ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅಕ್ರಮ-ಸಕ್ರಮ ಯೋಜನೆಗೆ ಹೈಕೋರ್ಟ್ ಅಸ್ತು

high-court

ಬೆಂಗಳೂರು, ಡಿ.13– ಕಾನೂನು ಬಾಹಿರವಾಗಿ ಸರ್ಕಾರಿ ಜಮೀನು ಮತ್ತು ಕಂದಾಯ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ಕಟ್ಟಡಗಳನ್ನು ಕಾನೂನುಬದ್ಧಗೊಳಿಸುವ ಅಕ್ರಮ-ಸಕ್ರಮ ಯೋಜನೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆಗೆ ಎದುರಾಗಿದ್ದ ಕಾನೂನು ತೊಡಕು ನಿವಾರಣೆಯಾಗಿದ್ದು, ರಾಜಕಾಲುವೆ ಹಾಗೂ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿರುವ ಕಟ್ಟಡಗಳಿಗೆ ಹೈಕೋರ್ಟ್‍ನ ಆದೇಶ ಅನ್ವಯವಾಗುವುದಿಲ್ಲ.  ಮಂಗಳೂರು ಅಭಿವೃದ್ಧಿ ಕುರಿತಾದ ಸಿಟಿಜನ್ ಫಾರ್ ಪೋರಂ, ಬೆಂಗಳೂರು ಜೆಪಿ ನಗರ 7 ಮತ್ತು 8ನೆ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ನಮ್ಮ ಬೆಂಗಳೂರು ಫೌಂಡೇಷನ್ ಸೇರಿದಂತೆ ವಿವಿಧ ಸಂಘಟನೆಗಳು ಅಕ್ರಮ-ಸಕ್ರಮ ಯೋಜನೆ ಸಂಬಂಧ ಆಕ್ಷೇಪ ಮಾಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಇಂದು ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್.ವಿ.ಬೂದಹಾಳ್ ಅವರಿದ್ದ ದ್ವಿಸದಸ್ಯ ಪೀಠ ವಜಾಗೊಳಿಸಿ ಸರ್ಕಾರದ ತೀರ್ಮಾನವನ್ನು ಎತ್ತಿ ಹಿಡಿದಿದೆ.

ನ್ಯಾಯಾಲಯದ ಆದೇಶದಿಂದ ಸರ್ಕಾರ ಹಾಗೂ ಬಿಬಿಎಂಪಿಗೆ ಸುಮಾರು 5 ರಿಂದ 6 ಸಾವಿರ ಕೋಟಿ ವರಮಾನ ಸಂಗ್ರಹವಾಗುವ ನಿರೀಕ್ಷೆಯಿದೆ. 2015 ಮಾರ್ಚ್‍ನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಈ ಯೋಜನೆಗ ಹಲವು ಕಂಟಕಗಳು ಎದುರಾಗಿದ್ದವು. ಅಕ್ರಮ-ಸಕ್ರಮ ಯೋಜನೆ ಅನುಷ್ಠಾನವಾಗುತ್ತಿರುವುದರಿಂದ ಬಿಬಿಎಂಪಿ ನಗರ ಪ್ರದೇಶಗಳಲ್ಲಿ ತಲೆ ಎತ್ತಿರುವ ಕಟ್ಟಡಗಳು ಕಾನೂನುಬದ್ಧಗೊಳ್ಳಲಿವೆ. ಬೆಂಗಳೂರು ನಗರದಲ್ಲಿ ಸುಮಾರು 25 ಲಕ್ಷ ಹಾಗೂ ರಾಜ್ಯದ ಇತರ ಭಾಗಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಅಕ್ರಮ ಕಟ್ಟಡಗಳು ಸಕ್ರಮವಾಗಲಿವೆ.
ಶೇ.50ರಷ್ಟು ಕಾನೂನು ಉಲ್ಲಂಘನೆಯಾಗಿ ನಿರ್ಮಾಣವಾಗಿರುವ ವಸತಿ ಕಟ್ಟಡಗಳು ಹಾಗೂ ಶೇ.25ರಷ್ಟು ಉಲ್ಲಂಘನೆಯಾಗಿರುವ ವಸತಿಯೇತರ ಕಟ್ಟಡಗಳನ್ನು ಕಾನೂನುಬದ್ಧಗೊಳಿಸಲು ಈ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ವಿಧಾನಮಂಡಲದ ಉಭಯ ಸದನಗಳಲ್ಲಿ ಬಹುಮತದಿಂದ ಅಂಗೀಕೃತವಾಗಿದ್ದ ಈ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದರು. ಆದರೆ,ಅಕ್ರಮ-ಸಕ್ರಮದ ವೇಳೆ ಬಡವರಿಗೆ ಅನ್ಯಾಯವಾಗದಂತೆ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕೆಂದು ಸಲಹೆ ಮಾಡಿದ್ದರು. ಇದರಂತೆ ರಾಜ್ಯ ಸರ್ಕಾರ ಪುನಃ ಪರಿಷ್ಕøತ ದರವನ್ನು ನಿಗದಿಪಡಿಸಿತ್ತು. ಸರ್ಕಾರದ ಈ ತೀರ್ಮಾನ ಪ್ರಶ್ನಿಸಿ ಕೆಲವರು ಹೈಕೋರ್ಟ್‍ನಲ್ಲಿ ಪಿಐಎಲ್ ಸಲ್ಲಿಸಿದ್ದರು. 2015ರ ಏಪ್ರಿಲ್‍ನಲ್ಲಿ ಜಾರಿಯಾಗಬೇಕಿದ್ದ ಯೋಜನೆಗೆ ತಡೆಯಾಜ್ಞೆ ನೀಡಿತ್ತು. ಸರ್ಕಾರ ಸಾರ್ವಜನಿಕರ ಅಭಿಪ್ರಾಯ ಪಡೆಯದೆ ದಂಡ ಶುಲ್ಕ ನಿಗದಿಪಡಿಸಿದೆ ಎಂಬುದು ಸಾರ್ವಜನಿಕರ ಅಳಲಾಗಿತ್ತು. ನ್ಯಾಯಾಲಯ ತಡೆಯಾಜ್ಞೆ ತೆರವಾಗಿರುವುದರಿಂದ ಅಕ್ರಮ ಕಟ್ಟಡಗಳು ಸಕ್ರಮವಾಗಲಿವೆ.

ಅಕ್ರಮ-ಸಕ್ರಮ ಎಂದರೇನು..?

ಕಂದಾಯ, ಅರಣ್ಯ ಪ್ರದೇಶಗಳಲ್ಲಿ ಕಾನೂನು ಬಾಹಿರವಾಗಿ ವಸತಿ ಕಟ್ಟಡಗಳು, ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರೆ ಅದಕ್ಕೆ ದಂಡ ವಿಧಿಸಿ ಕಾನೂನು ಬದ್ಧವಾಗಿ ಸಕ್ರಮಗೊಳಿಸುವ ಯೋಜನೆಯೇ ಅಕ್ರಮ-ಸಕ್ರಮ. 2014ರ ಲೋಕಸಭೆ ಚುನಾವಣೆಯಲ್ಲೇ ಈ ಯೋಜನೆಯನ್ನು ಜಾರಿ ಮಾಡಲು ಸರ್ಕಾರ ಮುಂದಾಗಿತ್ತು. ಆದರೆ, ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮತದಾರರ ಅನುಕಂಪ ಗಿಟ್ಟಿಸಲು ಸರ್ಕಾರ ಇದನ್ನು ಜಾರಿಮಾಡುತ್ತದೆ ಎಂಬುದು ಪ್ರತಿಪಕ್ಷಗಳ ಆರೋಪವಾಗಿತ್ತು. ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದರೂ ವಿಧಾನ ಪರಿಷತ್‍ನಲ್ಲಿ ಬಹುಮತವಿಲ್ಲದ ಕಾರಣ ನೆನೆಗುದಿಗೆ ಬಿದ್ದಿತ್ತು. ಬಳಿಕ ಉಭಯ ಸದನಗಳಲ್ಲಿ ಬಹುಮತದಿಂದ ಅಂಗೀಕರಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗಿತ್ತು. ಈಗ ಎಲ್ಲ ಅಡ್ಡಿ-ಆತಂಕಗಳು ನಿವಾರಣೆಯಾಗಿರುವುದರಿಂದ ಶೀಘ್ರದಲ್ಲೇ ಯೋಜನೆ ಅನುಷ್ಠಾನ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin