ವಿತಂಡವಾದ ಬಿಟ್ಟು ಮೊದಲು ರೈತರ ಸಾಲ ಮನ್ನಾ ಮಾಡಿ : ಸಿಎಂಗೆ ಶೆಟ್ಟರ್ ಒತ್ತಾಯ

Spread the love

Jagadish-Shetttar--01

ಬೆಂಗಳೂರು, ಜೂ.6– ವಿತಂಡವಾದ ಮಾಡುವುದನ್ನು ಬಿಟ್ಟು ಮೊದಲು ರೈತರ ಸಾಲ ಮನ್ನಾ ಮಾಡಿ ಎಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.  ವಿಧಾನಸಭೆಯ ಕಲಾಪದಲ್ಲಿ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಶೆಟ್ಟರ್, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದು ವಾರದಲ್ಲಿ ತನ್ನ ಬೊಕ್ಕಸದಿಂದ 36 ಸಾವಿರ ಕೋಟಿ ರೂ. ಖರ್ಚು ಮಾಡಿ ಪ್ರತಿಯೊಬ್ಬ ರೈತರ ಒಂದು ಲಕ್ಷ ರೂ. ಸಾಲ ಮನ್ನಾ ಮಾಡಿದೆ. ನಿನ್ನೆಯಷ್ಟೇ ಮಹಾರಾಷ್ಟ್ರ ಸರ್ಕಾರ 30ಸಾವಿರ ಕೋಟಿಯಷ್ಟು ರೈತರ ಸಾಲ ಮನ್ನಾ ಮಾಡಿದೆ. ಈ ಎರಡೂ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಯಾವುದೇ ನೆರವು ನೀಡಿಲ್ಲ.ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅಸಲು ತೀರಿಸಿದರೆ ಬಡ್ಡಿ ಮನ್ನಾ ಮಾಡುವುದಾಗಿ ಸರ್ಕಾರ ಹೇಳುತ್ತಿದೆ. ಸಾಲ ಮರುಪಾವತಿಸುವ ಶಕ್ತಿ ರೈತರಿಗೆ ಇಲ್ಲ. ಹೀಗಾಗಿ ಕೂಡಲೇ ನೆಪ ಹೇಳದೇ ಸಾಲ ಮನ್ನಾ ಮಾಡಿ ಎಂದರು.  ರಾಜ್ಯ ಸರ್ಕಾರ ಸಹಕಾರ ಬ್ಯಾಂಕುಗಳ ಸಾಲ ಮನ್ನಾ ಮಾಡಿದ ನಂತರ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಸಾಧ್ಯ. ರೈತರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಸಾಲ ಮನ್ನಾ ಮಾಡಿ. ಇಲ್ಲದೇ ಹೋದರೆ ಈಗಾಗಲೇ ಬಿಜೆಪಿ ಜನರ ಬಳಿ ಹೋಗಿ ಸಾಲ ಮನ್ನಾ ಬಗ್ಗೆ ಮಾತನಾಡುತ್ತಿದೆ. ಮುಂದಿನ ದಿನಗಳಲ್ಲಿ ಲಕ್ಷಾಂತರ ಮಂದಿಯನ್ನು ಕರೆತಂದು ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ 2013-14ರಲ್ಲಿ 152, 2014-15ರಲ್ಲಿ 122, 2015-16ರಲ್ಲಿ 1478, 2016-17ರಲ್ಲಿ 821 ಮಂದಿ ಸೇರಿ ಒಟ್ಟು 2573 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ 1700 ಕುಟುಂಬಕ್ಕೆ ಪರಿಹಾರ ವಿತರಿಸಲಾಗಿದೆ. 202 ಪ್ರಕರಣಗಳು ಬಾಕಿ ಉಳಿದಿವೆ. 731 ಅರ್ಜಿಗಳು ತಿರಸ್ಕøತವಾಗಿವೆ. ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದವರ ಅರ್ಜಿಗಳನ್ನು ತಿರಸ್ಕøರಿಸಲಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿಗಳು ಖಾಸಗಿ ವ್ಯಕ್ತಿಗಳಿಂದ ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಂಡ ರೈತರಿಗೂ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಅದಕ್ಕೆ ಲಿಖಿತ ಆದೇಶವನ್ನು ಜಾರಿ ಮಾಡಿ ನಿಯಮಾವಳಿಗಳನ್ನು ತಿದ್ದುಪಡಿ ಮಾಡಿ ಎಂದು ಸಲಹೆ ನೀಡಿದರು.

ಸುಪ್ರೀಂಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಕೇಂದ್ರದ ಸರ್ಕಾರದ ಸಮಿತಿಯೊಂದು ವರದಿ ಸಲ್ಲಿಸಿತ್ತು. ರೈತ ಆತ್ಮಹತ್ಯೆ ಪ್ರಕರಣಗಳ ಪೈಕಿ ಶೇ.80ರಷ್ಟು ಮಂದಿ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದವರನ್ನು ಪರಿಹಾರ ನೀಡಲು ಪರಿಗಣಿಸಿ ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಕಳೆದ 15 ವರ್ಷಗಳಿಂದ ಯಾವ ಸರ್ಕಾರವೂ ನೀಡದಷ್ಟು ಹೆಚ್ಚಿನ ಪರಿಹಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ. ಅದರಲ್ಲಿ ಬೆಳೆ ಪರಿಹಾರವನ್ನು ರೈತರಿಗೆ ತಲುಪಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಉದ್ಯೋಗ ಖಾತ್ರಿ ಯೋಜನೆಯನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಹುಬ್ಬಳ್ಳಿ, ವಿಜಯಪುರ, ಬಾಗಲಕೋಟೆ, ಕೊಪ್ಪ, ಯಾದಗಿರಿ ಜಿಲ್ಲಾ ಕೇಂದ್ರಗಳಲ್ಲಿ ದಿನಬೆಳಗಾದರೆ ಕೂಲಿ ಅರಸಿ ಸಾವಿರಾರು ಮಂದಿ ಜಿಲ್ಲಾ ಕೇಂದ್ರಗಳಿಗೆ ಬರುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಕೊಡಿಸಲು ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕ್ರಮ ಕೈಗೊಳ್ಳದಿರುವ ಬಗ್ಗೆ ತರಾಟೆಗೆ ತೆಗೆದುಕೊಂಡರು.
ಹವಾಮಾನ ಇಲಾಖೆ ನೀಡುತ್ತಿರುವ ಮುನ್ಸೂಚನೆಗಳು ತಪ್ಪಾಗುತ್ತಿವೆ. ಅದಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿ, ದಕ್ಷತೆಯಿಂದ ಕೆಲಸ ಮಾಡಲು ಅನುಕೂಲ ಮಾಡಿಕೊಡಿ ಎಂದು ಸಲಹೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin