ರೈಲಿನಲ್ಲಿ ಸಾಗಿಸುತ್ತಿದ್ದ 33 ಮೊಲಗಳ ರಕ್ಷಣೆ
ತುಮಕೂರು,ಸೆ.4-ಬೆಂಗಳೂರು-ತುಮಕೂರು ನಡುವಿನ ಪ್ಯಾಸೆಂಜರ್ ರೈಲು ಗಾಡಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 33 ಮೊಲಗಳನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ತುಮಕೂರಿಗೆ ಬಂದ ರೈಲು ಗಾಡಿಯಲ್ಲಿದ್ದ ಒಂದು ಡಬ್ಬವನ್ನು ಆರ್.ಸಿ.ಎಫ್. ಪಿ.ಎಸ್.ಐ ಕುಬೇರಪ್ಪ ಮತ್ತು ತಂಡ ಪರಿಶೀಲಿಸಿದಾಗ ಮೊಲಗಳು ಇರುವುದು ಪತ್ತೆಯಾಗಿದೆ. ಮೊಲಗಳನ್ನು ತುಮಕೂರಿಗೆ ತಂದವರು, ರೈಲ್ವೆ ನಿಲ್ದಾಣದಲ್ಲಿ ಪೊಲೀಸರನ್ನು ನೋಡಿ ಓಡಿ ಹೋಗಿರಬಹುದು ಎಂದು ಊಹೆ ಮಾಡಲಾಗಿದೆ. ಸದರಿ ಮೊಲಗಳನ್ನು ರೈಲ್ವೆ ಪೊಲೀಸರು ಪಶು ಸಂಗೋಪನಾ ಇಲಾಖೆಯ ವಶಕ್ಕೆ ನೀಡಿದ್ದಾರೆ.