ರೋಗಿಗಳಿಗೆ ತುರ್ತು ರಕ್ತ ಪೂರೈಕೆಗೆ ಮೊಬೈಲ್ ಅಪ್ಲಿಕೇಷನ್
ಬೆಂಗಳೂರು, ನ.3- ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ತತ್ಕ್ಷಣವೇ ರಕ್ತ ಒದಗಿಸಲು ಐರಿಲೀಫ್ ಮೊಬೈಲ್ ಅಪ್ಲಿಕೇಷನ್ ಇಂದಿನಿಂದ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ.ಐ ರಿಲೀಫ್ ಸಂಸ್ಥೆಯು ಹೊರತಂದಿರುವ ಈ ವಿನೂತನ ಯೋಜನೆಗೆ ಸಚಿವ ರೋಷನ್ ಬೇಗ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕಂಪೆನಿಯ ಹಿರಿಯ ಅಧಿಕಾರಿಗಳು ಚಾಲನೆ ನೀಡಿದರು. ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಐರಿಲೀಫ್ ಕಾರ್ಯ ನಿರ್ವಹಿಸಲಿದ್ದು, ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಬೇಕಾಗುವ ರಕ್ತವನ್ನು ಆ್ಯಪ್ ಮೂಲಕ ಪಡೆಯಬಹುದಾಗಿದೆ.ಗೂಗಲ್ ಪ್ಲೇಸ್ಟೋರ್ನಿಂದ ಐರಿಲೀಫ್ ಇನ್ಸ್ಟಾಲ್ ಮಾಡಿಕೊಂಡರೆ ಸಾಕು, ರೋಗಿಗೆ ಯಾವ ವಿಧದ ರಕ್ತ ಬೇಕಾಗುತ್ತದೆ ಎಂಬುದನ್ನು ತಿಳಿಸಿದರೆ ಮನೆ ಬಾಗಿಲಿಗೆ ರಕ್ತ ಪೂರೈಕೆಯಾಗುವ ವ್ಯವಸ್ಥೆ ಇದರಲ್ಲಿ ಲಭ್ಯವಾಗಲಿದೆ. ಅಲ್ಲದೆ, ರಕ್ತದಾನಿಗಳನ್ನೂ ಕೂಡ ಆ್ಯಪ್ನಿಂದಲೇ ಪತ್ತೆ ಮಾಡಿ ತಕ್ಷಣವೇ ಸಂದೇಶ ರವಾನಿಸಲಾಗುವುದು. ಇದಕ್ಕಾಗಿ ಕೆಲವು ರಕ್ತನಿಧಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಇದಲ್ಲದೆ, ಐರಿಲೀಫ್ ಆ್ಯಂಬುಲೆನ್ಸ್ ಸೇವೆಯನ್ನೂ ಒದಗಿಸಲಿದೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ತಮಗೆ ಬೇಕಾದ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡು ಆ್ಯಪ್ ಮೂಲಕ ಮಾಹಿತಿ ನೀಡಿದರೆ ಮನೆ ಬಾಗಿಲಿಗೆ ಆ್ಯಂಬುಲೆನ್ಸ್ ಕ್ಷಣಾರ್ಧದಲ್ಲಿ ಲಭ್ಯವಾಗಲಿದೆ. ಜತೆಗೆ ಔಷಧ ಮಾರಾಟ ಮಾಡುವವರು ಮತ್ತು ಕೊಳ್ಳುವವರ ನಡುವೆಯೂ ಈ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿದ್ದು, ಒಂದು ವೇಳೆ ರೋಗಿಗಳು ಔಷಧಿ ಖರೀದಿ ಮಾಡಲು ಸಾಧ್ಯವಾಗದಿದ್ದರೆ ವೈದ್ಯರು ಶಿಫಾರಸು ಮಾಡಿರುವ ಔಷಧಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಇದೆ.
ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಚಿವ ರೋಷನ್ ಬೇಗ್, ಎಷ್ಟೋ ಸಂದರ್ಭಗಳಲ್ಲಿ ರೋಗಿಗಳಿಗೆ ರಕ್ತ ಸಿಗದೆ ಸಾವನ್ನಪ್ಪಿರುವ ಪ್ರಕರಣ ನಮ್ಮ ಕಣ್ಣ ಮುಂದೆ ಇವೆ. ಇಂತಹ ವಿನೂತನ ಯೋಜನೆಯಿಂದ ಕೆಲವರ ಪ್ರಾಣ ರಕ್ಷಣೆ ಮಾಡಬಹುದು ಎಂದರು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೆಲವು ವೇಳೆ ನಮಗೆ ಬೇಕಾದ ರಕ್ತ ಸಿಗುವುದಿಲ್ಲ. ಹಾಗಾಗಿ ಐರಿಲೀಫ್ ಮೊಬೈಲ್ ಅಪ್ಲಿಕೇಷನ್ ಮೂಲಕವೇ ಎಲ್ಲ ವಿಧವಾದ ರಕ್ತವನ್ನು ಪಡೆಯಬಹುದಾಗಿದ್ದು, ಇದೊಂದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.