ವರಮಹಾಲಕ್ಷ್ಮಿ ಹಬ್ಬ : ಗೊರವನಹಳ್ಳಿ ಮಹಾಲಕ್ಷ್ಮಿ ದರ್ಶನಕ್ಕೆ ಹರಿದು ಬಂದ ಜನಸಾಗರ

goravanahalli--1

ತುಮಕೂರು, ಆ.12- ವರಮಹಾಲಕ್ಷ್ಮಿ ವೃತಾಚರಣೆಯ ಅಂಗವಾಗಿ ಪುಣ್ಯಕ್ಷೇತ್ರವಾದ ಕೊರಟಗೆರೆ ತಾಲ್ಲೂಕಿನ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯಕ್ಕೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ  ಭಕ್ತರು  ದೇವಿಯ ದರ್ಶನ ಪಡೆದು ಪುನೀತರಾದರು.   ಇಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿಯೇ ವರಮಹಾಲಕ್ಷ್ಮಿಗೆ ವಿಶೇಷ  ಹೋಮ, ಹವನ, ಪೂಜೆ ಮಾಡಲಾಗಿತ್ತು. ಲಕ್ಷ್ಮೀದೇವಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀದೇವಿಯ ದರ್ಶನ ಪಡೆದರು.   ಗೊರವನಹಳ್ಳಿ ಲಕ್ಷ್ಮೀದೇವಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದೆ. ಕಳೆದ ಮೂರು ದಶಕಗಳಿಂದ ಇಲ್ಲಿ ನೆಲೆಸಿರುವ ಲಕ್ಷ್ಮೀದೇವಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದವರ ಮನೋಭಿಲಾಷೆಗಳು ನೆರವೇರುತ್ತವೆ ಎಂಬ ಪ್ರತೀತಿ ಹಿನ್ನೆಲೆಯಲ್ಲಿ  ಸಾಕಷ್ಟು ಭಕ್ತರು ಇಲ್ಲಿ ಬಂದು ಹೋಗುತ್ತಾರೆ.

goravanahalli-2

ಚಿಕ್ಕದಾಗಿದ್ದ ದೇವಾಲಯ ಈಗ ಅದ್ಭುತವಾಗಿ ನಿರ್ಮಾಣವಾಗಿದೆ. ಪ್ರತೀ ದಿನ ಪೂಜಾ ಕೈಂಕರ್ಯಗಳು ನೆರವೇರುತ್ತವೆ.  ಇಲ್ಲಿಗೆ ಬರುವ ಭಕ್ತರಿಗೆ ಅನ್ನದಾನ, ಪ್ರಸಾದ ವಿನಿಯೋಗ ಮಾಡಲಾಗುತ್ತದೆ.  ಪ್ರತೀ ವರ್ಷದ ವರಮಹಾಲಕ್ಷ್ಮಿ ದಿನದಂದು ಅತ್ಯಂತ ಅದ್ಧೂರಿ ಹಾಗೂ ವಿಶೇಷವಾಗಿ ಇಲ್ಲಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತದೆ. ದೂರದ ಬೀದರ್‍ನಿಂದ ಇಡಿದು ಕೋಲಾರದವರೆಗಿನ ಭಕ್ತರು ಅಲ್ಲದೆ, ಹೊರ ರಾಜ್ಯದ ಭಕ್ತರು ಕೂಡ ಇಲ್ಲಿಗೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸುತ್ತಾರೆ. ಇಂದಿನ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಿತ್ತು. ಬೆಂಗಳೂರು, ಕೋಲಾರ, ಮೈಸೂರು ಮುಂತಾದ ಕಡೆಯಿಂದ ಗೊರವನಹಳ್ಳಿಗೆ ಹೆಚ್ಚುವರಿ ಬಸ್‍ಗಳ ಸೇವೆಯನ್ನು ಕಲ್ಪಿಸಲಾಗಿದೆ.

ರಾಜ್ಯದ ವಿವಿಧೆಡೆಯಿಂದ  ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಇಂದು ಆಗಮಿಸಿದ್ದರು ಎಂದು ದೇವಾಲಯದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.  ಇಲ್ಲಿಗೆ ಬಂದು ಪೂಜೆ ಸಲ್ಲಿಸಿದವರಿಗೆ ಧನಲಕ್ಷ್ಮಿ ಒಲಿಯುವುದಲ್ಲದೆ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ದೃಢವಾದ ನಂಬಿಕೆ ಇರುವುದರಿಂದ ಬಹಳಷ್ಟು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.   ಕಾಣಿಕೆ ರೂಪದಲ್ಲಿ ಕೋಟ್ಯಂತರ ರೂ.  ಸಂಗ್ರಹವಾಗುತ್ತದೆ. ದೇವಾಲಯದ ಆಡಳಿತ ಮಂಡಳಿ ಬರುವ ಭಕ್ತರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿದೆ.

Sri Raghav

Admin