ವಿಜಯ್ ಮಲ್ಯ ಈಗ ಘೋಷಿತ ಅಪರಾಧಿ
ಮುಂಬೈ, ನ.11-ಕಳಂಕಿತ ಉದ್ಯಮಿ ವಿಜಯ್ ಮಲ್ಯಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮುಂಬೈನ ವಿಶೇಷ ಪಿಎಂಎಲ್ಎ(ಅಕ್ರಮ ಹಣ ವರ್ಗಾವಣೆ ಕಾಯ್ದೆ) ನ್ಯಾಯಾಲಯವು ಮಲ್ಯ ಘೋಷಿತ ಅಪರಾಧಿ ಎಂದು ಘೋಷಿಸಿದೆ. ಅಲ್ಲದೇ, ಮಲ್ಯರ ಚರಾಸ್ತಿಗಳನ್ನು(ಷೇರು) ಮುಟ್ಟುಗೋಲು ಹಾಕಿಕೊಳ್ಳುವಂತೆ ಜಾರಿ ನಿರ್ದೇಶನಾಲಯ ಆದೇಶಿಸಿದೆ.ಮಲ್ಯ ತೆರಿಗೆ ವಂಚಿಸಿ ವಿದೇಶಕ್ಕೆ (ಇಂಗ್ಲೆಂಡ್) ಪರಾರಿಯಾಗಿರುವುದರಿಂದ ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸುವಂತೆ ಜಾರಿ ನಿರ್ದೇಶನಾಲಯ ನ್ಯಾಯಾಲಯವನ್ನು ಕೋರಿತ್ತು. ವಿಜಯಮಲ್ಯರನ್ನು ನ್ಯಾಯಾಲಯವು ಈ ಪ್ರಕರಣದಲ್ಲಿ ಘೋಷಿತ ಅಪರಾಧಿ ಎಂದು ಘೋಷಿಸುತ್ತದೆ ಹಾಗೂ ಅವರಿಗೆ ಸೇರಿದ ಚರಾಸ್ತಿಗಳು ಅಂದರೆ ಷೇರುಗಳನ್ನು ಜಪ್ತಿ ಮಾಡಲು ಆದೇಶಿಸುತ್ತದೆ ಎಂದು ನ್ಯಾಯಮೂರ್ತಿ ಪಿ.ಆರ್. ಭಾವ್ಕೆ ತಿಳಿಸಿದ್ದಾರೆ. ಆದಾಗ್ಯೂ, ಮದ್ಯದ ದೊರೆಯ ಸಾಗರೋತ್ತರ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡಬೇಕೆಂಬ ನಿರ್ದೇಶನಾಲಯದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.