ವಾಹನ ಸವಾರರೆ ಎಚ್ಚರ.. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ತಲೆ ಎತ್ತಿದೆ ‘ಪಂಚರ್ ಮಾಫಿಯಾ’..!

Spread the love

Puncher-Mafia

  •  ರಮೇಶ್ ಪಾಳ್ಯ

ಬೆಂಗಳೂರು. ಡಿ.29 :  ಬೆಂಗಳೂರು… ಅಬ್ಬಾಬ್ಬ ಈ ಸಿಟಿಯಲ್ಲಿ ಇರುವ ಮಾಫಿಯಾ ಬೇರೆ ಯಾವ ಊರಿನಲ್ಲೂ ಕಂಡುಬರೋಲ್ಲ. ಅಂಥ ಖತರ್ನಾಕ್ ಮಾಫಿಯಾ ಜಗತ್ತೇ ಈ ಊರಿನಲ್ಲಿದೆ. ಜಾಹಿರಾತು ಮಾಫಿಯಾ, ಓಎಫ್‍ಸಿ ಮಾಫಿಯಾ, ಭೂಗತ ಜಗತ್ತು.. ಹೀಗೆ ಮಾಫಿಯಾಗಳ ಸಾಲೇ ಕಂಡುಬರುತ್ತದೆ. ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿರುವುದೇ ಪಂಕ್ಚರ್ ಮಾಫಿಯಾ…!   ಅರೇ! ಇದೇನಿದು? ಪಂಕ್ಚರ್ ಮಾಫಿಯಾ ಅಂತೀರಾ… ಅಲ್ಲೇ ಇರೋದು ಇಂಟ್ರೆಸ್ಟಿಂಗ್ ಸ್ಟೋರಿ. ನೀವು ತುರ್ತು ಕಾರ್ಯದ ನಿಮಿತ್ತ ಬೇರೆ ಪ್ರದೇಶಕ್ಕೆ ತೆರಳಲು ತರಾತುರಿಯಲ್ಲಿ ನಿಮ್ಮ ವಾಹನ ಏರುತ್ತೀರ. ಒಂದೆರಡು ಕಿ.ಮೀ ಸಾಗುವಷ್ಟರಲ್ಲೇ ನಿಮ್ಮ ಬೈಕ್ ಅಥವಾ ವಾಹನ ಪಂಕ್ಚರ್ ಆಗುತ್ತದೆ.

ಅಯ್ಯೋ ದೇವರೇ.. ಒಳ್ಳೆ ಟೈಮ್‍ನಲ್ಲಿ ಕೈ ಕೊಡ್ತಲ್ಲಪ್ಪ , ಎಲ್ಲಪ್ಪ ಪಂಕ್ಚರ್ ಅಂಗಡಿ ಹುಡುಕುವುದು ಎಂದು ತಲೆ ಮೇಲೆ ಕೈ ಹೊತ್ತು ಅಕ್ಕಪಕ್ಕ ನೋಡಿದರೆ ಸಾಕು ಅಣತಿ ದೂರದಲ್ಲೆ ನಿಮ್ಮ ಕಣ್ಣಿಗೆ ಗೋಚರಿಸುತ್ತದೆ ಪಂಕ್ಚರ್ ಅಂಗಡಿ.  ಸದ್ಯ ಪಂಕ್ಚರ್ ಅಂಗಡಿ ಸಿಕ್ತಲ್ಲಪ್ಪ ಅಂದುಕೊಂಡು ಅಂಗಡಿಯಾತ ಕೇಳುವಷ್ಟು ಹಣ ತೆತ್ತು ಪಂಕ್ಚರ್ ಹಾಕ್ಸಿಕೊಂಡು ಹೊರಟಬಿಡ್ತೀರಾ.ಇದು ಬೆಂಗಳೂರಿನಲ್ಲಿ ಕೇವಲ ಒಂದಿಬ್ಬರಿಗೆ ಆಗುವ ತೊಂದರೆಯಲ್ಲ. ಪ್ರತಿನಿತ್ಯ ಏನಿಲ್ಲ ಅಂದರೂ ಸಾವಿರಾರು ಮಂದಿಗೆ ಇಂತಹ ಅನುಭವವಾಗಿರುತ್ತದೆ. ಬಿಬಿಎಂಪಿಯವರು ರಸ್ತೆ ದುರಸ್ತಿ ಮಾಡದೆ ನಮಗೆ ಇಂತಹ ಪರಿಸ್ಥಿತಿ ಬಂದಿದೆ ಎಂದು ನೀವು ಭಾವಿಸಿಕೊಂಡಿದ್ದರೆ ಅದು ನಿಮ್ಮ ತಪ್ಪು . ನಿಮ್ಮ ವಾಹನ ಪದೇ ಪದೇ ಪಂಕ್ಚರ್ ಆಗುವುದು ಅಣತಿ ದೂರದಲ್ಲೇ ನಿಮಗೆ ಪಂಕ್ಚರ್ ಹಾಕುವ ಅಂಗಡಿ ಸಿಗುವುದು ಕಾಕತಾಳೀಯವಲ್ಲ. ಇದರ ಹಿಂದೆ ನಗರದಲ್ಲಿ ತಲೆ ಎತ್ತಿರುವ ಪಂಕ್ಚರ್ ಮಾಫಿಯಾದ ಕೈವಾಡವಿರುವುದು ಅಷ್ಟೇ ಸತ್ಯ.

ಏನಿದು ಪಂಕ್ಚರ್ ಮಾಫಿಯಾ ಅಂತೀರಾ? ಪಂಕ್ಚರ್ ಶಾಪ್ ಇರುವ ಪ್ರದೇಶಗಳ ರಸ್ತೆಗಳಲ್ಲಿ ಮತ್ತು ವೃತ್ತಗಳಲ್ಲಿ ಮಾಫಿಯಾದವರು ಕಬ್ಬಿಣದ ಮೊಳೆಗಳನ್ನಿಟ್ಟು ವಾಹನಗಳನ್ನು ಪಂಕ್ಚರ್ ಮಾಡಿಸುತ್ತಾರೆ. ನಂತರ ತಮ್ಮ ಶಾಪ್‍ಗಳ ಬಳಿ ಗ್ರಾಹಕರಿಗಾಗಿ ಕಾಯುತ್ತಿರುತ್ತಾರೆ.  ಒಂದು ಪಂಕ್ಚರ್‍ಗೆ ಕನಿಷ್ಠ 80 ರೂ. ತೆರಬೇಕು. ಒಂದು ವೇಳೆ ಮೂರ್ನಾಲ್ಕು ಪಂಕ್ಚರ್ ಆದರೆ ಏನಿಲ್ಲ ಎಂದರೂ 250 ಕೊಡಲೇಬೇಕು.  ಹೀಗಾಗಿ ಪ್ರತಿನಿತ್ಯ ಸಾವಿರಾರು ವಾಹನಗಳನ್ನು ಪಂಕ್ಚರ್ ಮಾಡಿಸಿ ಕೈ ತುಂಬ ಹಣ ಸಂಪಾದನೆ ಮಾಡುತ್ತಿರುವುದೇ ಈ ಪಂಕ್ಚರ್ ಮಾಫಿಯಾ.

ಪತ್ತೆಯಾಗಿದ್ದು ಹೇಗೆ?:

ಬನಶಂಕರಿ ನಿವಾಸಿಯಾಗಿರುವ ಬೆನೆಡಿಕ್ಟ್ ಜೆಬಾಕುಮಾರ್ ಪ್ರತಿನಿತ್ಯ ತಮ್ಮ ಸೈಕಲ್‍ನಲ್ಲಿ 20 ಕಿ.ಮೀ ದೂರದಲ್ಲಿರುವ ಔಟರ್ ರಿಂಗ್‍ರಸ್ತೆಯಲ್ಲಿರುವ ತಮ್ಮ ಕಚೇರಿಗೆ ತೆರಳತ್ತಿದ್ದರು. ಪದೇ ಪದೇ ಇವರ ಸೈಕಲ್ ಪಂಕ್ಚರ್ ಆಗುತ್ತಿದ್ದದ್ದು ತಲೆನೋವಾಗಿತ್ತು. ಏನಿದು ಪದೇ ಪದೇ ಸೈಕಲ್ ಪಂಕ್ಚರ್ ಆಗುತ್ತಿದೆಯಲ್ಲ ಎಂದು ತಲೆ ಕೆಡಿಸಿಕೊಂಡು ಪಂಕ್ಚರ್ ಹಿನ್ನಲೆ ಹುಡುಕಾಟ ನಡೆಸಿದಾಗಲೇ ಅವರಿಗೆ ಗೋಚರವಾದದ್ದೇ ಪಂಕ್ಚರ್ ಮಾಫಿಯಾ.  ಪಂಕ್ಚರ್ ಆದ ಸ್ಥಳದಲ್ಲಿ ಹುಡುಕಾಟ ನಡೆಸಿದಾಗಲೇ 15ಕ್ಕೂ ಹೆಚ್ಚು ಮೊಳೆಗಳು ಅವರಿಗೆ ಪತ್ತೆಯಾಯಿತು. ಇದರ ಮೂಲವನ್ನು ಪತ್ತೆಹಚ್ಚಲು ತೀರ್ಮಾನಿಸಿದ ಅವರು, ಎಚ್‍ಎಸ್‍ಆರ್-ಬಿಡಿಎ ಬ್ರಿಡ್ಜ್ ಸಮೀಪ ಪ್ರತಿನಿತ್ಯ ಅವರು ಹುಡುಕಾಟ ನಡೆಸಿದಾಗಲೆಲ್ಲ 15-20 ಮೊಳೆಗಳು ಸಿಗುತ್ತಿತ್ತು.

ಮೊಳೆ ಸಿಕ್ಕ ಪ್ರದೇಶದಲ್ಲೇ ಇದ್ದ ಪಂಕ್ಚರ್ ಶಾಪ್ ಯಾವಾಗಲು ಬ್ಯುಸಿಯಾಗಿರುವುದಕ್ಕು, ರಸ್ತೆಯಲ್ಲಿ ಮೊಳೆ ಸಿಗುತ್ತಿರುವುದಕ್ಕೂ ತಾಳೆ ಹಾಕಿ ನೋಡಿದ ಬೆನೆಡಿಕ್ಟ್, ವಾಹನಗಳು ಪಂಕ್ಚರ್ ಆಗುತ್ತಿರುವುದಕ್ಕೆ ಪಂಕ್ಚರ್ ಶಾಪ್ ಕಾರಣವೆಂಬುದನ್ನು ಅರಿತರು.  ಹೇಗಾದರೂ ಮಾಡಿ ಪಂಕ್ಚರ್ ಮಾಫಿಯಾವನ್ನು ಕೊನೆಗಾಣಿಸಬೇಕು ಎಂದು ಪಣ ತೊಟ್ಟ ಬೆನೆಡಿಕ್ಟ್ ಕಳೆದ 2015ರಿಂದ ಫೇಸ್‍ಬುಕ್‍ನಲ್ಲಿ ಮೈ ರೋಡ್, ಮೈ ರೆಸ್ಪಾನ್ಸಿಬಿಲಿಟಿ ಎಂಬ ಪೇಜ್ ತೆರೆದು ಪ್ರತಿನಿತ್ಯ ಅದರಲ್ಲಿ ಅವರ ಸಂಗ್ರಹಿಸುತ್ತಿರುವ ಮೊಳೆಗಳ ಸಂಖ್ಯೆ ನಮೂದಿಸುತ್ತಾ ಬಂದಿದ್ದಾರೆ.
ನಂಬಿದರೆ ನಂಬಿ ಬಿಟ್ಟರೆ ಬಿಡಿ ಇದುವರೆಗೂ ಅವರು ಸಂಗ್ರಹಿಸಿರುವ ಮೊಳೆಗಳ ಒಟ್ಟು ತೂಕ 70 ಕೆಜಿಯಷ್ಟಾಗಿದೆ. ಇದೀಗ ಬೆನೆಡಿಕ್ಟ್ ತಮ್ಮ ನಿವಾಸವನ್ನು ತಮಿಳುನಾಡಿಗೆ ವರ್ಗಾಯಿಸಿದ್ದಾರೆ. ಆದರೆ ಅವರು ತೋರಿಸಿಕೊಟ್ಟ ಪಂಕ್ಚರ್ ಮಾಫಿಯಾ ಮಾತ್ರ ಅದೇ ರೀತಿ ಮುಂದುವರೆದಿದ್ದರೂ, ಸಂಚಾರಿ ಪೊಲೀಸರ ಕಣ್ಣು ತೆರೆಸುವಲ್ಲಿ ಯಶಸ್ವಿಯಾಗಿದೆ.
ಕೆಲ ಪ್ರದೇಶಗಳಲ್ಲಿನ ಪಂಕ್ಚರ್ ಮಾಫಿಯಾದಲ್ಲಿ ತೊಡಗಿಸಿಕೊಂಡಿದ್ದವರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ.

ಕಡಿವಾಣ ಹೇಗೆ?:

ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸರಿಂದ ಸಾಧ್ಯವಿಲ್ಲ. ಜನರ ಬದುಕಿನೊಂದಿಗೆ ಆಟವಾಡುವ ಇಂತಹ ಮಾಫಿಯಾಗಳಲ್ಲಿ ತೊಡಗಿಸಿಕೊಂಡವರ ಮನಪರಿವರ್ತನೆಯಿಂದ ಮಾತ್ರ ಸಾಧ್ಯ.  ಖ್ಯಾತ ನಟ ಕೃಷ್ಣ ನಟಿಸಿರುವ ತೆಲಗು ಚಿತ್ರವೊಂದರಲ್ಲಿ ನಾಯಕ ನಟ ಇದೇ ರೀತಿ ರಸ್ತೆಯಲ್ಲಿ ಮೊಳೆ ಎಸೆದು ಪಂಕ್ಚರ್ ಆಗುವ ವಾಹನಗಳಿಗೆ ಪಂಕ್ಚರ್ ಹಾಕಿ ಹಣ ಲಪಟಾಯಿಸಿರುತ್ತಾನೆ. ಮಾತ್ರವಲ್ಲ ಅದನ್ನೇ ತನ್ನ ಕಾಯಕವನ್ನಾಗಿ ಮಾಡಿಕೊಂಡಿರುತ್ತಾನೆ.  ಒಂದು ದಿನ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಆತನ ತಾಯಿಯನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಅದೇ ಕಾರಿಗೆ ನಾಯಕ ನಟನೇ ಮೊಳೆ ಎಸೆದು ಪಂಕ್ಚರ್ ಮಾಡುತ್ತಾನೆ. ಇದರಿಂದ ಸರಿಯಾದ ಸಮಯಕ್ಕೆ ಆಸ್ಪತ್ರೆ ತಲುಪಲಾರದೆ ಆತನ ತಾಯಿ ಮೃತಪಡುತ್ತಾರೆ.

ತನ್ನ ತಾಯಿ ಸಾವನ್ನಪ್ಪಿದಾಗಲೇ ನಾಯಕ ನಟನಿಗೆ ತನ್ನ ತಪ್ಪಿನ ಅರಿವಾಗುವುದಲ್ಲದೆ ಯಾವುದೋ ತುರ್ತು ಕಾರ್ಯಕ್ಕೆ ತೆರಳುವ ಜನರ ಬದುಕಿನೊಂದಿಗೆ ಆಟವಾಡಿದರೆ ಏನೆಲ್ಲ ಅನಾಹುತವಾಗುತ್ತದೆ ಎಂಬ ಸತ್ಯ ಅರಿವಾಗುವುದರೊಂದಿಗೆ ಆತ ಪರಿವರ್ತನೆಗೊಳ್ಳತ್ತಾನೆ.  ಅದೇ ರೀತಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ರಸ್ತೆಯಲ್ಲಿ ಮೊಳೆ ಎಸೆದು ಸಾರ್ವಜನಿಕರ ಬದುಕಿನೊಂದಿಗೆ ಚೆಲ್ಲಾಟವಾಡುವ ಪಂಕ್ಚರ್ ಮಾಫಿಯಾದವರು ಆಗುವ ಅನಾಹುತವನ್ನು ಮನದಟ್ಟು ಮಾಡಿಕೊಂಡರೆ ಮಾತ್ರ ಮಾಫಿಯಾಗೆ ಕಡಿವಾಣ ಹಾಕಲು ಸಾಧ್ಯ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

(ನಿಮ್ಮ ಅಭಿಪ್ರಾಯಗಳನ್ನು ಕೆಳಗಿರುವ ಫೇಸ್ ಬುಕ್ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ )

Facebook Comments

Sri Raghav

Admin