ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

Siddaramaiha-Session

ಬೆಳಗಾವಿ, ನ.24- ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡುವ ಸಂಬಂಧ ಮುಂದಿನ ಬಜೆಟ್‍ನಲ್ಲಿ ಹೊಸ ವೇತನ ಆಯೋಗ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್‍ನಲ್ಲಿಂದು ಪ್ರಕಟಿಸಿದ್ದಾರೆ.  ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡಬೇಕೆಂಬ ಬೇಡಿಕೆ ಹಲವು ದಿನಗಳಿಂದ ಕೇಳಿಬಂದಿದೆ.  2017ರ ಬಜೆಟ್‍ನಲ್ಲಿ ಹೊಸ ವೇತನ ಆಯೋಗದ ಘೋಷಣೆ ಮಾಡಲಾಗುವುದು ಎಂದು ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರಾದ ರಾಮಚಂದ್ರೇಗೌಡ, ಅರುಣ್ ಶಹಾಪುರ್, ಗಣೇಶ್ ಕಾರ್ನಿಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ಬಜೆಟ್‍ನಲ್ಲಿ ಹೊಸ ಆಯೋಗ ಘೋಷಿಸಲಾಗುವುದು. ಸರ್ಕಾರಿ ನೌಕರರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದರು.

ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿರುವುದರಿಂದ ಹಿಂದೆ ನೋಡುವ ಪ್ರಶ್ನೆಯಿಲ್ಲ. ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಆಶ್ವಾಸನೆ ಕೊಟ್ಟರು.
ವೇತನ ಪರಿಷ್ಕರಣೆ ವೇಳೆ ರಾಜ್ಯ ಸರ್ಕಾರಿ ನೌಕರರು ಕೇಂದ್ರ ಸರ್ಕಾರಿ ನೌಕರರ ನಡುವೆ ಎಷ್ಟು ವೇತನ ತಾರತಮ್ಯ, ಸಿಗುತ್ತಿರುವ ಸೌಲಭ್ಯಗಳು, ದಿನಭತ್ಯೆ, ಪಿಂಚಣಿ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಸರಿಪಡಿಸುವ ಬಗ್ಗೆ ಸಮಿತಿಗೆ ನಿರ್ದೇಶನ ನೀಡಲಾಗುವುದು ಎಂದರು.  ಬೇರೆ ಬೇರೆ ರಾಜ್ಯಗಳಲ್ಲಿರುವ ವೇತನದ ಬಗ್ಗೆ ಮಾಹಿತಿ ಪಡೆದು ನೌಕರರಿಗೆ ಅನ್ಯಾಯವಾಗದಂತೆ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

1966ರಿಂದ ಈವರೆಗೆ ಐದು ವೇತನ ಆಯೋಗ, ಎರಡು ವೇತನ ಸಮಿತಿ ರಚನೆಯಾಗಿದೆ. ಕೇಂದ್ರ ಸರ್ಕಾರಕ್ಕೂ, ರಾಜ್ಯ ಸರ್ಕಾರಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಕೇಂದ್ರವನ್ನು ಆಧಾರವಾಗಿಟ್ಟುಕೊಂಡು ನಾವು ವೇತನ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. 2011ರಲ್ಲಿ ವೇತನ ಆಯೋಗ ರಚನೆಯಾಗಿತ್ತು. ಈ ಆಯೋಗ ನೀಡಿದ ಶಿಫಾರಸಿನಂತೆ 01.04.2011 ರಿಂದ ಸರ್ಕಾರಿ ನೌಕರರ ವೇತನವನ್ನು ಪರಿಷ್ಕರಣೆ ಮಾಡಲಾಗಿದೆ. ನಾವು ನೌಕರರ ಹಿತ ಕಾಪಾಡಲು ಬದ್ಧರಾಗಿದ್ದು, ಯಾರೊಬ್ಬರಿಗೂ ಆತಂಕ ಬೇಡ ಎಂದರು.
ರಾಜ್ಯದಲ್ಲಿ ಒಟ್ಟು 7,79,000 ಸರ್ಕಾರಿ ಹುದ್ದೆಗಳಿವೆ. ವರ್ಷಕ್ಕೆ ಇವರಿಗೆ 25 ಸಾವಿರ ಕೋಟಿ ವೇತನ. 12 ಸಾವಿರ ಕೋಟಿ ಪಿಂಚಣಿ ನೀಡಲಾಗುತ್ತದೆ. ಸರಿಸುಮಾರು ನೌಕರರಿಗೆ 37 ರಿಂದ 40 ಸಾವಿರ ಕೋಟಿ ವೇತನ ಹಾಗೂ ಪಿಂಚಣಿಗೆ ನೀಡಲಾಗುವುದು. ರಾಜ್ಯ ಸರ್ಕಾರ 1.63 ಸಾವಿರ ಕೋಟಿ ಬಜೆಟ್ ಮಂಡಿಸಿದರೆ 24 ರಿಂದ 25 ಸಾವಿರ ಕೋಟಿ ಸಾಲವಿರುತ್ತದೆ. ಒಟ್ಟು ಬಜೆಟ್‍ನಲ್ಲಿ ಸರಿಸುಮಾರು ಶೇ.25ರಷ್ಟು ಅನುದಾನವನ್ನು ನೌಕರರಿಗೆ ಮೀಸಲಿಡಬೇಕು ಎಂದು ಹೇಳಿದರು.

ಹುದ್ದೆಗಳ ಭರ್ತಿ:

ರಾಜ್ಯದಲ್ಲಿ ಒಟ್ಟು 7,79,000 ಹುದ್ದೆಗಳಿವೆ. 2,69,000 ಹುದ್ದೆಗಳು ಖಾಲಿ ಇವೆ. ಕಾಲಕಾಲಕ್ಕೆ ಯಾವ ಯಾವ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇವೆಯೋ ಅವನ್ನು ಆದ್ಯತೆ ಮೇಲೆ ಭರ್ತಿ ಮಾಡಲಾಗುವುದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪೊಲೀಸ್, ಗೃಹ, ಶಿಕ್ಷಣ, ಕಂದಾಯ, ಇಂಧನ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ ಎಂದರು. ಕ್ಲಾಸ್ 1, ಕ್ಲಾಸ್ 2ನಿಂದ ಹಿಡಿದು ಇಲಾಖೆಗಳಲ್ಲಿ ಹುದ್ದೆ ಖಾಲಿಯಾಗುತ್ತಿದ್ದಂತೆ ಭರ್ತಿ ಮಾಡುವ ಕೆಲಸ ಕಾಲಕಾಲಕ್ಕೆ ನಡೆದಿದೆ. ಹೈದರಾಬಾದ್-ಕರ್ನಾಟಕದಲ್ಲಿ ಸಂವಿಧಾನ 371(ಜೆ) ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ಆರ್ಥಿಕ ಮಿತವ್ಯಯದ ಪ್ರಶ್ನೆ ಉದ್ಭವಿಸುವುದಿಲ್ಲ. ಇದೇ ರೀತಿ ಬೇರೆ ಇಲಾಖೆಗಳಿಗೂ ಮಿತವ್ಯಯ ಸಡಿಲಗೊಳಿಸಿ ಹುದ್ದೆ ಭರ್ತಿ ಮಾಡುವ ಭರವಸೆ ನೀಡಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin