ವಿದ್ಯುತ್ ಅಭಾವ ನಿವಾರಿಸಲಿದೆ ಮೂನ್ ‘ಲೈಟ್’ : ಇಸ್ರೋದಿಂದ ಮತ್ತೊಂದು ಸಾಹಸ

Spread the love

ISRO R

ನವದೆಹಲಿ, ಫೆ.19- ಏಕಕಾಲದಲ್ಲಿ 104 ಉಪಗ್ರಹ ಗಳನ್ನು ಉಡಾಯಿಸಿ ವಿಶ್ವವಿಕ್ರಮ ಸ್ಥಾಪಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕಿದೆ. ದೇಶಕ್ಕೆ ಅಗತ್ಯವಾಗಿರುವ ಅಗಾಧ ಶಕ್ತಿ ಮೂಲವನ್ನು (ವಿದ್ಯುತ್-ಮೂನ್‍ಲೈಟ್) 2030ರ ವೇಳೆಗೆ ಚಂದ್ರನಿಂದ ಪಡೆಯಲು ಇಸ್ರೋ ವಿಜ್ಞಾನಿಗಳು ಈಗಿನಿಂದಲೇ ಕಾರ್ಯೋನ್ಮುಖರಾಗಿದ್ದಾರೆ.ಭೂಮಿಗೆ ಬೆಳದಿಂಗಳನ್ನು ಚೆಲ್ಲುವ ಶಶಾಂಕನ ಅಂಗಳದಲ್ಲಿ ಹಿಲಿಯಂ-3 ಸಮೃದ್ಧವಾಗಿದ್ದು, ಅದನ್ನು ಇಂಧನವಾಗಿ ಮಾರ್ಪಾಡು ಮಾಡಿಕೊಂಡು ದೇಶಕ್ಕೆ ಅಗತ್ಯವಾಗಿರುವ ವಿದ್ಯುತ್ ರೂಪವಾಗಿ ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ನಡೆಯುತ್ತಿರುವ ಪ್ರಯೋಗ ಸಾಕಷ್ಟು ಯಶಸ್ಸು ಕಂಡಿದೆ ಎಂದು ಇಸ್ರೋದ ಹಿರಿಯ ವಿಜ್ಞಾನಿ ಶಿವತನುಪಿಳ್ಳೈ ಹೇಳಿದ್ದಾರೆ. 2030ರ ವೇಳೆಗೆ ಈ ಯೋಜನೆ ಸಾಕಾರಗೊಳ್ಳಲಿದೆ. ಚಂದ್ರನಲ್ಲಿ ಹೇರಳವಾಗಿರುವ ಹಿಲಿಯಂ-3 ಇಂಧನವನ್ನು ವಿದ್ಯುತ್ ಆಗಿ ಮಾರ್ಪಾಡು ಮಾಡಿಕೊಳ್ಳಲು ಸಾಧ್ಯವಿದೆ.
ಆ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.ಒಆರ್‍ಎಫ್‍ನಿಂದ ಕಲ್ಪನಾ ಚಾವ್ಲ ಸ್ಪೇಸ್ ಪಾಲಿಸಿ ಡೈಲಾಗ್‍ನಿಂದ ಏರ್ಪಡಿಸಲಾಗಿದ್ದ ಮೂರು ದಿನಗಳ ಅಬ್ಜರ್‍ವರ್ ರಿಸರ್ಚ್ ಫೌಂಡೇಶನ್(ವೀಕ್ಷಕರ ಸಂಶೋಧನಾ ಪ್ರತಿಷ್ಠಾನ-ಒಆರ್‍ಎಫ್)ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಈ ಸಂಗತಿಯನ್ನು ಪಿಳ್ಳೈ ಬಹಿರಂಗಗೊಳಿಸಿದ್ದಾರೆ.ಹಿಲಿಯಂ-3ನಲ್ಲಿ ಸಮೃದ್ಧವಾಗಿರುವ ಚಂದ್ರನ ಕಣಗಳು ವಿದ್ಯುತ್ ಉತ್ಪಾದನೆಗೆ ಅತ್ಯಂತ ಪೂರಕವಾಗಿದೆ. ಇನ್ನು 13 ವರ್ಷಗಳಲ್ಲಿ ದೇಶದ ಇಂಧನ ಸಮಸ್ಯೆ ಬಗೆಹರಿಸಲು ಇದು ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದು ಬ್ರಹ್ಮೋಸ್ ವೈಮಾಂತರಿಕ್ಷ ವಿಭಾಗದ ಮಾಜಿ ಮುಖ್ಯಸ್ಥರೂ ಆದ ಪಿಳ್ಳೈ ತಿಳಿಸಿದ್ದಾರೆ.ಇದೇ ಯೋಜನೆಯಲ್ಲಿ ವಿಶ್ವದ ಇತರೆ ರಾಷ್ಟ್ರಗಳು ಸಹ ಕಾರ್ಯೋನ್ಮುಖವಾಗಿವೆ. ಚಂದಿರನ ಮೇಲ್ಮೈನಲ್ಲಿ ಬೆಟ್ಟದ ರೂಪದಲ್ಲಿರುವ ಹಿಲಿಯಂ ಅಂಶಗಳನ್ನು ವಿದ್ಯುತ್ ಮೂಲವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಪ್ರಯೋಗಗಳು ನಡೆದಿವೆ. ಆದರೆ, ಈ ನಿಟ್ಟಿನಲ್ಲಿ ಇಸ್ರೋ ಒಂದು ಹೆಜ್ಜೆ ಮುಂದಿದೆ ಎಂದು ಪಿಳ್ಳೈ ಹೇಳಿದರು.
ಕ್ರಯೋಜೆನಿಕ್ ಸಾಧನೆ:
ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಕ್ರಯೋಜೆನಿಕ್ ಎಂಜಿನ್‍ನ ಕೊನೆಯ ಹಂತದ ಪರೀಕ್ಷೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಶಸ್ವಿಯಾಗಿ ನಡೆಸಿದೆ.ಇಲ್ಲಿನ ಮಹೇಂದ್ರಗಿರಿಯಲ್ಲಿರುವ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಎಂಜಿನ್‍ನ ಪರೀಕ್ಷೆ ನಡೆಸಲಾಗಿದೆ. ಏಪ್ರಿಲ್‍ನಲ್ಲಿ ಈ ಎಂಜಿನ್‍ಅನ್ನು ರಾಕೆಟ್‍ಗೆ ಅಳವಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin