ಲೋಕಸಭೆಯಲ್ಲಿ ಗಾಯಕ್ವಾಡ್ ಪ್ರಕರಣ ಪ್ರತಿಧ್ವನಿ, ಸಚಿವರ ಮೇಲೆ ಹಲ್ಲೆಗೆ ಯತ್ನಿಸಿದ ಶಿವಸೇನೆ

Loksabha--01

ನವದೆಹಲಿ, ಏ.6- ಏರ್ ಇಂಡಿಯಾ ಹಿರಿಯ ವ್ಯವಸ್ಥಾಪಕರ ಮೇಲೆ ಹಲ್ಲೆ ನಡೆಸಿ ವಿಮಾನಯಾನ ನಿರ್ಬಂಧನಕ್ಕೆ ಒಳಗಾಗಿರುವ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಪ್ರಕರಣ ಇಂದು ಲೋಕಸಭೆಯಲ್ಲಿ ಪ್ರತಿಧ್ವನಿಸಿ ಕೋಲಾಹಲದ ವಾತಾವರಣಕ್ಕೆ ಕಾರಣವಾಗಿ ಸದನ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.   ಒಂದು ಹಂತದಲ್ಲಿ ಉದ್ರಿಕ್ತ ಶಿವಸೇನೆ ಸದಸ್ಯರು ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣವೂ ನಡೆಯಿತು.ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿ ಯಿಂದ ಥಳಿಸಿ ತೀವ್ರ ವಿವಾದಕ್ಕೆ ಕಾರಣವಾಗಿರುವ ಗಾಯಕ್ವಾಡ್ ಇಂದು ಸದನಕ್ಕೆ ಹಾಜರಾಗಿ ಘಟನೆ ಕುರಿತು ಹೇಳಿಕೆ ನೀಡಿದರು.

ತಮ್ಮೊಂದಿಗೆ ಏರ್ ಇಂಡಿಯಾದ ಹಿರಿಯ ವ್ಯವಸ್ಥಾಪಕರು ಅನುಚಿತವಾಗಿ ವರ್ತಿಸಿ ಕೊರಳಪಟ್ಟಿ ಹಿಡಿದರು. ಅವರ ವರ್ತನೆಯಿಂದ ಬೇಸತ್ತು ತಾವು ಹಲ್ಲೆ ನಡೆಸಿದ್ದಾಗಿ ಗಾಯಕ್ವಾಡ್ ಸಮರ್ಥಿಸಿ ಕೊಂಡರು. ಅಲ್ಲದೆ, ಈ ಪ್ರಕರಣದ ಬಗ್ಗೆ ನಾನು ಸಂಸತ್ತಿನ ಕ್ಷಮೆ ಕೋರುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ಏರ್ ಇಂಡಿಯಾದ ಕ್ಷಮೆ ಯಾಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಶಿವಸೇನೆ ಸದಸ್ಯರು ಗಾಯಕ್ವಾಡ್ ಮೇಲೆ ವಿಧಿಸಿರುವ ವಿಮಾನ ಯಾನ ನಿರ್ಬಂಧವನ್ನು ತೆರವುಗೊಳಿಸಬೇಕು ಮತ್ತು ಈ ವಿಷಯದಲ್ಲಿ ಸಚಿವ ಅಶೋಕ್ ಗಜಪತಿ ರಾಜ್ ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿ ಸಿದರು. ಆದರೆ, ತಾವು ಈ ವಿಷಯ ದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದ್ದ ಸಚಿವ ಗಜಪತಿ ರಾಜ್ ಸಂಸದರು ಕೂಡ ವಿಮಾನ ಪ್ರಯಾಣಿಕರು. ಅದರ ಎಲ್ಲಕ್ಕಿಂತ ವಿಮಾನದ ಸುರಕ್ಷತೆಗೆ ಮೊದಲ ಆದ್ಯತೆ. ಹೀಗಾಗಿ ಈ ವಿಷಯದಲ್ಲಿ ತಾವು ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ತಿಳಿಸಿದಾಗ ಶಿವಸೇನೆ ಸದಸ್ಯರು ಕುಪಿತರಾಗಿ ಧರಣಿ ನಡೆಸಿದರು.

ಶಿವಸೇನೆ ಸಂಸದ ಅನಂತಗೀತೆ ನೇತೃತ್ವದಲ್ಲಿ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಸ್ಥಳದಲ್ಲಿ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿ ಗದ್ದಲದ ವಾತಾವರಣ ಸೃಷ್ಟಿಸಿದರು.   ಸ್ಪೀಕರ್ ಸುಮಿತ್ರ ಮಹಾಜನ್ ಅವರು ಸುಗಮ ಕಲಾಪ ನಡೆಯಲು ಮತ್ತೆ ಮತ್ತೆ ಮನವಿ ಮಾಡಿದರೂ ಸಂಸದರು ಪ್ರತಿಭಟನೆ ಮುಂದುವರಿಸಿದ್ದರಿಂದ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin