ರೇಷ್ಮೆ ಗೂಡು ಮಾರುಕಟ್ಟೆ ಸ್ವಚ್ಛತೆ
ವಿಜಯಪುರ, ಸೆ.9- ರೇಷ್ಮೆ ಗೂಡಿನ ಮಾರುಕಟ್ಟೆಯಿಂದ ಇತರೆಡೆಗೆ ರೋಗಾಣುಗಳು ಪಸರಿಸದಂತೆ ತಡೆಯುವುದೇ ಮಾರುಕಟ್ಟೆಯ ಸ್ವಚ್ಚತೆಯ ಉದ್ದೇಶವೆಂದು, ಸರಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ಉಪನಿರ್ದೇಶಕ ಎಂ.ಎಸ್.ಭೈರಾರೆಡ್ಡಿ ತಿಳಿಸಿದರು. ಇಲ್ಲಿನ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ತಮ್ಮ ಎಲ್ಲಾ ದರ್ಜೆಯ ಅಧಿಕಾರಿಗಳೊಂದಿಗೆ ಖುದ್ದಾಗಿ ತಾವೂ ಸಹ ಮಾರುಕಟ್ಟೆಯನ್ನು ಸ್ವಚ್ಚಗೊಳಿಸುವೆಡೆಗೆ ಕಾರ್ಯೋನ್ಮುಖರಾಗಿ ನಂತರ ವರದಿಗಾರರೊಂದಿಗೆ ಮಾತನಾಡಿದರು.
ಮಾರುಕಟ್ಟೆಯಲ್ಲಿ ಕೇವಲ ಕಸ ಗುಡಿಸುವುದರಿಂದ ಹೆಚ್ಚಿನ ಸ್ವಚ್ಚತೆ ನಿರೀಕ್ಷಿಸಲಾಗದು. ಆಂಧ್ರ, ತಮಿಳು ನಾಡು, ಮತ್ತಿತರೆಡೆಗಳಿಂದ ಮಾರುಕಟ್ಟೆಗೆ ರೇಷ್ಮೆ ಗೂಡಿನ ಲಾಟುಗಳು ಪ್ರತಿ ದಿನ ಬರುತ್ತಿದ್ದು, ಎಲ್ಲೆಲ್ಲಿಂದಲೋ ಬಂದ ಗೂಡು, ಚೀಲಗಳು, ಹಾಗೂ ವ್ಯಕ್ತಿಗಳೊಂದಿಗೆ ರೋಗ ಪಸರಿಸುವ ರೋಗಾಣುಗಳು ಆಗಮಿಸಿ, ವರ್ಷಾನುಗಟ್ಟೆಲೆಯಿಂದ ಇಲ್ಲಿ ನೆಲೆಯೂರಿದ್ದು, ಮತ್ತೆ ಇಲ್ಲಿಂದ ಹೊರಹೋಗುವವರೊಂದಿಗೆ ಚೀಲ ಬಟ್ಟೆಗಳೊಂದಿಗೆ ಇತರೆಡೆಗಳಿಗೂ ಹೋಗಿ, ಅವು ರೇಷ್ಮೆ ಗೂಡು ಉತ್ಪಾದನೆಯ ಮೇಲೂ ಪರಿಣಾಮ ಬೀರಲಿದೆ.
ಆದ ಕಾರಣ ಕ್ಲೋರೋಪೆಟ್, ಡೆಟ್ಟಾಲ್, ಅಸ್ರ, ಮತ್ತಿತರೆ ರೋಗ ನಾಶಕ ಔಷಧಿಗಳನ್ನು ಬಳಸಿ, ಸಂಪೂರ್ಣ ಎರಡೂ ವಿಭಾಗಗಳ ಗೂಡಿನ ಮಾರುಕಟ್ಟೆಗಳನ್ನು ಎಲ್ಲಾ ಸಿಬ್ಬಂದಿ ವರ್ಗದ ಸಮೇತ ಸ್ವಚ್ಚಗೊಳಿಸಲಾಗುತ್ತಿದೆ ಎಂದು ತಿಳಿಸಿ, ಕನಿಷ್ಠ 2-3 ತಿಂಗಳಿಗೊಮ್ಮೆಯಾದರೂ ಈ ರೀತಿ ಸ್ವಚ್ಚತಾ ಕ್ರಮ ಕೈಗೊಂಡಲ್ಲಿ ರೋಗಾಣುಗಳು ಪಸರಿಸುವುದು ನಿಲ್ಲುತ್ತದೆ ಎಂದರು.ರೇಷ್ಮೆ ಸಹಾಯಕ ನಿರ್ದೇಶಕಿ ಪುಂಗೋಡಿ, ರೇಷ್ಮೆ ವಿಸ್ತರಣಾಧಿಕಾರಿ ವೈ.ವಿ.ಮುನಿರಾಜು, ರೇಷ್ಮೆ ನಿರೀಕ್ಷಕ ನಂಜುಂಡೇಗೌಡ, ದೇವದಾಸ್, ರೇಷ್ಮೆ ಪ್ರದರ್ಶಕ ಮಲ್ಲಪ್ಪ, ಶಾರದಮ್ಮ, ಕೆ.ನಾಗರಾಜು ಹಾಗೂ ಭೈರೇಶ್ ಮತ್ತಿತರರಿದ್ದರು.
► Follow us on – Facebook / Twitter / Google+