ವಿದ್ಯಾವಾರಿಧಿ ಶಾಲೆಯಲ್ಲಿ ವಿಷಾಹಾರ ಸೇವನೆ ಪ್ರಕರಣ : ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ

2
ತುಮಕೂರು, ಮಾ.13-ಚಿಕ್ಕನಾಯಕನಹಳ್ಳಿ ತಾಲೂಕು, ಹುಳಿಯಾರು ಹೋಬಳಿಯ ವಿದ್ಯಾವಾರಿಧಿ ಬೋರ್ಡಿಂಗ್ ಶಾಲೆಯಲ್ಲಿ ವಿಷಾಹಾರ ಸೇವನೆ ಪ್ರಕರಣದಲ್ಲಿ ನಿನ್ನೆ ಸೆಕ್ಯೂರಿಟಿ ಗಾರ್ಡ್ ರಮೇಶ್ ನಿಧನದಿಂದ ಆಕ್ರೋಶಗೊಂಡ ಅವರ ಸಂಬಂಧಿಕರು ಶವದ ಗಾಡಿಯೊಂದಿಗೆ ಶಾಲೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಮೇಶ್ ನಿನ್ನೆ ಸಾವನ್ನಪ್ಪಿದ್ದು,ಆತನ ಸಾವಿಗೆ ಕಾರಣರಾದ ಶಾಲೆಯವರು ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಶವ ಸಾಗಿಸುವುದಿಲ್ಲವೆಂದು ಪಟ್ಟು ಹಿಡಿದ ಸಂಬಂಧಿಕರು ಹಾಗೂ ಗ್ರಾಮಸ್ಥರು ಶಾಲಾ ಆಡಳಿತ ಮಂಡಳಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.ಕಳೆದ ಬುಧವಾರ ನಡೆದ ದುರ್ಘಟನೆಯ ವೇಳೆ ಶಾಲೆಯ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಹೊಸಹಳ್ಳಿ ವಾಸಿ ರಮೇಶ್ ಸಹ ವಿಷಪೂರಿತ ಆಹಾರ ಸೇವನೆಯಿಂದ ಅಸ್ವಸ್ಥರಾಗಿ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಬೆಳಗ್ಗೆ 10 ಗಂಟೆ ಸಮಯದಲ್ಲಿ ಮೃತಪಟ್ಟಿದ್ದಾರೆ.

ಮೃತದೇಹವನ್ನು ತರುತ್ತಿದ್ದ ವೇಳೆ ಸುದ್ದಿ ತಿಳಿದ ಗ್ರಾಮಸ್ಥರು ಶಾಲೆಯ ಬಳಿ ಅಪಾರ ಸಂಖ್ಯೆಯಲ್ಲಿ ಜಮಾಯಿಸಿ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಅಲ್ಲದೆ, ರಸ್ತೆ ತಡೆ ಕೂಡ ನಡೆಸಲು ಮುಂದಾದಾಗ ಸ್ಥಳದಲ್ಲಿದ್ದ ಪಿಎಸ್‍ಐ ಪ್ರವೀಣ್ ಅದನ್ನು ತಡೆದಿದ್ದರಿಂದ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ.ಆಡಳಿತ ಮಂಡಳಿಯವರು ಪರಿಹಾರ ನೀಡಲು ಸಮ್ಮತಿ ನೀಡಿದರೂ ಅವರ ಕೊಡುವ ಹಣ ಏನೇನೂ ಸಾಲದು, ರಮೇಶ್ ಕುಟುಂಬದವರು ಬೀದಿಪಾಲಾಗಿದ್ದಾರೆ. ನಿಮ್ಮ ಹಣವೇ ಬೇಡ ಎಂದು ಮೃತ ದೇಹ ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್ ತಡೆದು ಶಾಲೆ ಮುಂದೆ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ತಾಲೂಕು ಉಪ್ಪಾರ ಸಂಘದ ಉಪಾಧ್ಯಕ್ಷ ಹಾಗೂ ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷ, ಜಿ.ಪಂ.ಸದಸ್ಯ ಸೋಮನಹಳ್ಳಿ ಕಲ್ಲೇಶ್, ಬಸವರಾಜ್, ಮಾಜಿ ತಾ.ಪಂ. ಸದಸ್ಯ ಜಯಣ್ಣ ಐದು ಲಕ್ಷ ರೂ. ಪರಿಹಾರವನ್ನು ಮೃತರ ಕುಟುಂಬದವರಿಗೆ ಕೊಡಿಸುವುದಾಗಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರಾದರೂ ಫಲ ನೀಡಲಿಲ್ಲ.ಮೃತನ ಪತ್ನಿ ಕೆಂಚಮ್ಮನಿಗೆ ಕೆಲಸ ಕೊಡಬೇಕು, ಅವರ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.ಸದ್ಯ ಶಾ ಪರವಾಗಿ ಪರಿಹಾರ ಕೊಡುವುದಾಗಿ ಹೇಳಿ ನಂತರ ಮುಂದಿನ ವ್ಯವಸ್ಥೆ ಮಾಡುವುದಾಗಿ ತಿಳಿಸಿದ ನಂತರ ಶವವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin