ರಾಜ್ಯ ಸರ್ಕಾರ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ, ವಾಗ್ದಾಳಿ

bjp-protesrt
ಬೆಂಗಳೂರು,ಜ.8-ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂದು ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣವನ್ನು ತಡೆಗಟ್ಟಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿ ಬಿಜೆಪಿ ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ನಗರದ ಮೌರ್ಯ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ಒಂದು ಸಮುದಾಯವನ್ನು ಓಲೈಸಿ ಮತ್ತೊಂದು ಸಮುದಾಯವನ್ನು ನಿರ್ಲಕ್ಷಿಸುವ ಮೂಲಕ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವುದೇ ಇಂತಹ ಗಲಭೆ, ಘಟನೆಗಳು ನಡೆಯಲು ಕಾರಣವಾಗಿದೆ ಎಂದು ದೂರಿದರು.  ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ವಿವಿಧೆಡೆ 24 ಹಿಂದೂ ಕಾರ್ಯಕರ್ತರನ್ನು ಕಗ್ಗೊಲೆ ಮಾಡಲಾಗಿದೆ. ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ನಡುವೆ ಹೊಂದಾಣಿಕೆ ಇಲ್ಲದಿರುವುದು ಇದಕ್ಕೆ ಕಾರಣ ಎಂದು ಆರೋಪಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಹಿಂದು ಕಾರ್ಯಕರ್ತರನ್ನೇ ಗುರಿಯಾಗಿಟ್ಟುಕೊಂಡು ಹಲ್ಲೆ ಮಾಡಲಾಗುತ್ತಿದೆ. ರಕ್ಷಣೆ ಮಾಡಬೇಕಾದ ಸರ್ಕಾರವೇ ಸಮಾಜಘಾತುಕ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ದೂರಿದರು.
ಮಡಿಕೇರಿಯಲ್ಲಿ ಕುಟ್ಟಪ್ಪ , ಮಂಗಳೂರಿನಲ್ಲಿ ದಿಲೀಪ್ ರಾವ್ ಸೇರಿದಂತೆ 24 ಕಾರ್ಯಕರ್ತರನ್ನು ನಿರ್ದಿಷ್ಟ ಸಂಘಟನೆಗೆ ಸೇರಿದವರೇ ಹತ್ಯೆಗೈದಿದ್ದಾರೆ. ಈ ಸಂಘಟನೆಯ ಮುಖಂಡರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಸರ್ಕಾರ ಯಾವ ಕಾರಣಕ್ಕೆ ಹಿಂಪಡೆಯಿತು ಎಂದು ಪ್ರಶ್ನಿಸಿದರು. ಮಹಿಳೆಯರಿಗೆ ಮತ್ತು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇದೆ. ಎಲ್ಲವನ್ನೂ ನೋಡಿಕೊಂಡು ಸರ್ಕಾರ ಕಣ್ಮುಚ್ಚಿ ಕುಳಿತುಕೊಂಡಿದೆ. ಇನ್ನು ಮೂರು ತಿಂಗಳಲ್ಲಿ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರನ್ನು ಮನೆಗೆ ಕಳುಹಿಸುವುದು ಗ್ಯಾರಂಟಿ ಎಂದು ಎಚ್ಚರಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ನಮ್ಮ ಹೋರಾಟ ಲವ್ ಜಿಹಾದ್‍ಗಳ ವಿರುದ್ದವೇ ಹೊರತು ಮುಸ್ಲಿಮರ ವಿರುದ್ಧವಲ್ಲ. ಎಲ್ಲ ಮುಸ್ಲಿಮರು ಕೆಟ್ಟವರು ಎಂದು ನಾವು ಹೇಳುತ್ತಿಲ್ಲ. ಎಸ್‍ಡಿಪಿಐ, ಪಿಎಫ್‍ಐ, ಕೆಎಫ್‍ಡಿಯಲ್ಲಿ ಗುರುತಿಸಿಕೊಂಡಿರುವ ಮುಖಂಡರು ಐಸಿಸ್ ಜೊತೆ ಗುರುತಿಸಿಕೊಂಡಿದ್ದು , ಸರ್ಕಾರ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರಾವಳಿಯಲ್ಲಿ ಇಂದು ಬೆಂಕಿ ಹೊತ್ತಿ ಉರಿಯುತ್ತಿದೆ. ಪಕ್ಕದ ಕೇರಳ ರಾಜ್ಯದಲ್ಲಿ ನಡೆಯುತ್ತಿದ್ದ ಸಂಸ್ಕøತಿ ನಮ್ಮ ರಾಜ್ಯಕ್ಕೂ ಕಾಲಿಟ್ಟಿರುವುದು ಅತ್ಯಂತ ಕಳವಳಕಾರಿ ವಿಷಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಜಿಲ್ಲೆಗೆ ಕಾಲಿಡುತ್ತಾರೆ ಅಲ್ಲಿ ಬೆಂಕಿ ಬೀಳುತ್ತದೆ ಎಂದು ಹರಿಹಾಯ್ದರು. ಕರಾವಳಿಯಲ್ಲಿ ಕೋಮುಗಲಭೆ ಸಂಭವಿಸಲಿದೆ ಎಂದು ಖುದ್ದು ಮುಖ್ಯಮಂತ್ರಿಗಳಿಗೆ ಗೊತ್ತಿತ್ತು. ಆದರೆ ಪರಿಸ್ಥಿತಿ ಲಾಭ ಪಡೆಯಲು ಮುಂದಾಗಿರುವ ಪರಿಣಾಮ ಇಂದು ಎರಡು ಸಮುದಾಯಗಳ ನಡುವೆ ಸಂಘರ್ಷ ಉಂಟಾಗಿದೆ. ಇದಕ್ಕೆ ಕಾಂಗ್ರೆಸ್‍ನ ಒಡೆದಾಳುವ ನೀತಿಯೇ ಕಾರಣ ಎಂದು ಶೋಭಾ ಗುಡುಗಿದರು. ಆರ್.ಅಶೋಕ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೋದ ಕಡೆಯಲೆಲ್ಲ ನಮಗೆ ವಿರೋಧಿ ಅಲೆ ಇಲ್ಲ ಎಂದು ಹೇಳುತ್ತಿದ್ದಾರೆ. ನೀವು ಎಲ್ಲೆ ಕುಳಿತರೂ ನಿದ್ದೆಗೆ ಶರಣಾಗುತ್ತೀರಿ. ಇನ್ನು ನಿಮಗೆ ವಿರೋಧಿ ಅಲೆ ಎಲ್ಲಿ ಕಾಣುತ್ತದೆ ಎಂದು ಪ್ರಶ್ನಿಸಿದರು. ರಾಜ್ಯದ ಆರೂವರೆಗೆ ಕೋಟಿ ಜನರು ಸಿದ್ದರಾಮಯ್ಯನವರ ವಿರೋಧಿಗಳಾಗಿದ್ದಾರೆ. ನಿಮಗೆ ಕೆಂಪಯ್ಯ ಮಾತ್ರ ಆಪ್ತ. ಬೇರೆಲ್ಲರೂ ನಿಮಗೆ ವಿರೋಧಿಗಳೇ ಎಂದು ಜರಿದರು. ಮುಖಂಡರಾದ ಆರ್. ಅಶೋಕ್, ಅರವಿಂದ ಲಿಂಬಾವಳಿ, ಸುರೇಶ್‍ಕುಮಾರ್, ಮುನಿರಾಜು, ಬಿ.ಜೆ.ಪುಟ್ಟಸ್ವಾಮಿ, ಸಿ.ಟಿ.ರವಿ, ತಾರಾ ಅನುರಾಧ, ಅಬ್ದುಲ್ ಅಜೀಂ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Sri Raghav

Admin