ವಿದ್ಯಾರ್ಥಿನಿ ಗರ್ಭಿಣಿಯಾಗಲು ಕಾರಣನಾಗಿದ್ದ ಕಾಮುಕ ಜೈಲಿಗೆ
ಕೊಳ್ಳೆಗಾಲ,ಸೆ.17-ಪ್ರೌಢಶಾಲೆ ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿಸುವ ನಾಟಕವಾಡಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿ ಮಾಡಿ ಪರಾರಿಯಾಗಿದ್ದ ಆಟೋ ಚಾಲಕನೊಬ್ಬನನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಧನಗೆರೆ ಗ್ರಾಮದ ಮೋಹನ್ ಕುಮಾರ್ ಬಂಧಿತ ಆರೋಪಿ. ಆಟೋ ಓಡಿಸುತ್ತಿದ್ದ ಇವನು ಅದೇ ಗ್ರಾಮದ ಯುವತಿಯನ್ನು ಪ್ರೀತಿಸಿ ನಾಲ್ಕು ವರ್ಷದ ಹಿಂದೆ ವಿವಾಹವಾಗಿದ್ದ. ಆಟೋ ಓಡಿಸುವ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಪರಿಚಯವಾಗಿ ಸ್ನೇಹಕ್ಕೆ ತಿರುಗಿದೆ. ಇದನ್ನು ದುರ್ಬಳಕೆ ಮಾಡಿಕೊಂಡ ಮೋಹನ್ಕುಮಾರ್ ಆಕೆಯನ್ನು ಪ್ರೀತಿಸುವುದಾಗಿ ನಾಟಕವಾಡಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ಮಗಳ ದೇಹದಲ್ಲಾಗುತ್ತಿದ್ದ ಬದಲಾವಣೆಯನ್ನು ಕಂಡು ಗಾಬರಿಗೊಂಡ ತಾಯಿ ಮಗಳನ್ನು ವಿಚಾರಿಸಿದಾಗ ಮೋಹನ್ ಕುಮಾರ್ ವಿಚಾರವನ್ನು ತಿಳಿಸಿದ್ದಾಳೆ. ತಕ್ಷಣ ಆಶಾ ಕಾರ್ಯಕರ್ತೆಯರ ನೆರವಿನಲ್ಲಿ ಕೊಳ್ಳೆಗಾಲ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಅಲ್ಲಿನ ವೈದ್ಯರು ಬಾಲಕಿ 6 ತಿಂಗಳ ಗರ್ಭಿಯಾಗಿದ್ದಾಳೆ ಎಂದು ದೃಢಪಡಿಸಿದ್ದಾರೆ. ಕೂಡಲೇ ತಾಯಿ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದು , ಸಿಪಿಐ ಅಮರನಾರಾಯಣ ಮಾರ್ಗದರ್ಶನದಲ್ಲಿ ಸಿಬ್ಬಂದಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.