ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಸ್ತೆ ತಡೆ

nanjanagudu

ನಂಜನಗೂಡು, ಫೆ.8- ರೈತರು ಸಕ್ಕರೆ ಕಾರ್ಖಾನೆಗಳಿಗೆ ಪೂರೈಸುವ ಕಬ್ಬಿಗೆ ನ್ಯಾಯ ಯುತ ಬೆಲೆ ದೊರಕಿಸಿಕೊಡಬೇಕು ಹಾಗೂ ಅಸಮರ್ಪಕ ನೀರು ಪೂರೈಕೆಯಿಂದ ಬೆಳೆ ನಾಶಗೊಂಡಿರುವ ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂಬುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಹುಲ್ಲಹಳ್ಳಿ ವೃತ್ತದಲ್ಲಿ ರಸ್ತೆ ತಡೆ, ಮಾನವ ಸರಪಳಿ ರಚಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಪ್ರತಿಭಟನೆ ನಡೆಸಿತು.ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬರದ ಬೇಗೆಯಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಯಾವುದೇ ನೆರವನ್ನು ನೀಡುತ್ತಿಲ್ಲ. ಇದರಿಂದಾಗಿ ರೈತರ ಬದುಕು ಅಸಹನೀಯವಾಗಿದ್ದು ಮಳೆ ಅಭಾವ ಹಾಗೂ ನೀರಿನ ಕೊರತೆಯಿಂದ ಬೆಳೆ ನೆಲಕಚ್ಚಿದೆ. ಜಾನುವಾರುಗಳು ಮೇವು ಹಾಗೂ ಕುಡಿಯುವ ನೀರಿಗಾಗಿ ಪರಿತಪಿಸುತ್ತಿವೆ.

ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರ ಭತ್ತದ ಬೆಳೆ ನಷ್ಟಕ್ಕೆ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು, ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಪ್ರಸಕ್ತ ಸಾಲಿನಲ್ಲಿ ರೈತರು ಪೂರೈಸಿರುವ ಕಬ್ಬಿಗೆ ಪ್ರತಿಟನ್‍ಗೆ 3000 ದರ ನಿಗದಿಪಡಿಸಬೇಕು, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಹಾಗೂ ಕೃಷಿ ಪಂಪ್‍ಸೆಟ್‍ಗಳಿಗೆ ಸತತ 10 ಘಂಟೆಕಾಲ ಕನಿಷ್ಟ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ನಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದರೆ ಇದೇ ತಿಂಗಳ 14ರಂದು ಜಿಲ್ಲಾಧಿಕಾರಿಗಳವರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

30 ನಿಮಿಷಗಳ ಕಾಲ ನಡೆದ ಈ ರಸ್ತೆ ತಡೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತೀವ್ರ ಅಸ್ತವ್ಯಸ್ಥಗೊಂಡಿತ್ತು.ಕಬ್ಬುಬೆಳೆಗಾರರ ಸಂಘದ ಜಿಲ್ಲಾ ಸಂಚಾಲಕ ಹಳ್ಳಿಕೆರೆ ಹುಂಡಿ ದೇವರಾಜ್, ಹಾಡ್ಯ ರವಿ, ಸಿಂಧುವಳ್ಳಿ ಬಸವಣ್ಣ, ಸಿದ್ದೇಶ್, ಭಾಗ್ಯರಾಜು, ರಾಜಣ್ಣ, ಮಂಜುನಾಥ್, ಸಿದ್ದೇಶ್, ಚಿಕ್ಕಸ್ವಾಮಿ, ಮಾದಪ್ಪ, ನಾಗರಾಜು, ಪುಟ್ಟರಾಜು ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಕಪಿಲೇಶ್ ಇದ್ದರು. ಮನವಿ ಪತ್ರವನ್ನು ತಹಶೀಲ್ಧಾರ್ ದಯಾನಂದ್‍ರವರಿಗೆ ಸಲ್ಲಿಸಲಾಯಿತು.ಮುನ್ನೆಚ್ಚರಿಕೆ ಕ್ರಮವಾಗಿ ಎ.ಎಸ್.ಪಿ. ಮಹಮದ್ ಸುಜಿತ, ಸಿ.ಪಿ.ಐ. ಶಿವಮೂರ್ತಿ, ಪಿ.ಎಸ್.ಐ ಗಳಾದ ಚೇತನ್, ಆನಂದ್, ಸೂಕ್ತರ ಬಂದೋಬಸ್ತ್ ಏರ್ಪಡಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin