ಲಾಕಪ್ ಡೆತ್ : ಉದ್ರಿಕ್ತರಿಂದ ಪೊಲೀಸ್ ಠಾಣೆ, ವಾಹನಗಳಿಗೆ ಬೆಂಕಿ, ಲಕ್ಷ್ಮೇಶ್ವರ ಉದ್ವಿಗ್ನ

Spread the love

Gadag--1

ಗದಗ, ಫೆ.5– ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆಸಿದ್ದ ಯುವಕನೊಬ್ಬ ಸಾವನ್ನಪ್ಪಿದ್ದು, ಇದು ಲಾಕಪ್ ಡೆತ್ ಎಂದು ಮೃತನ ಕಡೆಯವರು ಹಾಗೂ ಗ್ರಾಮಸ್ಥರು  ಆರೋಪಿಸಿ, ಠಾಣೆ ಮೇಲೆ ದಾಳಿ ನಡೆಸಿ ಒಂದು ಜೀಪ್ ಮತ್ತು ಎರಡು ಬೈಕ್‍ಗಳಿಗೆ ಬೆಂಕಿ ಹಚ್ಚಿದ್ದಾರೆ.  ಉದ್ರಿಕ್ತಗೊಂಡ ಜನರು ಠಾಣೆಯ ಗಾಜುಗಳನ್ನು ಪುಡಿಪುಡಿ ಮಾಡಿ, ಪೀಠೋಪಕರಣಗಳನ್ನು ಧ್ವಂಸ ಮಾಡಿರುವುದಲ್ಲದೆ ಠಾಣೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಆದರೂ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಮೃತ ವ್ಯಕ್ತಿಯನ್ನು ಶಿರಹಟ್ಟಿ ತಾಲ್ಲೂಕಿನ ಬೊಟ್ಟೂರು ಗ್ರಾಮದ ಶಿವಾನಂದ ಗೂಳಿ(21) ಎಂದು ಗುರುತಿಸಲಾಗಿದೆ.

ಅಕ್ರಮ ಮರಳು ಸಾಗಾಣಿಕೆ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದ ವೇಳೆ ಪೊಲೀಸರ ಥಳಿತದಿಂದಲೇ ಮೃತಪಟ್ಟಿದ್ದಾರೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು ಠಾಣೆಯ ಮುಂದಿದ್ದ ಹೂಕುಂಡ ಹಾಗೂ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಹನಗಳಿಗೆ ಬೆಂಕಿ:

ಠಾಣೆ ಮುಂದೆ ನಿಂತಿದ್ದ ಜೀಪ್ ಹಾಗೂ ಬೈಕ್‍ಗಳಿಗೂ ಬೆಂಕಿ ಇಟ್ಟ ಪರಿಣಾಮ ಸಂಪೂರ್ಣ ವಾಹನಗಳು ಸುಟ್ಟು ಕರಕಲಾಗಿವೆ. ಜನರ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಠಾಣೆಯ ಪಿಎಸ್‍ಐ ದೇವಾನಂದ್  ಹಾಗೂ ಸಿಬ್ಬಂದಿ ಪರಾರಿಯಾಗಿದ್ದಾರೆ.  ಠಾಣೆಗೆ ಜನ ಜಮಾಯಿಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಕಡತಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ. ಈ ವೇಳೆ ಹಲವು ದಾಖಲೆ ಪತ್ರಗಳು, ಪೀಠೋಪಕರಣಗಳು ನಾಶವಾಗಿವೆ ಎಂದು ತಿಳಿದುಬಂದಿದೆ.  ಕೂಡಲೇ ಸ್ಥಳಕ್ಕಾಗಮಿಸಿದ  ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಪೊಲೀಸ್ ಠಾಣೆಯ ಮುಂದೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಧರಣಿ ಕುಳಿತಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.

Gadag--3

ಅಘೋಷಿತ ಬಂದ್:

ಲಕ್ಷ್ಮೇಶ್ವರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಪಿಎಸ್‍ಐ ವಿಜಯಕುಮಾರ್ ಪರಿಶೀಲನೆ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಕೂಡ ನಡೆಸಿದ್ದಾರೆ. ವಿಚಾರಣೆ ನೆಪದಲ್ಲಿ ಶಿವಪ್ಪ ಗೂಳಿಯನ್ನು ಠಾಣೆಗೆ ಕರೆಸಿದ್ದ ಸಂದರ್ಭದಲ್ಲಿ ಅವನು ಸಾವನ್ನಪ್ಪಿದ್ದು  ಇದಕ್ಕೆ ಪೊಲೀಸರೇ ಕಾರಣ. ನಮಗೆ ನ್ಯಾಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿ ಠಾಣೆ ಮುಂದೆ ಧರಣಿ ಕುಳಿತಿದ್ದಾರೆ.

Gadag--4

ಶಿಸ್ತು ಕ್ರಮ:

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಗದಗ ಜಿಲ್ಲಾ  ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಅವರು ಲಕ್ಷ್ಮೇಶ್ವರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ.   ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಈತನ ಸಾವಿಗೆ ಕಾರಣ ತಿಳಿಯುತ್ತದೆ. ಪೊಲೀಸರ ತಪ್ಪಿದ್ದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಆದರೆ ಠಾಣೆ ಮೇಲೆ ದಾಳಿ ಮಾಡಿರುವುದು ಸರಿಯಲ್ಲ.  ದುಷ್ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ದವೂ ಕೂಡ ಕ್ರಮ ಕೈಗೊಳ್ಳುತ್ತೇವೆ. ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿರುವ ಹಾವೇರಿ ಎಸ್ಪಿ  ಮಂಜುನಾಥ್ ಪ್ರತಿಭಟನಾನಿರತರ ಮನವೊಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.   ಲಾಕಪ್ ಡೆತ್‍ಗೆ ಕಾರಣರಾದ ಪಿಎಸ್‍ಐ ಅವರನ್ನು ಸ್ಥಳಕ್ಕೆ ಕರೆಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದ್ದು , ಆಕ್ರೋಶಗೊಂಡಿರುವ ಪ್ರತಿಭಟನಾಕಾರರೊಂದಿಗೂ ಎಸ್ಪಿಯವರು ಮಾತುಕತೆ ನಡೆಸಿದರು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.  ಹೆಚ್ಚಿನ ಭದ್ರತೆಗಾಗಿ ಐದು ಡಿಆರ್, ಮೂರು ಕೆಎಸ್‍ಆರ್ ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Gadag--2

Sri Raghav

Admin