ರೈತರ ಸಾಲಮನ್ನಾ ಮಾಡ್ತೀನಿ, ಇಲ್ಲದಿದ್ರೆ ರಾಜೀನಾಮೆ ಕೊಡ್ತೀನಿ : ಸಿಎಂ

Spread the love

Kumaraswamy--101

ಬೆಂಗಳೂರು, ಮೇ 27-ರಾಜ್ಯದ ರೈತರ ಹಿತ ಕಾಯಲು ನಾನು ಬದ್ಧ. ಅದು ಆಗುವುದಿಲ್ಲ ಎಂದರೆ ನಾನು ಕುರ್ಚಿಗಂಟಿಕೊಂಡು ಕೂರುವುದಿಲ್ಲ. ನಾನೇ ರಾಜೀನಾಮೆ ಕೊಟ್ಟು ಹೋಗುತ್ತೇನೆ. ವಿಶ್ವಾಸಮತ ಸಾಬೀತಾಗಿ ಕೇವಲ ಎರಡು ದಿನವಾಗಿದೆ. ಸಚಿವ ಸಂಪುಟ ವಿಸ್ತರಣೆಯಾಗಬೇಕು. ಕನಿಷ್ಠ ಒಂದು ವಾರವಾದರೂ ಬೇಡವೇ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

ಮಾಜಿ ಪ್ರಧಾನಿ ದಿವಂಗತ ಪಂಡಿತ್ ಜವಹರಲಾಲ್ ನೆಹರು ಅವರ 54ನೇ ಪುಣ್ಯ ತಿಥಿ ಅಂಗವಾಗಿ ವಿಧಾನಸಭೆ ಆವರಣದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ರೈತರ ಹಿತ ಬಯಸುವಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಇದ್ದೇನೆ.
ರೈತರ ಸಹಕಾರಿ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲ ಮನ್ನಾ ಮಾಡುವ ಬದ್ಧತೆ ನನ್ನದಾಗಿದೆ. ಆದರೆ ಯಡಿಯೂರಪ್ಪನವರು ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಮಾಡುವುದನ್ನು ಬಿಡಬೇಕು ಎಂದರು.
ಬಿ.ಎಸ್.ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಏನೇನು ಮಾಡಿದರು ಎಂಬುದು ಗೊತ್ತಿಲ್ಲವೇ? ಅವರು ಶ್ರೀಮಂತರ ಬಳಿ ರೈತರು ಸಾಲ ಮಾಡಿರುವುದನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ನಾನು ಲೇವಾದೇವಿದಾರರಿಂದಲೂ ರೈತರು ತೊಂದರೆ ಅನುಭವಿಸುದ್ದು, ಅದಕ್ಕೆ ಪರಿಹಾರ ಒದಗಿಸಬೇಕಾಗಿದೆ ಎಂದು ಹೇಳಿದ್ದೆ. ಹಾಗಾಗಿ ರಾಷ್ಟ್ರೀಕೃತ ಸಹಕಾರಿ ಬ್ಯಾಂಕ್‍ಗಳಲ್ಲಿರುವ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದೆ. ಅದನ್ನು ಮಾಡುತ್ತೇನೆ ಎಂದು ಹೇಳಿದರು.

ನಾನು ರಾಜ್ಯದ ರೈತರಲ್ಲಿ ಮನವಿ ಮಾಡುತ್ತೇನೆ. ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ರೈತ ಸಂಘಟನೆಗಳು ನನಗೆ ಒತ್ತಡ ತರುವುದು ಬೇಡ, ನನಗೂ ರೈತರ ಬಗ್ಗೆ ಕಾಳಜಿ ಇದೆ. ನಾನು ಮುಖ್ಯಮಂತ್ರಿಯಾಗಿರುವುದೇ ರೈತರ ಕಲ್ಯಾಣಕ್ಕಾಗಿ. ನಾನು ಬಹುಮತ ಸಾಬೀತು ಪಡಿಸಿ ಎರಡು ದಿನವಾಗಿಲ್ಲ. ಮಂತ್ರಿ ಮಂಡಲ ರಚನೆಯಾಗಿಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ ಎಂದರು.
ರೈತರ ಸಾಲ ಮನ್ನಾ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಾನು ಅಧಿಕಾರಕ್ಕೆ ಅಂಟಿಕೊಂಡು ಕೂರವವನಲ್ಲ, ಇವರೇನು ನನ್ನ ರಾಜೀನಾಮೆ ಕೇಳುವುದು? ನಾನು ರೈತರ ಸಾಲ ಮನ್ನಾ ಮಾಡಲಿಲ್ಲವೆಂದರೆ ನಾನೇ ರಾಜೀನಾಮೆ ಕೊಟ್ಟು ಮನೆಗೆ ಹೋಗುತ್ತೇನೆ ಎಂದು ಪುನರುಚ್ಚರಿಸಿದರು.
ಯಡಿಯೂರಪ್ಪ ರೈತರಿಗೆ ಪ್ರಚೋದನೆ ಮಾಡುವುದು ಬೇಡ. ಪ್ರಚೋದನೆ ಕೊಟ್ಟು ಬಿಎಸ್‍ವೈ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಆರೂವರೆ ಕೋಟಿ ಜನರ ಮುಲಾಜಿನಲ್ಲಿ ಇಲ್ಲ, ಕಾಂಗ್ರೆಸ್‍ನವರ ಮುಲಾಜಿನಲ್ಲಿದ್ದೇನೆ. ಒಂದು ವಾರ ಸಮಯ ಕೊಡಿ ಸಚಿವ ಸಂಪುಟ ರಚನೆ ಪ್ರಕ್ರಿಯೆ ಅಂತಿಮವಾದ ನಂತರ ಸಾಲ ಮನ್ನಾ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್‍ನವರು ಈಗ ಹಣಕಾಸು ಖಾತೆ ಕೇಳುತ್ತಿದ್ದಾರೆ. ಸಂಪುಟ ರಚನೆ ಸಂದರ್ಭದಲ್ಲಿ ಪ್ರಮುಖ ಖಾತೆ ಕೇಳುವುದು ಸಹಜ. ಇನ್ನೂ ಬಗ್ಗೆ ತೀರ್ಮಾನವಾಗಬೇಕಿದೆ.

ಪ್ರಮುಖ ಖಾತೆಗಳ ಹಂಚಿಕೆಯಲ್ಲಿ ಯಾವುದೇ ಬಿಕ್ಕಟ್ಟಿಲ್ಲ. ಯಾವುದೇ ರೀತಿಯ ಫೈಟೂ ಇಲ್ಲ. ಸದ್ಯದಲ್ಲೇ ಎಲ್ಲ ತೀರ್ಮಾನವಾಗಲಿದೆ. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮಿನಾರಾಯಣ್, ಪ್ರಧಾನಕಾರ್ಯದರ್ಶಿ ಅತಿಕ್, ಜೆಡಿಎಸ್ ಮುಖಂಡರಾದ ಬಿ.ಎಂ.ಫಾರೂಕ್ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin