ರೈತರಿಗೆ ಪರಿಹಾರ ವಿಳಂಬ : ಹರಿಹರದಲ್ಲಿ ಮೈಸೂರು-ಧಾರವಾಡ ಇಂಟರ್‍ಸಿಟಿ ರೈಲು ಜಪ್ತಿ

Spread the love

Hariohara

ಹರಿಹರ,ಅ.24-ರೈಲ್ವೆ ಇಲಾಖೆಯಿಂದ ರೈತರಿಗೆ ನೀಡಬೇಕಾಗಿದ್ದ ಪರಿಹಾರ ವಿಳಂಬವಾದ ಹಿನ್ನೆಲೆಯಲ್ಲಿ ಕೋರ್ಟ್ ಸಿಬ್ಬಂದಿ ರೈಲನ್ನೇ ಜಪ್ತಿ ಮಾಡಿರುವ ಅಪರೂಪದ ಘಟನೆ ಹರಿಹರದಲ್ಲಿ ನಡೆದಿದೆ.   ಇಂದು ಬೆಳಗ್ಗೆ 8 ಗಂಟೆಗೆ ಮೈಸೂರು-ಧಾರವಾಡ ಇಂಟರ್‍ಸಿಟಿ ಎಕ್ಸ್‍ಪ್ರೆಸ್ ರೈಲು ಹರಿಹರ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಕೋರ್ಟ್ ಸಿಬ್ಬಂದಿಯನ್ನು ರೈಲನ್ನು ಸ್ವಾಧೀನಕ್ಕೆ ತೆಗೆದುಕೊಂಡರು. ಇದರಿಂದ ನೂರಾರು ಪ್ರಯಾಣಿಕರು ನಿಲ್ದಾಣದಲ್ಲಿ ಪರದಾಡಿದ ಪ್ರಸಂಗವೂ ನಡೆಯಿತು.

ಏನಿದು ಘಟನೆ?:

ಕೊಟ್ಟೂರು-ಹರಿಹರ ರೈಲು ಮಾರ್ಗಕ್ಕಾಗಿ ಅಗತ್ಯವಾಗಿದ್ದ ರೈತರ ಭೂಮಿಗಳನ್ನು ಕಳೆದ 18 ವರ್ಷಗಳ ಹಿಂದೆ ಇಲಾಖೆ ವಶಪಡಿಸಿಕೊಂಡಿತ್ತು. ರೈತರಿಗೆ ಅಂದಿನ ಮಾರುಕಟ್ಟೆ ಬೆಲೆ ಆಧರಿಸಿ ಪರಿಹಾರ ನೀಡಬೇಕಾಗಿತ್ತು. ಆದರೆ ಇಲಾಖೆ ಪರಿಹಾರ ನೀಡದೆ ಸತಾಯಿಸುತ್ತಿತ್ತು.  ಇಲಾಖೆಯ ಈ ವಿಳಂಬ ಧೋರಣೆಯನ್ನು ಪ್ರಶ್ನಿಸಿ ಮೂವರು ರೈತರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ರೈತರ ಅರ್ಜಿ ವಿಚಾರಣೆ ನಡೆಸಿದ ಹರಿಹರ ಪ್ರಧಾನ ಸಿವಿಲ್ ನ್ಯಾಯಾಲಯವು ರೈತರಿಗೆ ಸಂದಾಯವಾಗಬೇಕಿದ್ದ 37 ಲಕ್ಷ ರೂ.ಗಳನ್ನು ತಕ್ಷಣ ನೀಡುವಂತೆ ರೈಲ್ವೆ ಇಲಾಖೆಗೆ ಆದೇಶಿಸಿತ್ತು.
ಆದರೆ ಕೋರ್ಟ್ ಆದೇಶವನ್ನು ಗಾಳಿ ತೂರಿದ ರೈಲ್ವೆ ಇಲಾಖೆ ರೈತರಿಗೆ ಯಾವುದೇ ಪರಿಹಾರವನ್ನ್ನೂ ನೀಡಲಿಲ್ಲ. ರೈತರು ಮತ್ತೆ ಇದನ್ನು ನ್ಯಾಯಾಲಯದ ಗಮನಕ್ಕೆ ತಂದರು.

ರೈಲ್ವೆ ಇಲಾಖೆಯ ಈ ನಿರ್ಲಕ್ಷ್ಯ ಧೋರಣೆಯಿಂದ ತೆರಳಿದ ಹರಿಹರ ಸಿವಿಲ್ ನ್ಯಾಯಾಲಯ ರೈಲನ್ನು ಜಪ್ತಿ ಮಾಡುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ನ್ಯಾಯಾಲಯದ ಸಿಬ್ಬಂದಿ ನಿಲ್ದಾಣಕ್ಕೆ ಆಗಮಿಸಿ ಮೈಸೂರು-ಧಾರವಾಡ ಇಂಟರ್‍ಸಿಟಿ ಎಕ್ಸ್‍ಪ್ರೆಸ್ ರೈಲನ್ನು ಇಲ್ಲಿಗೆ ಬರುತ್ತಿದ್ದಂತೆ ಪ್ರಯಾಣಿಕರನ್ನೆಲ್ಲ ಕೆಳಗಿಳಿಸಿ ರೈಲನ್ನು ಸ್ವಾಧೀನಪಡಿಸಿಕೊಂಡರು.
ಇದರಿಂದಾಗಿ ಬೇರೆ ಬೇರೆ ಊರುಗಳಿಂದ ಬರುತ್ತಿದ್ದ ಪ್ರಯಾಣಿಕರು ನಿಲ್ದಾಣದಲ್ಲಿ ಪರದಾಡಿದರು.  ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ರೈಲ್ವೆ ಇಲಾಖೆ ಇತಿಹಾಸದಲ್ಲಿಯೇ ಈ ರೀತಿ ರೈಲೊಂದನ್ನು ನ್ಯಾಯಾಲಯ ಹಣದ ಬಾಕಿಗಾಗಿ ಜಪ್ತಿ ಮಾಡಿಕೊಂಡಿರುವುದು ಬಹುಶಃ ಇದೇ ಮೊದಲು ಎನ್ನಲಾಗಿದೆ.

ಮುಚ್ಚಳಿಕೆ ಬರೆದುಕೊಟ್ಟ ವ್ಯವಸ್ಥಾಪಕ:

ಸುಮಾರು ಎರಡು ಗಂಟೆಗಳ ಕಾಲ ರೈಲು ಸ್ಥಗಿತಗೊಂಡಿತ್ತು. ನಂತರ ಇನ್ನು ಒಂದು ವಾರದೊಳಗೆ ಪರಿಹಾರ ಪಾವತಿ ಮಾಡುವುದಾಗಿ ಇಲಾಖೆಯ ಮುಖ್ಯ ವ್ಯವಸ್ಥಾಪಕ ಮುಚ್ಚಳಿಕೆ ಬರೆದುಕೊಟ್ಟ ನಂತರ ರೈಲು ತನ್ನ ಸಂಚಾರ ಆರಂಭಿಸಿತು.  ಈ ವೇಳೆ ಕೋರ್ಟ್ ಸಿಬ್ಬಂದಿ ಮತ್ತು ನೂರಾರು ರೈತರು ಸ್ಥಳದಲ್ಲಿದ್ದರು. ಎರಡು ಗಂಟೆಗಳ ನಂತರ ಇಂಟರ್‍ಸಿಟಿ ಬೆಂಗಳೂರು ಕಡೆಗೆ ಹೊರಟಿತು ಎಂದು ಮೂಲಗಳು ತಿಳಿಸಿವೆ.

► Follow us on –  Facebook / Twitter  / Google+

Facebook Comments

Sri Raghav

Admin