಹಾಗೂ ನಾಯಕತ್ವದ ಬಗ್ಗೆ ದೂರುಗಳು ಬರುತ್ತಲೇ ಇವೆ. ಸಂತೋಷ್ ಅವರನ್ನು ದೂರವಿಟ್ಟು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಪೂರ್ಣವಾಗಿ ಸ್ವತಂತ್ರ ನೀಡಿದರೆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ಸಂತೋಷ್ ಅವರನ್ನು ಮಧ್ಯಪ್ರವೇಶಿಸದಂತೆ ಸೂಚಿಸಬೇಕೆಂದು ರಾಷ್ಟ್ರೀಯ ಅಧ್ಯಕ್ಷರಿಗೆ ಸಂಸದರು, ಕೆಲ ಶಾಸಕರು ದೂರು ನೀಡಿದ್ದರು ಎಂದು ತಿಳಿದು ಬಂದಿದೆ.  ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಅಮಿತ್ ಷಾ, ಭಿನ್ನಮತವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಸಂತೋಷ್ ಅವರನ್ನು ಪಕ್ಷದ ಆಂತರಿಕ ಚಟುವಟಿಕೆಗಳಿಂದ ದೂರವಿಡಲು ಮುಂದಾಗಿದ್ದಾರೆ.

ಆರ್‍ಎಸ್‍ಎಸ್‍ನ ಕಟ್ಟಾಳಾಗಿರುವ ಸಂತೋಷ್ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯ ದರ್ಶಿಯಾಗಿ ನೇಮಕಗೊಂಡಿದ್ದರೂ ಸಂಪೂರ್ಣ ವಾಗಿ ಅವರು ಕರ್ನಾಟಕದಲ್ಲೇ ತಮ್ಮ ಚಿತ್ತವನ್ನು ಹರಿಸಿದ್ದರು. ಅವರಿಗೆ ಉಸ್ತುವಾರಿ ನೀಡಲಾದ ರಾಜ್ಯಗಳಲ್ಲಿ ಪಕ್ಷ ಹಿನ್ನಡೆ ಅನುಭವಿಸಿದೆ. ಸಂಘಟನೆಯಲ್ಲಿ ತೊಡಗಿಕೊಳ್ಳದೆ ಕರ್ನಾಟಕದಲ್ಲೇ ಠಿಕಾಣಿ ಹೂಡಿದ್ದಾರೆ. ಇದರಿಂದ ಯಡಿಯೂರಪ್ಪ ಮತ್ತು ಸಂತೋಷ್ ನಡುವೆ ವೈಮನಸ್ಸಿಗೆ ಕಾರಣವಾ ಗಿದೆ ಎಂಬುದು ರಾಜ್ಯ ನಾಯಕರ ದೂರಾಗಿತ್ತು.

ಟಿಕೆಟ್ ಹಂಚಿಕೆ, ಪಕ್ಷದ ಪ್ರಚಾರ, ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೇಂದ್ರ ವರಿಷ್ಠರು ಸಂಪೂರ್ಣವಾಗಿ ಸ್ವತಂತ್ರ ನೀಡಿದರೆ ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ.   ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ವೈಮನಸ್ಸು ಮೂಡಲು ಸಂತೋಷ್ ಅವರೇ ಕಾರಣಕರ್ತರು. ರಾಯಣ್ಣಬ್ರಿಗೇಡ್ ಸೃಷ್ಟಿಯಾಗಿದ್ದೇ ಇವರ ನಿರ್ದೇಶನದಂತೆ. ಕುಳಿತು ಪರಿಹರಿಸಿಕೊಳ್ಳಬಹುದಾದ ಸಮಸ್ಯೆಯನ್ನು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿದರು. ಅದಲ್ಲದೆ, ಯಡಿಯೂರಪ್ಪ ವಿರುದ್ದ ಪಕ್ಷದಲ್ಲಿ ಕೆಲವರನ್ನು ಅನಗತ್ಯವಾಗಿ ಎತ್ತಿಕಟ್ಟಿ ಬಣ ರಾಜಕೀಯ ಸೃಷ್ಟಿ ಮಾಡಿದರು.

ಇದು ಹೀಗೇ ಮುಂದುವರೆಯಬಾರದೆಂದರೆ ಸಂತೋಷ್ ಅವರನ್ನು ಕರ್ನಾಟಕದಿಂದ ದೂರವಿಡಬೇಕು. ಇದರಿಂದ ಪಕ್ಷಕ್ಕೂ ಅನುಕೂಲವಾಗುತ್ತದೆ ಎಂದು ರಾಜ್ಯ ಘಟಕದ ನಾಯಕರು ಅಮಿತ್ ಷಾಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.  ಎಲ್ಲಾ ಸಾಧಕ-ಬಾಧಕಗಳ ಬಗ್ಗೆ ಚಿಂತನೆ ನಡೆಸಿರುವ ಷಾ, ನೀವು ಪಕ್ಷದ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಖಡಕ್ ಸೂಚನೆ ಕೊಟ್ಟಿದ್ದಾರೆಂದು ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin