ರಾತ್ರಿಯೆಲ್ಲಾ ಚಿರತೆ ಮೇಲೆ ಕೈ ಹಾಕಿಕೊಂಡು ಮಲಗಿದ್ದ ಭೂಪ..!

Mysuru--02

ಮೈಸೂರು, ಫೆ.6- ಕಾಡು ಮೃಗಗಳ ಘರ್ಜನೆ ಕೇಳಿದರೆ ಎದೆ ಝಲ್ ಎನ್ನುತ್ತದೆ. ಆದರೆ ಇಲ್ಲೊಬ್ಬ ಭೂಪ ಚಿರತೆಯ ಪಕ್ಕದಲ್ಲೇ ಬೆಳಗಿನ ಜಾವದವರೆಗೂ ಮಲಗಿದ್ದ ಪ್ರಸಂಗ ಕಂಡು ಬಂದಿದೆ. ಆಹಾರವನ್ನು ಅರಸಿ ಚಿರತೆಯೊಂದು ನಗರಕ್ಕೆ ಬಂದಿದ್ದು , ನಾಯಿಯೊಂದನ್ನು ಭಕ್ಷಿಸಿ ತನ್ನ ಹಸಿವು ನೀಗಿಸಿಕೊಂಡು ಉತ್ತನಹಳ್ಳಿ ರಸ್ತೆಯಲ್ಲಿರುವ ಬಾಳೆಹಣ್ಣು ಮಂಡಿಯೊಂದರಲ್ಲಿ ಮಲಗಿಕೊಂಡು ವಿರಮಿಸುತ್ತಿತ್ತು.

ಅದೇ ಮಂಡಿಯಲ್ಲಿ ರಾಜಣ್ಣ ಎಂಬುವರು ಮಲಗಿದ್ದು , ಅವರ ಪಕ್ಕದಲ್ಲಿಯೇ ಚಿರತೆ ಮಲಗಿಕೊಂಡಿದೆ. ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ ರಾಜಣ್ಣ ಅವರು ನಿದ್ರೆ ಮಂಪರಿನಲ್ಲಿ ಪಕ್ಕಕ್ಕೆ ತಿರುಗಿ ಚಿರತೆಯ ಮೇಲೆ ಕೈ ಹಾಕಿದ್ದಾರೆ. ನಾಯಿ ಇರಬಹುದೆಂದು ಮತ್ತೆ ಗಾಢ ನಿದ್ರೆಗೆ ಜಾರಿದ್ದಾರೆ. ನಂತರ ಬೆಳಗಿನ ಜಾವ 6 ಗಂಟೆ ಸಮಯದಲ್ಲಿ ಎದ್ದಾಗ ಪಕ್ಕದಲ್ಲಿರುವುದು ನಾಯಿಯಲ್ಲ ಚಿರತೆ ಎಂದು ತಿಳಿದ ತಕ್ಷಣವೇ ನಿಧಾನವಾಗಿ ಹೊರಗೆ ಬಂದು ಬಾಗಿಲು ಮುಚ್ಚಿ ಕೂಗಿಕೊಂಡಿದ್ದಾರೆ.

ಮಂಡಿಗೆ ಬಂದಿದ್ದ ರೈತರು ಏನಾಯಿತೋ ಎಂದು ಓಡಿ ಬಂದು ನೋಡಿದಾಗ ಒಂದು ಕ್ಷಣ ನೋಡಿದ ರಾಜಣ್ಣ ಮಾತನಾಡಲು ತಡಬಡಿಸಿದ್ದಾನೆ. ಮಂಡಿಯೊಳಗೆ ಚಿರತೆಯ ಘರ್ಜನೆ ಜೋರಾಗಿದ್ದು , ಸ್ಥಳದಲ್ಲೇ ನೆರೆದಿದ್ದ ರೈತರು ಹಾಗೂ ಸಾರ್ವಜನಿಕರು ಕಿಟಕಿ ಮೂಲಕ ವೀಕ್ಷಿಸಿದಾಗ ವನ್ಯ ಮೃಗ ಇರುವುದು ನೋಡಿ ಬೆಚ್ಚಿ ಬಿದ್ದಿದ್ದಾರೆ.  ಕೂಡಲೇ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದು , ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಚಿರತೆಗೆ ಅರವಳಿಕೆ ಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಚಿರತೆಗಳು ಇದೆ ಎಂಬ ಮಾಹಿತಿ ಇದ್ದು , ಅದಕ್ಕಾಗಿ ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರು ಸದಾ ಎಚ್ಚರಿಕೆಯಿಂದಿರುವಂತೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.

ಬಾಳೆಹಣ್ಣು ಮಂಡಿಗೆ ಚಿರತೆ ನುಗ್ಗಿ ಮನುಷ್ಯನ ಪಕ್ಕದಲ್ಲೇ ಮಲಗಿದ್ದರೂ ಏನೂ ಮಾಡದೆ ಇರುವುದು ಪವಾಡವೇ ಸರಿ ಎಂದು ಬದುಕಿದ್ದ ವೆಂಕಟೇಶಪ್ಪನಿಗೆ ನಿನ್ನ ಜೀವ ಗಟ್ಟಿ ಇದೆ ಎಂದು ಸಮಾಧಾನಪಡಿಸಿದ ದೃಶ್ಯ ಕಂಡು ಬಂತು. ಸೆರೆ ಸಿಕ್ಕಿರುವ ಚಿರತೆಯನ್ನು ಬೋನಿನಲ್ಲಿ ಹಾಕಿಕೊಂಡು ಜಯಚಾಮರಾಜೇಂದ್ರ ಮೃಗಾಲಯಕ್ಕೆ ಕರೆ ತರಲಾಗಿದೆ.

Sri Raghav

Admin