ರಾಷ್ಟ್ರಪಿತ ಗಾಂಧಿ ಮೊಮ್ಮಗ ಕನೂ ರಾಮ್ದಾಸ್ ಗಾಂಧಿ ವಿಧಿವಶ
ಸೂರತ್, ನ.8-ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಮೊಮ್ಮಗ ಕನೂ ರಾಮ್ದಾಸ್ ಗಾಂಧಿ ವಿಧಿವಶರಾಗಿದ್ದಾರೆ.
ಸುಮಾರು 40 ವರ್ಷ ಅಮೆರಿಕಾದಲ್ಲಿ ವಾಸವಾಗಿದ್ದ ಕನೂ ರಾಮ್ದಾಸ್ ದಂಪತಿ 2014ರಲ್ಲಿ ಭಾರತಕ್ಕೆ ವಾಪಸ್ ಆಗಿದ್ದರು. ಆದರೆ ಭಾರತದಲ್ಲಿ ವಾಸವಾಗಲು ಅವರಿಗೆ ಸ್ವಂತ ಮನೆ ಇಲ್ಲದ ಕಾರಣ ಆಶ್ರಮ, ಧರ್ಮ ಛತ್ರಗಳಲ್ಲಿ ಕಾಲ ಕಳೆಯುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಸೂರತ್ ನಗರದ ರಾಧಾಕೃಷ್ಣನ್ ದೇವಾಲಯ ವತಿಯಿಂದ ನಡೆಸಲಾಗುತ್ತಿದ್ದ ಆಸ್ಪತ್ರೆಯೊಂದರಲ್ಲಿ ಕಾನೂ ಗಾಂಧಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಕಳೆದ ಕೆಲ ಗಂಟೆಗಳ ಕೆಳಗೆ ವಿಧಿವಶರಾಗಿದ್ದಾರೆ.
ತೀವ್ರ ಎದೆ ನೋವು, ಲಕ್ವ ಹೊಡೆದಿದ್ದ ಕಾರಣ ದೇಹದ ಎಡಭಾಗ ಸ್ವಾಧೀನ ಕಳೆದುಕೊಂಡಿತ್ತು. ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿತ್ತು.