ವಸತಿ ಶಾಲೆ ಸ್ಥಳಾಂತರಕ್ಕೆ ಶಾಸಕರ ಹುನ್ನಾರ : ಇಣಚಗಲ್ ಗ್ರಾಮದ ಪ್ರಮುಖರ ಆರೋಪ

5
ಮುದ್ದೇಬಿಹಾಳ,ನ.5- ತಾಲೂಕಿನ ಇಣಚಗಲ್ ಗ್ರಾಮಕ್ಕೆ ಮಂಜೂರಾತಿ ಸಿಕ್ಕಿರುವ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಹುನ್ನಾರ ನಡೆಸುತ್ತಿರುವ ಶಾಸಕ ಸಿ.ಎಸ್. ನಾಡಗೌಡರ ಧೋರಣೆಯನ್ನು ಖಂಡಿಸುತ್ತೇವೆ. ಒಂದು ವೇಳೆ ಶಾಲೆಯನ್ನು ಸ್ಥಳಾಂತರಗೊಳಿಸಿದರೆ ಗ್ರಾಮಸ್ಥರೆಲ್ಲರೂ ಬೀದಿಗಿಳಿದು ಶಾಸಕರ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಇಣಚಗಲ್ ಗ್ರಾಮಸ್ಥರು ಎಚ್ಚರಿಸಿದ್ದಾರೆ.ಪಟ್ಟಣದಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಲೆ ಇಣಚಗಲ್ ಗ್ರಾಮಕ್ಕೆ ಮಂಜೂರಾಗಿರುವ ಕುರಿತು ದಾಖಲೆಗಳನ್ನು ಪ್ರದರ್ಶಿಸಿ ಸರ್ಕಾರದ ಅಧೀನ ಕಾರ್ಯದರ್ಶಿಗೆ ಬರೆದಿರುವ ಪತ್ರದ ಪ್ರತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರಾದ ಸಾಬಣ್ಣ ತಳವಾರ, ನಾಗರಾಜ ಕನ್ನೊಳ್ಳಿ, ವೀರೇಶ ಖೈನೂರ, ಬಿ.ಆರ್. ತಳ್ಳೊಳ್ಳಿ ಮತ್ತಿತರರು, ಇಣಚಗಲ್ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಾದ ಜಕ್ಕೇರಾಳ, ಹೊಕ್ರಾಣಿ, ಗೋನಾಳ, ಜಮ್ಮಲದಿನ್ನಿ, ಗುಡ್ನಾಳ, ಇಂಗಳಗೇರಿ, ಹುಲಗಬಾಳ, ಬಾವೂರ, ಹಗರಗುಂಡ, ಅಬ್ಬಿಹಾಳ, ಕುಂಟೋಜಿ ಮತ್ತಿತರ ಗ್ರಾಮದ ವ್ಯಾಪ್ತಿಯ ಮಕ್ಕಳಿಗೆ ಈ ಶಾಲೆ ಅನುಕೂಲ ಒದಗಿಸಲಿದೆ ಎಂದು ಹೇಳಿದರು.2015-16ನೇ ಸಾಲಿನಲ್ಲಿ ರಾಜ್ಯದಲ್ಲಿ ಹೊಸದಾಗಿ ಅಲ್ಪಸಂಖ್ಯಾತರರ ಮೊರಾರ್ಜಿ ವಸತಿ ಶಾಲೆಗಳ ನಿರ್ಮಾಣ ಯೋಜನೆಯ ಅಡಿಯಲ್ಲಿ ಇಣಚಗಲ್ ಗ್ರಾಮಕ್ಕೂ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ ಮಂಜೂರಾಗಿದೆ. ಈಗ ಇಣಚಗಲ್ ಗ್ರಾಮದ ಸರ್ವೆ ಸಂ.51/1ನೇದ್ದರಲ್ಲಿ 13.36 ಎಕರೆ ಜಾಗ ಇದ್ದು ಈ ಸ್ಥಳವನ್ನು ಸದರಿ ಶಾಲೆಯ ನಿರ್ಮಾಣಕ್ಕೆಂದು ಇಲಾಖೆಯವರು ಆಯ್ಕೆ ಮಾಡಿಕೊಂಡಿದ್ದು ಕಟ್ಟಡ ಕಾಮಗಾರಿ ಆರಂಭಿಸುವುದೊಂದೇ ಬಾಕಿ ಇದೆ ಎಂದು ತಿಳಿಸಿದರು.

ಆದರೆ ಈ ಎಲ್ಲ ಪ್ರಕ್ರಿಯೆಗಳು ನಡೆಯುವವರೆಗೆ ಸುಮ್ಮನಿದ್ದ ಶಾಸಕ ಸಿ.ಎಸ್. ನಾಡಗೌಡ ಅವರು ಏಕಾಏಕಿ ಈ ವಸತಿ ಶಾಲೆಯನ್ನು ಬೇರೆಡೆಗೆ ಸ್ಥಳಾಂತರ ಮಾಡುತ್ತಿದ್ದಾರೆ. ನಾಡಗೌಡರ ಈ ಕ್ರಮವನ್ನು ನಾವೆಲ್ಲ ಖಂಡಿಸುತ್ತೇವೆ ಎಂದು ತಿಳಿಸಿದರು.ಶಾಲೆಗೆ ಬೇಕಾಗುವಷ್ಟು ಜಾಗೆಗೆ ಇನ್ನಷ್ಟು ಜಾಗೆಯ ಅವಶ್ಯಕತೆ ಬಿದ್ದಲ್ಲಿ ಅದನ್ನು ನಾವು ಒದಗಿಸಿಕೊಡುತ್ತೇವೆ. ಈ ಶಾಲೆಯು ನಮ್ಮಲ್ಲಿ ಆರಂಭಗೊಳ್ಳುವುದರಿಂದ ಶೈಕ್ಷಣಿಕವಾಗಿ ನಮ್ಮ ಭಾಗದ ಹಳ್ಳಿಗಳಿಗೂ ಮತ್ತು ತಾಲೂಕಿನ ಇತರೆ ಗ್ರಾಮಗಳಲ್ಲಿನ ಅಲ್ಪಸಂಖ್ಯಾತ ಮಕ್ಕಳಿಗೆ ಅನುಕೂಲವಾಗುತ್ತದೆ. ಕಾರಣ ಇಣಚಗಲ್ ಗ್ರಾಮದಿಂದ ಮೊರಾರ್ಜಿ ಶಾಲೆ ಬೇರೆಡೆ ಸ್ಥಳಾಂತರಕ್ಕೆ ಯತ್ನಿಸಿದರೆ ಬೀದಿಗಿಳಿದು ಉಗ್ರ ಹೋರಾಟ ಮಾಡುವುದಾಗಿ ಸರ್ಕಾರದ ಅಧೀನ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಅವರು ಎಚ್ಚರಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಬಸವಂತ್ರಾಯ ದೇಶಪಾಂಡೆ,ದೇವೇಂದ್ರ ಪಾಟೀಲ,ವಿಠ್ಠಲ ತಾಳಿಕೋಟಿ, ಜೆಡಿಎಸ್ ಧುರಿಣ ಸೋಮನಗೌಡ ಬಿರಾದಾರ,ಸಾಹೇಬಗೌಡ ತಾಳಿಕೋಟಿ,ಬುಡ್ಡೆಸಾಬ ಭೆರವಾಡಗಿ,ಯಲ್ಲಪ್ಪ ಭೆರವಾಡಗಿ,ರವಿ ಖೈನೂರ,ಮಡಿವಾಳಪ್ಪ ಖೈನೂರ,ಬಸಯ್ಯ ಹಿರೇಮಠ,ಧೂಳಪ್ಪ ತಳವಾರ,ಹಣಮಂತ ಚಲವಾದಿ,ಸಂUಪ್ಪ ಬಾಗೇವಾಡಿ,ರವಿಚಂದ್ರ ಪಾಟೀಲ,ನಿಂಗಪ್ಪ ಇಂಗಳಗೇರಿ ಮತ್ತಿತರರು ಇದ್ದರು.

 

► Follow us on –  Facebook / Twitter  / Google+

Sri Raghav

Admin