ರಾಸಾಯನಿಕ ಅಸ್ತ್ರ ನರಮೇಧಕ್ಕೆ ಪ್ರತೀಕಾರ : ಸಿರಿಯಾ ಮೇಲೆ ಅಮೆರಿಕ ಕ್ಷಿಪಣಿಗಳ ದಾಳಿ, ಸೇನಾ ನೆಲೆ ಧ್ವಂಸ

Spread the love

Amerika-Attack

ವಾಷಿಂಗ್ಟನ್/ಬೈರುತ್, ಏ.7-ನಾಗರಿಕರ ವಿರುದ್ಧ ರಾಸಾಯನಿಕ ಅಸ್ತ್ರಗಳ ದಾಳಿ ನಡೆಸಿ ಮಕ್ಕಳೂ ಸೇರಿದಂತೆ ನೂರಕ್ಕೂ ಹೆಚ್ಚು ಜನರ ಮಾರಣಹೋಮಕ್ಕೆ ಕಾರಣವಾದ ಸಿರಿಯಾ ಸರ್ಕಾರದ ವಿರುದ್ಧ ಉಗ್ರ ಪ್ರತೀಕಾರಕ್ಕೆ ಅಮೆರಿಕ ಮುಂದಾಗಿದೆ. ಇಂದು ಆ ದೇಶದ ಸೇನಾ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ನಡೆಸಲಾದ ಕ್ಷಿಪಣಿಗಳ ದಾಳಿಗಳಿಂದ ಏರ್ ಬೇಸ್ ಸೇರಿದಂತೆ ಸೇನಾ ಘಟಕಗಳು ನುಚ್ಚುನೂರಾಗಿದೆ. ಈ ಅಕ್ರಮಣದಲ್ಲಿ ಸಾವುನೋವು ಸಂಭವಿಸಿದ ವರದಿಗಳಿವೆ.

ಸಿರಿಯಾ ಸರ್ಕಾರದ ಮೇಲೆ ಅಮೆರಿಕದ ನೇರ ದಾಳಿ ಇದಾಗಿದ್ದು, ಅಧ್ಯಕ್ಷರಾದ ನಂತರ ಇದು ಡೊನಾಲ್ಡ್ ಟ್ರಂಪ್ ಆಡಳಿತದ ಪ್ರಥಮ ಮಿಲಿಟಿರಿ ಕಾರ್ಯಾಚರಣೆ ಆದೇಶವಾಗಿದೆ. ಅಮೆರಿಕದ ಈ ಹಠಾತ್ ಕ್ಷಿಪಣಿಗಳ ದಾಳಿ ಇಡೀ ವಿಶ್ವದ ಕುತೂಹಲ ಕೆರಳಿಸಿದೆ.   ಸಿರಿಯಾ ಮೇಲೆ ದಾಳಿ ನಡೆಸುವಂತೆ ಟ್ರಂಪ್ ಆದೇಶ ನೀಡಿದ ನಂತರ ನಿನ್ನೆ ಅಮೆರಿಕದ ವಾಯುನೆಲೆಗಳಿಂದ ಭೋರ್ಗರೆಯುತ್ತಾ ಹಾರಿದ ಯುದ್ದ ವಿಮಾನಗಳು ಸಿರಿಯಾದ ಶಯಾತ್ ಪ್ರದೇಶದ ಹೊಮ್ಸ್ ಪ್ರಾಂತ್ಯದ ಸರ್ಕಾರಿ ವಾಯು ನೆಲೆಗಳ ಮೇಲೆ(ರಾಸಾಯನಿಕ ಅಸ್ತ್ರಗಳನ್ನು ಕೊಂಡೊಯ್ದ ಸ್ಥಳ) 50-60 ಟಾಮ್‍ಹಾಕ್ ಕ್ಷಿಪಣಿ ದಾಳಿಗಳನ್ನು ನಡೆಸಿ ಅಲ್ಲಿನ ಸರ್ಕಾರಕ್ಕೆ ಬಿಸಿ ಮುಟ್ಟಿಸಿದವು.

ಕ್ಷಿಪಣಿ ದಾಳಿಗಳಿಂದ ಸೇನಾ ನೆಲೆಗಳು ನುಚ್ಚುನೂರಾಗಿದ್ದು, ಸಾವು-ನೋವು ಸಂಭವಿಸಿದೆ ಎಂದು ಆ ಪ್ರಾಂತ್ಯದ ಗೌರ್ನರ್ ತಲಾಲ್ ಬರಾಜಿ ತಿಳಿಸಿದ್ದಾರೆ.
ಅಮೆರಿಕದ ಈ ದಾಳಿಯನ್ನು ವಿರೋಧಪಕ್ಷಗಳು ಸ್ವಾಗತಿಸಿವೆ. ಅಲ್ಲದೇ ಆಕ್ರಮಣವನ್ನು ಮುಂದುವರಿಸಿ ಮತ್ತಷ್ಟು ತೀವ್ರಗೊಳಿಸುವಂತೆ ಅಮೆರಿಕವನ್ನು ಕೋರಿವೆ.
ಸಿರಿಯಾ ಮೇಲೆ ಆನಿಲ ದಾಳಿಯಲ್ಲಿ ಪಾಲ್ಗೊಂಡಿದ್ದ ರಷ್ಯಾಕ್ಕೆ ಈ ಮೂಲಕ ಪರೋಕ್ಷ ಎಚ್ಚರಿಕೆ ನೀಡಿರುವ ಅಮೆರಿಕ ತನ್ನ ವಾಯುಸೇನಾ ಕಾರ್ಯಾಚರಣೆಗೆ ಬಗ್ಗೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಮಾಹಿತಿ ನೀಡಿದೆ.

ಕಳೆದ ರಾತ್ರಿಯಿಂದ ಸಿರಿಯಾದ ಮೇಲೆ ದಾಳಿ ನಡೆಸುತ್ತಿರುವ ಅಮೆರಿಕ ಅಲ್ಲಿನ ನಾಗರಿಕರನ್ನು ಸಾವು-ನೋವಿಗೆ ಗುರಿಪಡಿಸುವ ಉದ್ದೇಶ ಹೊಂದಿಲ್ಲ. ಬದಲಿಗೆ ಇಸ್ಲಾಮಿಕ್ ಸ್ಟೇಟ್ ಬಂಡುಕೋರರ ವಿರುದ್ಧದ ದಾಳಿ ನೆಪದಲ್ಲಿ ಅಮಾಯಕ ನಾಗರಿಕರನ್ನು ಬಲಿ ತೆಗೆದುಕೊಳ್ಳುತ್ತಿರುವ ಸಿರಿಯಾ ಸರ್ಕಾರಕ್ಕೆ ಎಚ್ಚರಿಕೆ ನೀಡುವುದು ಟ್ರಂಪ್ ಆಡಳಿತದ ಉದ್ದೇಶವಾಗಿದೆ.   ಅಲ್ಲದೆ, ಕಳೆದ ಏಳು ವರ್ಷಗಳಿಂದ ಅಂತರ್ಯುದ್ಧದಿಂದ ಲಕ್ಷಾಂತರ ನಾಗರಿಕರು ಜರ್ಝರಿತರಾಗಿದ್ದರೂ ಸಿರಿಯಾ ಸರ್ಕಾರ ಆ ಬಗ್ಗೆ ಗಮನಹರಿಸದೇ ಅಮಾಯಕರ ಸಾವು-ನೋವಿಗೆ ಕಾರಣವಾಗುತ್ತಿದೆ ಎಂಬುದು ಅಮೆರಿಕದ ಆತಂಕವಾಗಿದೆ. ಸಿರಿಯಾದ ಮೇಲೆ ದಾಳಿ ನಡೆಸಿರುವ ಅಮೆರಿಕ ಐಎಸ್ ಬಂಡುಕೋರರಿಗೂ ಸ್ಪಷ್ಟ ಎಚ್ಚರಿಕೆ ನೀಡುವುದು ಮತ್ತೊಂದು ಉದ್ದೇಶವಾಗಿದೆ.

ಸಾವು-ನೋವು :

ಈ ಮಧ್ಯೆ ರಾಸಾಯನಿಕ ಅಸ್ತ್ರಗಳ ದಾಳಿ (ಗ್ಯಾಸ್ ಆಟ್ಯಾಕ್) ದುಷ್ಪರಿಣಾಮದಿಂದ ಸಿರಿಯಾ ನಲುಗಿ ಹೋಗಿದೆ. ಈಗಾಗಲೇ ನೂರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು, ಅನೇಕರು ತೀವ್ರ ಅಸ್ವಸ್ಥರಾಗಿ ಸಾವು-ಬದುಕಿನೊಂದಿಗೆ ಹೋರಾಡುತ್ತಿದ್ದಾರೆ. ಒಂದೇ ಕುಟುಂಬದ 22 ಮಂದಿ ಮೃತಪಟ್ಟಿರುವುದು ದಾಳಿಯ ಭೀಕರತೆಗೆ ಸಾಕ್ಷಿಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin