ರೈತ ಸಂಘ,ಹಸಿರು ಸೇನೆ ವತಿಯಿಂದ ಕಾಂಗ್ರೆಸ್, ಬಿಜೆಪಿ ಧೋರಣೆ ಖಂಡಿಸಿ ಪ್ರತಿಭಟನೆ

turvekere
ತುರುವೇಕೆರೆ, ಏ.19- ರೈತರ ಸಾಲ ಮನ್ನಾ ವಿಚಾರದಲ್ಲಿ ರಾಜಕೀಯ ಮುಖಂಡರು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ಅನ್ನದಾತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ  ಕೆ.ಟಿ.ಗಂಗಾಧರ್ ಆರೋಪಿಸಿದರು.  ಸಾಲ ವಸೂಲಾತಿಗಾಗಿ ರೈತರ ಭೂಮಿ ಹರಾಜಿಗೆ ಹಾಕುವುದು ಹಾಗೂ ರೈತರನ್ನು ಜೈಲಿಗೆ ಕಳುಹಿಸುವ ಅಧಿಕಾರಿಗಳ ಕ್ರಮ ಖಂಡಿಸಿ ತಾಲೂಕಿನ ತಂಡಗ ಗೇಟ್‍ನಲ್ಲಿರುವ ಐಒಬಿ ಬ್ಯಾಂಕ್ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.ಕಳೆದ ಐದು ವರ್ಷಗಳಿಂದ ನಿರಂತರ ಬರಗಾಲ ಆವರಿಸಿದ್ದು, ಭಾರತ ಸರ್ಕಾರದ ನಿಯೋಗ ವರದಿ ನೀಡಿದ್ದು ಮತ್ತು ರಾಜ್ಯ ಸರ್ಕಾರದ ಸಮಿತಿಯು ದೃಢೀಕರಿಸಿದೆ. ಆದರೆ, ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ ರಾಷ್ಟೀಕೃತ ಬ್ಯಾಂಕ್‍ಗಳ ರೈತರ ಸಾಲ ಮನ್ನಾ ಮಾಡಿದರೆ ನಾವು ಸಹಕಾರಿ ಸಂಘದ ಸಾಲವನ್ನು ಮನ್ನಾ ಮಾಡುತ್ತೇವೆ ಎನ್ನುತ್ತಾರೆ. ರಾಜ್ಯದ ಬಿಜೆಪಿಯವರು ರಾಜ್ಯ ಮೊದಲು ಮಾಡಲಿ, ಆಮೇಲೆ ಕೇಂದ್ರ ಮಾಡಲಿದೆ ಎಂದು ಹೇಳುತ್ತಾರೆ. ಇಂತಹ ಹೇಳಿಕೆಗಳು ಜನರಿಗೆ ಹೇಸಿಗೆ ಹುಟ್ಟಿಸುತ್ತಿವೆ ಎಂದು ಕಿಡಿಕಾರಿದರು.ಯಾರೇ ಬಂದರೂ ರೈತರ ಭೂಮಿ ಕಿತ್ತುಕೊಳ್ಳಲು ರೈತ ಸಂಘ ಬಿಡುವುದಿಲ್ಲ. ದೇಶದ ಆಹಾರ ಭದ್ರತಾ ದೃಷ್ಟಿಯಿಂದ ಪ್ರತಿ ಬ್ಯಾಂಕ್ ಗಳು ಕೃಷಿಗೆ ಶೇ.17ರಷ್ಟು ಸಾಲ ನೀಡಬೇಕು. ಇಂತಹ ಸಾಲವನ್ನು ಪ್ರಾಣ, ಭೂಮಿ ಕೊಟ್ಟು ಸಾಲ ತೀರಿಸಲಾಗದು. ದೇಶದ ದೊಡ್ಡ ಶ್ರೀಮಂತರ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ ರೈತರ ಸಾಲ ಮಾಡಿದರೆ ಬ್ಯಾಂಕ್‍ಗಳು ದಿವಾಳಿಯಾಗಲಿವೆ ಎಂದು ಹೇಳಿಕೆ ನೀಡುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನಕಾರರ ಜತೆ ಐಒಬಿ ಬ್ಯಾಂಕ್ ಚೀಫ್ ರಾಮಕೃಷ್ಣಯ್ಯ ಮಾತನಾಡಿ, ಬರಗಾಲದಿಂದಾಗಿ ಸಾಲ ವಸೂಲಾತಿ ನಿಲ್ಲಿಸಿ ರೈತರ ಭೂಮಿಯನ್ನು ಹರಾಜು, ರೈತರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡುತ್ತಿಲ್ಲ. ಯಾವುದೇ ರೈತರು ತಮ್ಮ ಸಮಸ್ಯೆ ಹಾಗೂ ಸಾಲ ತೀರುವಳಿ ಬಗ್ಗೆ ಲಿಖಿತವಾಗಿ ತಿಳಿಸಿಲ್ಲ. ಸಾಲ ಪಡೆದ ರೈತರು ನಿರ್ದಿಷ್ಟ ಹಣ ಕಟ್ಟಲು ಮುಂದೆ ಬಂದರೆ ಕೇಂದ್ರ ಕಚೇರಿ ಅಧಿಕಾರಿಗಳಲ್ಲಿ ಮಾತನಾಡಿ ಸಾಲ ತೀರುವಳಿ ಮಾಡಿಕೊಡಲಾಗುವುದು ಎಂದು ತಿಳಿಸಿ ಪ್ರತಿಭಟನೆ ಕೈಬಿಡಲು ಮನವಿ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು.  ರೈತ ಕರೀಗೌಡ ಮಾತನಾಡಿ, ಬ್ಯಾಂಕ್‍ನಲ್ಲಿ ನಾವು ಪ್ರತಿದಿನ ವ್ಯವಹಾರ ಮಾಡಲು ಆಗುತ್ತಿಲ್ಲ. ಸರಿಯಾದ ಸಲಹೆ ಸಿಗುತ್ತಿಲ್ಲ, ಅದ್ದರಿಂದ ಗ್ರಾಮೀಣ ಪ್ರದೇಶದ ಬ್ಯಾಂಕ್‍ಗಳಿಗೆ ಕನ್ನಡ ಬರುವ ಅಧಿಕಾರಿಯನ್ನು ಹಾಕಿ ಎಂದು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಗೋವಿಂದರಾಜ್, ಗೌರವಾಧ್ಯಕ್ಷ ನಿಜನಂದಮೂರ್ತಿ, ತಾಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ, ಗೌರವಾಧ್ಯಕ್ಷ ಅಸ್ಲಾಂ ಪಾಷ, ಮುಖಂಡರಾದ ಜಾಫರ್ , ಬಸವರಾಜು, ರಹಮತ್‍ವುಲ್ಲಾ, ಶಿವಕುಮಾರ್, ಚಂದ್ರಪ್ಪ, ಗಿರಿಯಪ್ಪ, ರೈತ ರಾಮೇಗೌಡ ಸೇರಿದಂತೆ ಮತ್ತಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Sri Raghav

Admin