ರೈತರ ಸಾಲ ಮನ್ನಾ, ಬಜೆಟ್‍ನಲ್ಲಿ ಸಿಎಂ ಸಿದ್ದರಾಮಯ್ಯ ಐತಿಹಾಸಿಕ ನಿರ್ಧಾರ ಘೋಷಣೆ ಸಾಧ್ಯತೆ

Spread the love

Siddaramaiah-Budget---2017

– ರವೀಂದ್ರ.ವೈ.ಎಸ್

ಬೆಂಗಳೂರು,ಫೆ.17- ನಾಲ್ಕು ದಶಕಗಳ ನಂತರ ಭೀಕರ ಬರಗಾಲಕ್ಕೆ ಸಿಲುಕಿರುವ ನಾಡಿನ ಅನ್ನದಾತನ ಸಂಕಷ್ಟ ನಿವಾರಣೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಬಜೆಟ್‍ನಲ್ಲಿ ರೈತರ ಸಾಲ ಮನ್ನಾ ಮಾಡುವ ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.   ಮಾ.17ರಂದು ತಮ್ಮ ದಾಖಲೆಯ 12ನೇ ಹಾಗೂ 2017-18ನೇ ಸಾಲಿನ ಬಜೆಟ್‍ನಲ್ಲಿ ಹಣಕಾಸು ಖಾತೆ ಹೊಂದಿರುವ ಸಿದ್ದರಾಮಯ್ಯನವರು ರೈತರ ಸಾಲಮನ್ನಾ ಮಾಡುವ ಘೋಷಣೆ ಮಾಡಲಿದ್ದಾರೆ.  ಈ ಮೂಲಕ ರೈತರ ಸಾಲ ಮನ್ನಾ ಮಾಡಿ ಎಂದು ಬೊಬ್ಬೆ ಹಾಕುತ್ತಿರುವ ಪ್ರತಿಪಕ್ಷ ಬಿಜೆಪಿಗೆ ತಿರುಗೇಟು ನೀಡುವುದರ ಮೂಲಕ ಚುನಾವಣಾ ಸಂದರ್ಭದಲ್ಲಿ ಜನರ ವಿಶ್ವಾಸಗಳಿಸುವ ಪ್ರಯತ್ನ ಇದಾಗಿದೆ.

20ರಿಂದ 25 ಸಾವಿರದವರೆಗೆ ಸಣ್ಣ , ಅತಿಸಣ್ಣ ರೈತರು ಸಹಕಾರಿ ಬ್ಯಾಂಕ್‍ಗಳಿಂದ ಪಡೆದಿರುವ ಸುಮಾರು 10,500 ಕೋಟಿ ಸಾಲ ಮನ್ನಾ ಮಾಡಲಿದ್ದಾರೆ.   ಸುಮಾರು 23 ಲಕ್ಷ ರೈತರು ಸಹಕಾರಿ ಬ್ಯಾಂಕ್‍ಗಳಿಂದ 10,500 ಕೋಟಿ ಸಾಲ ಪಡೆದಿದ್ದರೆ, 42000 ಕೋಟಿ ಸಾಲವನ್ನು 33 ಲಕ್ಷ ರೈತರು ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಸಾಲ ಪಡೆದುಕೊಂಡಿದ್ದಾರೆ.   ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲ ಮನ್ನಾ ಮಾಡಿದರೆ ಬೊಕ್ಕಸಕ್ಕೆ ಹೊರೆಯಾಗಬಹುದೆಂಬ ಹಿನ್ನೆಲೆಯಲ್ಲಿ ಸಹಕಾರ ಬ್ಯಾಂಕ್‍ಗಳ ಸಾಲ ಮನ್ನಾ ಮಾಡುವ ಉದ್ದೇಶ ಮುಖ್ಯಮಂತ್ರಿಯದ್ದಾಗಿದೆ.
ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ 52,500 ಕೋಟಿ ಸಾಲದ ಮೊತ್ತದಲ್ಲಿ ಕೇಂದ್ರ ಸರ್ಕಾರ ಅರ್ಧದಷ್ಟು ಮನ್ನಾ ಮಾಡಿದರೆ ರಾಜ್ಯ ಸರ್ಕಾರವು ಮನ್ನಾ ಮಾಡಲಿದೆ ಎಂದು ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟಪಡಿಸಿದ್ದರು.

ರಾಜ್ಯದಲ್ಲಿ ಬರಗಾಲ ಇರುವುದರಿಂದ ರೈತರ ಸಾಲಮನ್ನಾ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಖುದ್ದು ಭೇಟಿ ಮಾಡಿ ಮನವಿ ಮಾಡಿದ್ದರು. ಅಲ್ಲದೆ ಪತ್ರವನ್ನು ಸಹ ಬರೆದಿದ್ದರು. ಆದರೆ ಇದಕ್ಕೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.   ಇತ್ತೀಚೆಗೆ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಉತ್ತರಿಸಿದ್ದ ಮುಖ್ಯಮಂತ್ರಿ, ಕೇಂದ್ರ ಸರ್ಕಾರ ರೈತರ ಅರ್ಧದಷ್ಟು ಸಾಲ ಮನ್ನಾ ಮಾಡಿದರೆ ರಾಜ್ಯ ಸರ್ಕಾರವೂ ಸಿದ್ದವಿದೆ ಎಂದು ಘೋಷಿಸಿದ್ದರು.   ಪ್ರತಿಪಕ್ಷ ಬಿಜೆಪಿ ಮೊದಲು ನೀವು ರೈತರ ಸಾಲಮನ್ನಾ ಮಾಡಿ ನಂತರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರೋಣ ಎಂದು ಸವಾಲು ಎಸಗಿತ್ತು.

ಬಿಜೆಪಿಗೆ ಟಾಂಗ್:

ಪದೇ ಪದೇ ರೈತರ ಸಾಲಮನ್ನಾ ಮಾಡಿ ಎಂದು ಅಬ್ಬರಿಸುತ್ತಿರುವ ಬಿಜೆಪಿಗೆ ಟಾಂಗ್ ಕೊಡಲು ತೀರ್ಮಾನಿಸಿರುವ ಸಿದ್ದರಾಮಯ್ಯ ಸಹಕಾರಿ ಬ್ಯಾಂಕ್‍ಗಳ ರೈತರ ಸಾಲ ಮನ್ನಾ ಮಾಡುವ ಮೂಲಕ ಒಂದೇ ಏಟಿಗೆ ಹಲವು ಹಕ್ಕಿಗಳನ್ನು ಹೊಡೆಯಲಿದ್ದಾರೆ.   ಮೊದಲು ಬಿಜೆಪಿ ಹಾಗೂ ಜೆಡಿಎಸ್ ತಮ್ಮ ಸರ್ಕಾರದ ವಿರುದ್ದ ಮಾಡುತ್ತಿರುವ ಟೀಕೆಗಳಿಗೆ ಬ್ರೇಕ್ ಹಾಕುವುದು ಹಾಗೂ ಮುಂದಿನ ವರ್ಷ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರೈತರ ಮನ ಗೆಲ್ಲುವುದು ಅವರ ಉದ್ದೇಶವಾಗಿದೆ.  ಸಂಕಷ್ಟದಲ್ಲಿದ್ದರೂ ಸರ್ಕಾರ ರೈತರ ನೆರವಿಗೆ ಧಾವಿಸಿದೆ ಎಂಬ  ಸಹಾನೂಭೂತಿಯನ್ನು ಗಿಟ್ಟಿಸುವುದರ ಜೊತೆಗೆ ನಮ್ಮದು ಜನಪರ ಸರ್ಕಾರ ಎಂಬುದುನ್ನು ರುಜುವಾತು ಮಾಡಲಿದ್ದಾರೆ. 20-25 ಸಾವಿರದವರೆಗೆ ರೈತರ ಸಾಲಮನ್ನಾ ಮಾಡುವ ಮೂಲಕ ಸರ್ಕಾರ ಹಾಗೂ ಪಕ್ಷವನ್ನು ಭದ್ರಪಡಿಸುವುದು ಅವರ ಆಲೋಚನೆಯಾಗಿದೆ.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಮ್ಮ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡಿದ್ದರು. ಸರ್ಕಾರದ ಬೊಕ್ಕಸಕ್ಕೆ 2,500 ಕೋಟಿ ಹೊರೆ ಆಗಿತ್ತು. ಶೆಟ್ಟರ್ ಕೇವಲ 900 ಕೋಟಿ ಹಣವನ್ನು ಬೊಕ್ಕಸಕ್ಕೆ ಪಾವತಿಸಿದರೆ ಉಳಿದ ಹಣವನ್ನು ಸಿದ್ದರಾಮಯ್ಯನವರೇ ಪಾವತಿಸಿದ್ದರು.   ಇದಕ್ಕೂ ಮೊದಲು ಕುಮಾರಸ್ವಾಮಿ ಮುಖ್ಯಮಂತ್ರಯಾಗಿದ್ದ ಸಂದರ್ಭದಲ್ಲೂ ರೈತರ ಸಾಲ ಮನ್ನಾ ಮಾಡಲಾಗಿತ್ತು. ಈಗ ಬೊಕ್ಕಸಕ್ಕೆ 10,500 ಕೋಟಿ ಹೊರೆಯಾದರೂ, ಈ ಬಾರಿ ತೆರಿಗೆ ಸಂಗ್ರಹಣೆ ನಿರೀಕ್ಷಿತ ಗುರಿ ತಲುಪಿರುವುದರಿಂದ ಸಮಸ್ಯೆ ಉಂಟಾಗುವುದಿಲ್ಲ ಎಂಬ ಲೆಕ್ಕಾಚಾರ ಮುಖ್ಯಮಂತ್ರಿಯದ್ದಾಗಿದೆ.   ಈಗಾಗಲೇ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿರುವ ಸಿದ್ದರಾಮಯ್ಯ ರೈತರ ಸಾಲಮನ್ನಾ ಮಾಡಿದರೆ ಆರ್ಥಿಕ ಇಲಾಖೆಗೆ ಉಂಟಾಗಬಹುದಾದ ಲಾಭ-ನಷ್ಟದ ವಿವರ ನೀಡುವಂತೆ ಸೂಚಿಸಿದ್ದಾರೆ.

ಸಾಲಮನ್ನಾದಿಂದ ಆರ್ಥಿಕ ಹೊರೆಯಾದರೆ ತೆರಿಗೆ ಪ್ರಮಾಣವನ್ನು ಹೆಚ್ಚಳ ಮಾಡುವ ಸಂಭವವಿದೆ. ಸಿಗರೇಟ್, ಮದ್ಯ, ಚಿನ್ನಾಭರಣ, ವಾಹನ ಖರೀದಿ ಸೇರಿದಂತೆ ಮತ್ತಿತರ ವಸ್ತುಗಳ ಮೇಲೆ ತೆರಿಗೆ ಭಾರ ವಿಧಿಸಲಾಗಿದ್ದರೆ ಎಂದು ಗೊತ್ತಾಗಿದೆ. ಇದರ ಜೊತೆಗೆ ಈ ಬಾರಿಯ ಬಜೆಟ್‍ನಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin