ವಸುದೈವ ಕುಟುಂಬಕಂ

film
ತಮ್ಮ ಪ್ರಥಮ ಪ್ರಯತ್ನದಲ್ಲೇ `ರಥಾವರ’ಎಂಬ ವಿಭಿನ್ನ ಚಿತ್ರವನ್ನು ತೆರೆಗೆ ನೀಡಿದಂತಹ ನಿರ್ಮಾಪಕ ಧರ್ಮ ಶ್ರೀ ಮಂಜುನಾಥ್ ಈಗ ಮತ್ತೊಂದು ವಿನೂತನ ಪ್ರಯತ್ನದ ಕೌಟುಂಬಿಕ ಚಿತ್ರವಾದ ವಸುದೈವ ಕುಟುಂಬಕಂ ಎಂಬ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ.ಈ ಚಿತ್ರದ ಮುಹೂರ್ತ ಸಮಾರಂಭ ಬಸವಜಯಂತಿಯ ಶುಭದಿನದಂದು ಎಚ್‍ಎಂಟಿ ಬಡಾವಣೆಯ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ಈ ಚಿತ್ರದ ಹಾಡುಗಳ ಧ್ವನಿಮುದ್ರಣ ಈ ಮೊದಲೇ ಮುಗಿದಿದ್ದರೂ ಚಿತ್ರೀಕರಣ ಆರಂಭಿಸುವುದು ನಾನಾ ಕಾರಣಗಳಿಂದ ಸ್ವಲ್ಪ ತಡವಾಗಿದೆ.

ವಸುದೈವ ಕುಟುಂಬಕಂ ಚಿತ್ರದ ತಾರಾಗಣ ಹಾಗೂ ತಾಂತ್ರಿಕ ವರ್ಗ ಆಯ್ಕೆ ಮುಗಿದಿದ್ದು, ಇದೇ 18ರಿಂದ ಚಿತ್ರೀಕರಣ ಆರಂಭಗೊಳ್ಳಲಿದೆ. ವಸುದೈವ ಕುಟುಂಬಕಂ ಚಿತ್ರದಲ್ಲಿ ಮುದ್ದು ಮನಸೇ ಖ್ಯಾತಿಯ ಅರು ಗೌಡ ನಾಯಕನಾಗಿ ನಟಿಸುತ್ತಿದ್ದಾರೆ. ಇವರ ಜೊತೆಗೆ ಸಂಜನಾ ಪ್ರಕಾಶ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಬ್ಬ ನಾಯಕಿ ಕೂಡ ಚಿತ್ರದಲ್ಲಿದ್ದು ಯಾರೆಂಬುದನ್ನು ಚಿತ್ರತಂಡ ಮುಂದೆ ತಿಳಿಸಲಿದೆ. ರಥಾವರ ಚಿತ್ರ ಯಶಸ್ವಿಯಾದ ಹಿನ್ನೆಲೆಯಲ್ಲಿ ಮುಂದಿನ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ ಕುತೂಹಲವಿತ್ತು. ಆದರೆ ಈ ಚಿತ್ರದಲ್ಲಿ ಯುವ ಪ್ರತಿಭೆಯಾದಂತಹ ಗಿರಿಧರ್ ನಿರ್ದೇಶನದ ಹೊಣೆಯನ್ನು ಹೊತ್ತುಕೊಂಡಿದ್ದಾರೆ.

ಅವರೇ ಚಿತ್ರಕಥೆ, ಸಂಭಾಷಣೆಯನ್ನು ಬರೆದಿದ್ದು, ಬಹಳ ಅರ್ಥಪೂರ್ಣವಾದಂತಹ ಕಥೆಯನ್ನು ಆಯ್ಕೆ ಮಾಡಿಕೊಂಡಿರುವುದು ಈ ಚಿತ್ರದ ವಿಶೇಷವಾಗಿದ್ದು, ನಿರ್ಮಾಪಕರು ಕೂಡ ಕಥೆಗೆ ಎಷ್ಟೇ ಕಷ್ಟ ಆದರೂ ಸರಿ ಸಿನಿಮಾ ಮಾಡೋಣ ಎಂದು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ರಾಕೇಶ್ ಅವರು ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ಮಧುರ ಅವರ ಸಂಗೀತ ನಿರ್ದೇಶನದಲ್ಲಿ ಈ ಚಿತ್ರದ ಹಾಡುಗಳು ರೂಪುಗೊಂಡಿವೆ. ಈ ಚಿತ್ರದಲ್ಲಿ ಹಿರಿಯ ಕಲಾವಿದರಾದ ಶ್ರೀನಾಥ್, ತಬಲಾ ನಾಣಿ, ಪದ್ಮಾ ವಾಸಂತಿ, ವಾಣಿಶ್ರೀ ಮುಂತಾದವರು ಅಭಿನಯಿಸುತ್ತಿದ್ದಾರೆ.

ಸುಮಾರು 52 ಕಲಾವಿದರ ದೊಡ್ಡ ಕುಟುಂಬವೇ ಈ ಚಿತ್ರದಲ್ಲಿದೆ. ಜಗತ್ತೇ ಒಂದು ಕುಟುಂಬ ಎಂಬ ಪ್ರಧಾನ ಅಂಶದ ಸುತ್ತ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಈ ಮೂಲಕ ಜಾಗತಿಕ ಕಳಕಳಿಯ ಸಂದೇಶವನ್ನು ಸೋಷಿಯಲ್ ಡ್ರಾಮಾದ ಮೂಲಕ ಹೇಳಲಿದ್ದಾರಂತೆ. ಇನ್ನು ಈ ಚಿತ್ರಕ್ಕೆ ಶಮಂತ್ ವೀರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin