ವರದಿ ಸಲ್ಲಿಸಿದ ನಂತರ 6ನೇ ವೇತನ ಆಯೋಗ ಅಧ್ಯಕ್ಷರು ಹೇಳಿದ್ದೇನು ..?

6th-Pay--02

ಬೆಂಗಳೂರು, ಜ.31-ಆರನೇ ವೇತನ ಆಯೋಗದ ಮೂಲಕ ರಾಜ್ಯ ಸರ್ಕಾರ ತನ್ನ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ 11ನೇ ಬಾರಿಗೆ ವೇತನ ಪರಿಷ್ಕರಣೆ ಮಾಡಿದಂತಾಗುತ್ತದೆ ಎಂದು ಆರನೇ ವೇತನ ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್‍ಮೂರ್ತಿ ಹೇಳಿದರು.  ವರದಿ ಸಲ್ಲಿಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 1946ರಿಂದ ಈವರೆಗೂ 7 ಬಾರಿ ವೇತನ ಪರಿಷ್ಕರಣೆ ಮಾಡಿದೆ. ರಾಜ್ಯ ಸರ್ಕಾರ 1956ರಿಂದ ವೇತನ ಪರಿಷ್ಕರಣೆ ಮಾಡುತ್ತಿದ್ದು, 5 ಆಯೋಗಗಳನ್ನು ರಚಿಸಿದೆ. 5 ಬಾರಿ ವೇತನ ಸಮಿತಿಗಳನ್ನು ರಚಿಸಿ ಒಟ್ಟು 10 ಬಾರಿ ವೇತನ ಪರಿಷ್ಕರಣೆ ಮಾಡಿದೆ. ಈಗ 6ನೇ ವೇತನ ಆಯೋಗವನ್ನು ರಚಿಸಿದ್ದು, ಅದರ ವರದಿ ಸಲ್ಲಿಕೆಯಾಗಿದೆ ಎಂದರು. 6ನೇ ವೇತನ ಆಯೋಗ ವರದಿ ಸಲ್ಲಿಕೆ : ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್..! ]

ವೇತನ ಆಯೋಗ ಕೇಂದ್ರ ಸರ್ಕಾರ, ಆಂಧ್ರಪ್ರದೇಶ ಮತ್ತು ಕೇರಳ ಸರ್ಕಾರಗಳ ವೇತನ ಮಾದರಿಗಳನ್ನು ಅಧ್ಯಯನ ನಡೆಸಿದೆ. ರಾಜ್ಯ ಸರ್ಕಾರ ಮತ್ತು ಇತರೆ ರಾಜ್ಯ ಸರ್ಕಾರಕ್ಕೂ ತುಲನೆ ಮಾಡಿದಾಗ ಆಂಧ್ರಪ್ರದೇಶದಲ್ಲಿ 13 ಸಾವಿರ, ಕೇರಳದಲ್ಲಿ 17ಸಾವಿರ ವೇತನದಲ್ಲಿ ವ್ಯತ್ಯಾಸ ಇರುವುದು ಕಂಡು ಬಂದಿದೆ ಎಂದು ವಿವರಿಸಿದರು. ಮೂಲವೇತನ, ಬಾಡಿಗೆ ಭತ್ಯೆ, ತುಟ್ಟಿಭತ್ತೆ, ಪ್ರಯಾಣ ಭತ್ತೆ, ಸಮವಸ್ತ್ರ ಭತ್ಯೆ ಸೇರಿದಂತೆ ಇತರೆ ಭತ್ಯೆಗಳನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಲು ಶಿಫಾರಸು ಮಾಡಲಾಗಿದೆ. ಸರ್ಕಾರ ಆಯೋಗದ ಕಾಲಾವಧಿಯನ್ನು ವಿಸ್ತರಿಸಿರುವುದರಿಂದ ಇನ್ನು ಮೂರು ತಿಂಗಳಲ್ಲಿ ಅಂತಿಮ ವರದಿ ನೀಡಲಾಗುತ್ತಿದ್ದು, ಅದರಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಡುವೆ ಇರುವ ವೇತನ ತಾರತಮ್ಯವನ್ನು ಸರಿಪಡಿಸಲು ಬಡ್ತಿ ನಿಯಮಾವಳಿಗಳನ್ನು ಏಕರೂಪದಲ್ಲಿ ತರಲು ಸೇವಾ ದಕ್ಷತೆಯನ್ನು ಹೆಚ್ಚಿಸುವ ಕುರಿತು ಅಧ್ಯಯನ ನಡೆಸಿ ವರದಿ ನೀಡಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನ ಬಗ್ಗೆ ಮೊದಲ ವರದಿಯಲ್ಲಿ ಯಾವುದೇ ಶಿಫಾರಸು ಮಾಡಿಲ್ಲ. ಎರಡನೇ ವರದಿಯಲ್ಲಿ ಅಧ್ಯಯನ ನಡೆಸಿ ಅಗತ್ಯ ಶಿಫಾರಸು ಮಾಡಲಾಗುವುದು. ಐದು ದಿನಗಳ ಕೆಲಸದ ಅವಧಿಯನ್ನು ನಿಗದಿ ಪಡಿಸುವ ಬಗ್ಗೆಯೂ ಅಧ್ಯಯನ ನಡೆಸಲಾಗುವುದು. ಪೊಲೀಸರೂ ಸೇರಿದಂತೆ ಇತರೆ ಇಲಾಖೆಗಳ ನಡುವೆ ವೇತನ ತಾರತಮ್ಯ ಇರುವುದನ್ನು ಕೂಡ ಎರಡನೇ ವರದಿಯಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

Sri Raghav

Admin