ಲಕ್ಷ್ಮೇಶ್ವರ ಲಾಕಪ್‍ಡೆತ್ ಪ್ರಕರಣ ಸಿಐಡಿ ತನಿಖೆಗೆ

KJ-George-Session

ಬೆಂಗಳೂರು, ಫೆ.7- ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ನಡೆದಿರುವ ಲಾಕಪ್‍ಡೆತ್ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವುದಾಗಿ ಘೋಷಿಸಿರುವ ಗೃಹ ಸಚಿವ ಪರಮೇಶ್ವರ್ ಅವರು, ಅಕ್ರಮ ಮರಳುಗಣಿಗಾರಿಕೆಯನ್ನು ತಡೆಯಲು ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ.  ವಿಧಾನಸಭೆಯ ಶೂನ್ಯವೇಳೆಯಲ್ಲಿ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು, ಲಕ್ಷ್ಮೇಶ್ವರ ಠಾಣೆಯ ಲಾಕಪ್‍ಡೆತ್ ಪ್ರಕರಣವನ್ನು ಪ್ರಸ್ತಾಪಿಸಿ ಅಕ್ರಮ ಮರಳುಗಣಿಗಾರಿಕೆ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಚಾಲಕನನ್ನು ಒಡೆದು ಸಾಯಿಸಿದ ಆರೋಪ ಕೇಳಿ ಬರುತ್ತಿದೆ. ಅಲ್ಲಿ ಇನ್ಸ್‍ಪೆಕ್ಟರ್ ಅವರೇ ಅಕ್ರಮ ಮರಳು ಗಣಿಗಾರಿಕೆಗೆ ಕಿಂಗ್‍ಪಿನ್ ಆಗಿದ್ದಾರೆ. ದೊಡ್ಡ ದೊಡ್ಡ ವ್ಯಕ್ತಿಗಳು ಶಾಮೀಲಾಗಿದ್ದಾರೆ. ಅಕ್ರಮ ಮರಳುಗಣಿಗಾರಿಕೆಯಿಂದ ನಿರಂತರ ಮಾಮೂಲಿ ವಸೂಲಿಯಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಇದಕ್ಕೆ ಉತ್ತರ ನೀಡಿದ ಪರಮೇಶ್ವರ್, ರಾಜ್ಯದಲ್ಲಿ ಅಕ್ರಮ ಮರಳುಗಣಿಗಾರಿಕೆ ನಡೆಯುತ್ತಿರುವುದು ನಿಜ. ಕಂದಾಯ, ಲೋಕಪಯೋಗಿ, ಪೊಲೀಸ್ ಇಲಾಖೆ ಜಂಟಿಯಾಗಿ ಪ್ರಯತ್ನ ಮಾಡುತ್ತಿದ್ದರೂ ಅಧಿಕಾರಿಗಳನ್ನು ಮೀರಿ ಅಕ್ರಮ ಮರಳುಗಣಿಗಾರಿಕೆ ನಡೆಯುತ್ತಿದೆ ಎಂದು ವಿಷಾದಿಸಿದರು.  ನಮ್ಮ ಸರ್ಕಾರ ಸುಮ್ಮನೆ ಕುಳಿತಿಲ್ಲ. ಕಳೆದ 3 ವರ್ಷದಲ್ಲಿ 16,200 ಪ್ರಕರಣಗಳನ್ನು ದಾಖಲಿಸಿದೆ. 2014ರಲ್ಲಿ 2966, 2015ರಲ್ಲಿ 6352, 2016ರಲ್ಲಿ 6885 ಪ್ರಕರಣಗಳು ದಾಖಲಾಗಿವೆ. 30 ಸಾವಿರ ಮಂದಿಯನ್ನು ಬಂಧಿಸಿದ್ದೇವೆ. 25,957 ವಾಹನಗಳನ್ನು ಜಪ್ತಿ ಮಾಡಿದ್ದೇವೆ ಎಂದು ವಿವರಿಸಿದರು.

ಆಕಸ್ಮಿಕವಾಗಿ ಲಕ್ಷ್ಮೇಶ್ವರದಂತಹ ಪ್ರಕರಣಗಳು ನಡೆಯುತ್ತವೆ. ಇಂತಹ ಪ್ರಕರಣಗಳಲ್ಲಿ ಯಾರೇ ಶಾಮೀಲಾಗಿದ್ದರೂ ಕ್ಷಮಿಸುವುದಿಲ್ಲ. ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವುದು ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು, ಲಕ್ಷ್ಮೇಶ್ವರ ಲಾಕಪ್‍ಡೆತ್ ಪ್ರಕರಣದಲ್ಲಿ ಸಿಐಡಿ ತನಿಖೆ ನಡೆಸಲಾಗುವುದು ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin