ವಿಧಾನಪರಿಷತ್‍ನಲ್ಲೂ ಕಾಂಗ್ರೆಸ್-ಜೆಡಿಎಸ್ ದೋಸ್ತಿಗೆ ವೇದಿಕೆ ಸಜ್ಜು

JDS---Congress

ಬೆಂಗಳೂರು, ಮಾ.25- 2018ರ ವಿಧಾನಸಭಾ ಚುನಾವಣೆಯ ಮಹಾಘಟ್ಬಂಧನ್‍ಗೆ ಮುನ್ನುಡಿ ಎಂಬಂತೆ ವಿಧಾನಪರಿಷತ್‍ನಲ್ಲೂ ಕಾಂಗ್ರೆಸ್-ಜೆಡಿಎಸ್ ದೋಸ್ತಿಗೆ ವೇದಿಕೆ ಸಜ್ಜಾಗಿದೆ. ಪರಿಷತ್‍ನಲ್ಲಿ ಸಭಾಪತಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಕಾಂಗ್ರೆಸ್ ಜೊತೆ ಮೈತ್ರಿಗೆ ಮುಂದಾಗಿದ್ದು, ಹಾಲಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಉಭಯ ಪಕ್ಷಗಳು ಮುಂದಾಗಿವೆ.  ಬಜೆಟ್ ಅಧಿವೇಶನ ಎರಡು ದಿನ ಮಾತ್ರ ಬಾಕಿ ಇದ್ದು, ಸೋಮವಾರ ಮತ್ತು ಮಂಗಳವಾರ ನಡೆದ ಬಳಿಕ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಡುತ್ತದೆ.  ಈಗ ಮೈತ್ರಿಗೆ ಸಾಧ್ಯವಾಗದಿದ್ದರೂ ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಅವಿಶ್ವಾಸನಿರ್ಣಯ ಮಂಡಿಸಿ ಶಂಕರಮೂರ್ತಿಯವರನ್ನು ಕೆಳಗಿಳಿಸುವ ಲೆಕ್ಕಾಚಾರ ಉಭಯ ಪಕ್ಷಗಳಲ್ಲಿದೆ.

ಹೊರಟ್ಟಿಗೆ ಸಭಾಪತಿ ಸ್ಥಾನ:

ಮೂಲಗಳ ಪ್ರಕಾರ ಸತತ ಆರು ಬಾರಿ ವಿಧಾನಪರಿಷತ್‍ಗೆ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಬಸವರಾಜ್ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ನೀಡಲು ಎರಡು ಪಕ್ಷಗಳು ತೀರ್ಮಾನಿಸಿವೆ. ಸೇವಾ ಹಿರಿತನ ಹಾಗೂ ಸದನವನ್ನು ಸಮಚಿತ್ತದಿಂದ ನಿಭಾಯಿಸಿಕೊಂಡು ಹೋಗುವ ಅನುಭವ ಹೊರಟ್ಟಿ ಅವರಿಗಿದೆ. ಹೀಗಾಗಿಯೇ ಅವರಿಗೆ ಸಭಾಪತಿ ಸ್ಥಾನ ನೀಡಲು ಸ್ವತಃ ಮುಖ್ಯಮಂತ್ರಿಯವರೂ ಸಹ ವಿಶೇಷ ಆಸಕ್ತಿ ವಹಿಸಿದ್ದಾರೆ. ಜೆಡಿಎಸ್‍ಗೆ ಸಭಾಪತಿ ಸ್ಥಾನ ನೀಡಿದರೆ, ಉಪಸಭಾಪತಿ ಸ್ಥಾನವನ್ನು ಕಾಂಗ್ರೆಸ್ ನೀಡಬೇಕಾಗುತ್ತದೆ. ಈ ವೇಳೆ ಈ ಸ್ಥಾನಕ್ಕೆ ಹಿರಿಯ ಮುಖಂಡ ಎಸ್.ಆರ್.ಪಾಟೀಲ್ ಅವರನ್ನು ಆಯ್ಕೆ ಮಾಡುವ ಬಗ್ಗೆ ಪಕ್ಷದಲ್ಲಿ ಚಿಂತನೆ ನಡೆದಿದೆ. ವಿಧಾನಪರಿಷತ್‍ನ ಒಟ್ಟು 75 ಸ್ಥಾನಗಳ ಪೈಕಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಹೊಂದಿದ್ದರೂ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಸಭಾಪತಿ ಸ್ಥಾನವಾಗಿರಲಿಲ್ಲ.

ಪ್ರಸ್ತುತ ಕಾಂಗ್ರೆಸ್ 31, ಬಿಜೆಪಿ 22 ಜೆಡಿಎಸ್ 13, ಪಕ್ಷೇತರರು 5 ಮಂದಿ ಸದಸ್ಯರಿದ್ದಾರೆ. ನಾಲ್ಕು ಸ್ಥಾನಗಳು ಖಾಲಿ ಇದ್ದು, ಆಡಳಿತಾರೂಢ ಕಾಂಗ್ರೆಸ್ ಇವುಗಳಿಗೆ ನಾಮನಿರ್ದೇಶನ ಮಾಡುವ ಅಧಿಕಾರ ಹೊಂದಿದೆ.ನಾಲ್ವರು ನಾಮನಿರ್ದೇಶನ ಮಾಡಿದರೆ ಕಾಂಗ್ರೆಸ್ 35 ಸ್ಥಾನಗಳು ಲಭ್ಯವಾಗಲಿದ್ದು, ಬಿಜೆಪಿ ಸಂಖ್ಯೆ ಕುಸಿಯುತ್ತದೆ. ಅಲ್ಲದೆ, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಗೆ ಮುಂದಾಗಿರುವುದರಿಂದ ಸಹಜವಾಗಿ ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಸುಲಭವಾಗಿ ಸ್ಥಾನ ದಕ್ಕಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin