ಬಂಗಾಳ ಕೊಲ್ಲಿಯಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಭಾರೀ ಚಂಡಮಾರುತ ಸೃಷ್ಟಿಯಾಗುವ ಭೀತಿ
ನವದೆಹಲಿ/ ಬೆಂಗಳೂರು, ಮೇ 29– ಬಂಗಾಳಕೊಲ್ಲಿಯಲ್ಲಿ ಕಂಡು ಬಂದಿರುವ ವಾಯುಭಾರ ಕುಸಿತ ತೀವ್ರ ಸ್ವರೂಪ ಪಡೆದುಕೊಂಡು ಇಂದು ಪ್ರಬಲ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಪ್ರಬಲ ಚಂಡಮಾರುತದೊಂದಿಗೆ ಭಾರೀ ಮಳೆಯಾಗುವ ಸಂಭವವಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಆದಾಗ್ಯೂ ಇದರಿಂದ ಮುಂಗಾರು ಮಳೆಗೆ ಅನುಕೂಲವಾಗಲಿದೆ.
ಬಂಗಾಳ ಕೊಲ್ಲಿಯ ಪೂರ್ವ-ಮಧ್ಯ ಭಾಗದಲ್ಲಿ ವಾಯುಭಾರ ಕುಸಿತ ತೀವ್ರಗೊಂಡಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಅದು ಭಾರೀ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ನಿರೀಕ್ಷೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ಮೇ 31ರವರೆಗೂ ದಕ್ಷಿಣ ಒಳನಾಡಿನಲ್ಲಿ ಕೆಲವೆಡೆ ಭಾರೀ ಮಳೆಯಾಗುವ ನಿರೀಕ್ಷೆ ಇದೆ.
ಈ ಭಾಗದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಗಂಟೆಗೆ 32 ಕಿ.ಮೀ. ವೇಗದಲ್ಲಿ ಈಶಾನ್ಯದತ್ತ ಬೀಸುತ್ತಿದ್ದು, ಇಂದು ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಇದರಿಂದಾಗಿ ಕೇರಳದತ್ತ ಮುಂಗಾರು ಚಲಿಸಲು ಅನುಕೂಲವಾಗಿದೆ. ಜೂನ್ 1ರಂದು ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ. ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಚಂಡಮಾರುತ ಬಾಂಗ್ಲಾದೇಶ ಕರಾವಳಿಯತ್ತ ಚಲಿಸುತ್ತಿದ್ದು, ಮೇ 30ರಂದು ಬಾಂಗ್ಲಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ.
< Eesanje News 24/7 ನ್ಯೂಸ್ ಆ್ಯಪ್ >