ವಾಯುಮಾಲಿನ್ಯದಲ್ಲಿ ದೆಹಲಿ ಮೀರಿಸುತ್ತಿರುವ ಬೆಂಗಳೂರು…!

Air-Pollution-002

ಬೆಂಗಳೂರು, ಡಿ.27- ಬೆಂಗಳೂರು ಕೂಡಾ ಉಸಿರಾಡಲು ಯೋಗ್ಯವಲ್ಲದ ನಗರ ಎಂಬುದು ಅಂಕಿ-ಅಂಶಗಳಿಂದ ಸಾಬೀತಾಗಿದೆ. ದೆಹಲಿ ಪರಿಸ್ಥಿತಿ ಇಲ್ಲೂ ಬರುವ ಮುನ್ಸೂಚನೆ ಇದ್ದು, ಈಗಲೇ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ವಾಯು ಮಾಲಿನ್ಯ ತಡೆಗಟ್ಟಲು ಇಂದು ವಿಶೇಷ ಸಭೆ ಕರೆದು ತಜ್ಞರಿಂದ ಮಾಹಿತಿ ಪಡೆದುಕೊಳ್ಳುವ ಮೂಲಕ ಮುಂದಡಿ ಇಟ್ಟಿದೆ. ನಗರದ ಐಟಿಪಿಎಲ್, ಯಲಹಂಕ, ಪೀಣ್ಯ, ಸಿಲ್ಕ್‍ಬೋರ್ಡ್ ಜಂಕ್ಷನ್, ಮಾರುಕಟ್ಟೆ, ಯಶವಂತಪುರ, ಬಾಣಸವಾಡಿ, ದೊಮ್ಮಲೂರು, ಎಸ್.ಜಿ.ಹಳ್ಳಿ, ಕೆ.ಆರ್.ವೃತ್ತ, ನಿಮ್ಹಾನ್ಸ್ ಸೇರಿದಂತೆ ಹದಿನಾರು ಪ್ರದೇಶಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ತಜ್ಞರು ನಡೆಸಿರುವ ಸಮೀಕ್ಷೆಯಲ್ಲಿ ಇಲ್ಲಿನ ಗಾಳಿ ಉಸಿರಾಟಕ್ಕೆ ಯೋಗ್ಯವಲ್ಲ ಎಂಬುದು ತಿಳಿದುಬಂದಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಪಾಲಿಕೆ ಸಭೆಯಲ್ಲಿ ಬಹಿರಂಗಪಡಿಸಿದರು.

ಈ ಹದಿನಾರು ಪ್ರದೇಶಗಳಲ್ಲಿ ಸಲ್ಫರ್‍ಡೈಆಕ್ಸೈಡ್, ನೈಟ್ರೋಜನ್ ಡೈ ಆಕ್ಸೈಡ್ಸ್ ಪರ್ಟಿಕ್ಯುಲೇಟ್ ಮೀಟರ್ ಅಪಾಯದ ಅಂಚು ತಲುಪಿದೆ. ಈ ಪ್ರದೇಶಗಳಲ್ಲಿ ಸಲ್ಫರ್‍ಡೈಆಕ್ಸೈಡ್ ನಿಗದಿಗಿಂತ 15ಮಿಲಿಗ್ರಾಂ ಪರ್ ಕ್ಯೂಬಿಕ್ ಮೀಟರ್‍ನಷ್ಟಿದೆ. ನೈಟ್ರೋಜನ್ ಡೈಆಕ್ಸೈಡ್ 14 ಮಿಲಿಗ್ರಾಂ ಪರಕ್ಯೂಬಿಕ್ ಮೀಟರ್‍ನಷ್ಟು ಪರ್ಟಿಕ್ಯುಲೇಟ್ ಮೀಟರ್ 60ರಷ್ಟು ಇರಬೇಕು. ಆದರೆ, ಇದು ದುಪ್ಪಟ್ಟಾಗಿದೆ. ಇದರಿಂದ ಲಂಗ್ಸ್ ತೊಂದರೆ, ಅಸ್ತಮ ಸೇರಿದಂತೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಬರುತ್ತಿವೆ ಎಂದು ಹೇಳಿದರು.

ದೆಹಲಿಯಲ್ಲಿ ವಾಯುಮಾಲಿನ್ಯ ಹದಗೆಟ್ಟಿದ್ದರಿಂದ ಕ್ರಿಕೆಟ್ ಪಂದ್ಯ ರದ್ದಾಯಿತು. ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ನಗರದಲ್ಲಿ ಇದೇ ಸ್ಥಿತಿ ನಿರ್ಮಾಣ ಆಗಬಾರದೆಂಬ ಕಾರಣಕ್ಕೆ ಇಂದು ವಿಶೇಷ ಸಭೆ ಕರೆದಿದ್ದು, ಮಾಲಿನ್ಯ ನಿಯಂತ್ರಣ ತಜ್ಞರು, ಸಾರಿಗೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಇವರಿಂದ ಅಗತ್ಯ, ಸಲಹೆ, ಸೂಚನೆಗಳನ್ನು ಪಡೆದು ಮಾಲಿನ್ಯ ನಿಯಂತ್ರಣ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು.
ನಮ್ಮ ನಗರದಲ್ಲಿ ಈ ಸ್ಥಿತಿ ಉಂಟಾಗಲು ಪ್ರಮುಖವಾಗಿ ಸಾರಿಗೆ ಕಾರಣ. ಶೇ.42ರಷ್ಟು ಮಾಲಿನ್ಯ ಇದರಿಂದಲೇ ಆಗುತ್ತಿದೆ. ರಸ್ತೆ ಧೂಳಿನಿಂದ ಶೇ.20ರಷ್ಟು, ಕಟ್ಟಡ ನಿರ್ಮಾಣ ತ್ಯಾಜ್ಯದಿಂದ ಶೇ.14ರಷ್ಟು, ಕೈಗಾರಿಕೆಯಿಂದ ಶೇ.14ರಷ್ಟು, ಡೊಮೆಸ್ಟಿಕ್‍ನಿಂದ ಶೇ.3ರಷ್ಟು ಮಾಲಿನ್ಯ ಆಗುತ್ತಿದೆ ಎಂದು ವಿವರಿಸಿದರು.

ಸಾರಿಗೆ ವ್ಯವಸ್ಥೆಯಿಂದ ಅತಿ ಹೆಚ್ಚು:

ನಗರದಲ್ಲಿ ಒಂದು ಕೊಟಿ ಜನ ಸಂಖ್ಯೆ ಇದೆ. ಆದರೆ, 72,66000 ವಾಹಗಳಿವೆ. ಅಲ್ಲದೆ ಪ್ರತಿ ವರ್ಷ ಸಾವಿರಾರು ವಾಹನ ನೋಂದಣಿ ಆಗುತ್ತಲೇ ಇವೆ. 93 ಸಾವಿರ ಕಿ.ಮೀ. ಇದೆ. ಅದರಲ್ಲಿ ಬೆಂಗಳೂರಿನಲ್ಲೇ 14 ಸಾವಿರ ಕಿ.ಮೀ. ರಸ್ತೆ ಇದೆ. ಪ್ರತಿನಿತ್ಯ ಕಸ ಗುಡಿಸುವುದರಿಂದ ಬರುವ ಧೂಳಿನಿಂದಲೇ ಪರಿಸರ ಹಾಳಾಗುತ್ತಿದೆ. ಕಟ್ಟಡ ನಿರ್ಮಾಣದಿಂದ ಉತ್ಪತ್ತಿಯಾಗುವ ತ್ಯಾಜ್ಯ ಭೂಮಿಗೆ ಸೇರುವುದರಿಂದ ವಾಯುಮಾಲಿನ್ಯ ಅಪಾಯದ ಮಟ್ಟ ಮೀರುತ್ತಿದೆ.
ಬಿಬಿಎಂಪಿ, ಸಾರಿಗೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಮೇಲೆ ವಾಯುಮಾಲಿನ್ಯ ತಡೆಗಟ್ಟುವ ಹೊಣೆಗಾರಿಕೆ ಇದೆ. ಅದಕ್ಕಾಗಿ ಹೊಗೆ ಹುಗುಳುವ ಹಳೆ ಬಸ್‍ಗಳನ್ನು ತೆಗೆದು ಬಿಎಸ್-6 ಬಸ್‍ಗಳನ್ನಾಗಿ ಪರಿವರ್ತನೆ ಮಾಡಬೇಕಿದೆ. ಸಿಎನ್‍ಜಿ ವಾಹನಗಳನ್ನು ಬಳಸಬೇಕಿದೆ ಎಂಬ ಸಲಹೆಗಳು ಬಂದವು.

ಯಾಂತ್ರಿಕೃತ ಕಸ ಕುಡಿಸುವುದರನ್ನು ಬಳಕೆ ಮಾಡುವ ಅಗತ್ಯವಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ತಜ್ಞರು, ಸಾರಿಗೆ ಇಲಾಖೆ ಅಧಿಕಾರಿಗಳು ಸಲಹೆಗಳನ್ನು ನೀಡಿದ್ದಾರೆ. ಕ್ರಡಾಯ್ ಮಾಲೀಕರನ್ನು ಕರೆಸಿದ್ದೇವೆ. ಅವರಿಂದಲೂ ಸಲಹೆ ಸೂಚನೆಗಳನ್ನು ಪಡೆದಿದ್ದೇವೆ. ಒಟ್ಟಾರೆ ನಗರದಲ್ಲಿ ವಾಯುಮಾಲಿನ್ಯ ತಡೆಯುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು. ಪ್ರತಿ ವರ್ಷ ದೇಶದಲ್ಲಿ 12 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ಪ್ರತಿ ನಿತ್ಯ 3283 ಜನ ಸಾವನ್ನಪ್ಪುತ್ತಿದ್ದಾರೆ. ದೇಶದ ಜಿಡಿಪಿಗೂ ತೊಂದರೆಯಾಗಿದೆ. ಈಗಲೇ ಎಚ್ಚೆತ್ತುಕೊಳ್ಳದ್ದಿರೆ ದೇಶದಲ್ಲಿ ಬಹಳ ತೊಂದರೆ ಕಟ್ಟಿಟ್ಟ ಬುತ್ತಿ.

ತಜ್ಞರ ಮಾಹಿತಿ ಪಡೆದು ಆಯಾ ವಾರ್ಡ್‍ಗಳಲ್ಲಿ ಎಲ್‍ಇಡಿ ಮೂಲಕ ಯಾವ ವಾರ್ಡ್ ಎಷ್ಟು ಮಾಲಿನ್ಯವಾಗಿದೆ ಎಂಬುದನ್ನು ಪ್ರದರ್ಶಿಸಿದರೆ. ಅಪಾಯ ಇರುವ ವಾರ್ಡ್‍ಗಳನ್ನು ಪತ್ತೆಹಚ್ಚಿ ಅಲ್ಲಿ ನಿಯಂತ್ರಣ ಮಾಡಲು ಮುಂದಾಗಬಹುದು. ಇದಕ್ಕೆ ಪಾಲಿಕೆಯ ಎಲ್ಲ ಸದಸ್ಯರು ಕೈ ಜೋಡಿಸಬೇಕೆಂದು ಆಯುಕ್ತರು ಮನವಿ ಮಾಡಿದರು. ನಗರದ ಒಳಭಾಗದಲ್ಲಿ ಕೆಎಸ್‍ಆರ್‍ಟಿಸಿ, ಖಾಸಗಿ ಬಸ್‍ಗಳು ಸೇರಿದಂತೆ ಬೃಹತ್ ವಾಹನ ಸಂಚಾರ ನಿಷೇಧಿಸುವುದು ಸೂಕ್ತ ಎಂಬ ಸಲಹೆ ಬಂದವು. ಈ ವೇಳೆ ಮೇಯರ್ ಸಂಪತ್‍ರಾಜ್ ಮಾತನಾಡಿ, ಖಾಸಗಿ ಬಸ್ ಹಾಗೂ ಬೃಹತ್ ವಾಹನಗಳು ನಗರ ಪ್ರವೇಶಿಸದಂತೆ ನಿರ್ಣಯಕೈಗೊಂಡು ಅದನ್ನು ಸರ್ಕಾರಕ್ಕೆ ಕಳುಹಿಸೋಣ ಎಂದು ತಿಳಿಸಿದರು.

Sri Raghav

Admin