ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ (Highlights)

Spread the love

VajuBhai--01

ಬೆಂಗಳೂರು, ಫೆ.6- ಮಹಾದಾಯಿ, ಕೃಷ್ಣ ಮತ್ತು ಕಾವೇರಿ ನೀರು ಪಡೆಯಲು ಬದ್ಧತೆ, ಭ್ರಷ್ಟಾಚಾರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಭರವಸೆ, ಅಪಘಾತದಲ್ಲಿ ಗಾಯಾಳುಗಳಿಗೆ ನೆರವಾದವರಿಗೆ ಕಿರುಕುಳ ತಪ್ಪಿಸಲು ಪ್ರತ್ಯೇಕ ಅಧಿನಿಯಮ, ಕೈಗಾರಿಕೆಗಳಿಗೆ ಮತ್ತಷ್ಟು ಆದ್ಯತೆ ಇವು ರಾಜ್ಯಪಾಲರು ಜಂಟಿ ಅಧಿವೇಶವನ್ನು ಉದ್ದೇಶಿಸಿ ಮಾಡಿದ ಭಾಷಣದ ಪ್ರಮುಖ ಅಂಶಗಳು  ಹೊಸ ವರ್ಷದ ಆರಂಭದಲ್ಲಿ ನಡೆದ ಮೊದಲ ವಿಧಾನಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ವಿ.ಆರ್.ವಾಲಾ ಅವರು, ತಮ್ಮ ಸರ್ಕಾರ ದುರ್ಬಲ ವರ್ಗದವರು, ಅವಕಾಶ ವಂಚಿತರ ಕಲ್ಯಾಣ ಮತ್ತು ಅಭಿವೃದ್ಧಿಗೆ ಬದ್ದವಾಗಿದೆ ಎಂದು ಘೋಷಿಸಿದರು.

ನಾಲ್ಕು ವರ್ಷಗಳಲ್ಲಿ ಸಂಪತ್ತು, ಅವಕಾಶ ಮತ್ತು ಅಧಿಕಾರದಲ್ಲಿ ಸರ್ವರಿಗೂ ಸಮಪಾಲು ಸಿಗಬೇಕು ಎಂಬ ಸರ್ವೋದಯದ ಆಶಯದಂತೆ ಅತ್ಯಂತ ಖಚಿತ ಮತ್ತು ನಿರ್ಣಾಯಕ ಸಮರ್ಥ ಕ್ರಮಗಳನ್ನು ಕೈಗೊಂಡಿದೆ ಎಂದು ಸಮರ್ಥಿಸಿಕೊಂಡರು.  ಕಾವೇರಿ, ಮಹಾದಾಯಿ ಜಲವಿವಾದಗಳಲ್ಲಿ ನ್ಯಾಯಾಲಯದ ಆದೇಶಗಳು ಒಡ್ಡಿರುವ ಗಂಭೀರ ಸವಾಲುಗಳನ್ನು ಎದುರಿಸಿ ನನ್ನ ಸರ್ಕಾರ ರಾಜ್ಯ ನೆಲ, ಜಲ ಮತ್ತು ಭಾಷೆ ರಕ್ಷಿಸಲು ಜನತೆಯೊಂದಿಗೆ ಅಚಲವಾಗಿ ನಿಂತಿದೆ.  ಕಾವೇರಿ, ಕೃಷ್ಣ ಮತ್ತು ಮಹಾದಾಯಿ ನದಿಗಳ ನೀರು ಹಂಚಿಕೆಯಲ್ಲಿ ತನ್ನ ನ್ಯಾಯಬದ್ಧ ಪಾಲು ಪಡೆಯಲು ಬದ್ಧವಾಗಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಒಂದೆರಡು ಕಾನೂನು ಭಂಗ ಘಟನೆಗಳನ್ನು ಹೊರತು ಪಡಿಸಿ ಉಳಿದಂತೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿದೆ ಎಂದು ಹೇಳಿಕೊಂಡರು.

Siddaramaiha--011

ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸ್ವಾಯತ್ತ ದಳವನ್ನು ಸ್ಥಾಪಿಸಿದೆ. ಕಡಿಮೆ ಅವಧಿಯಲ್ಲಿ 3401 ಅರ್ಜಿಗಳನ್ನು ಸ್ವೀಕರಿಸಿ 2294 ಅರ್ಜಿಗಳನ್ನು ಎಸಿಬಿಗೆ ವಿಲೇವಾರಿ ಮಾಡಿದೆ. 100 ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಿದ್ದು, 32 ದಾಳಿ, 21ಶೋಧನೆ ಸೇರಿದಂತೆ 153 ಪ್ರಕರಣಗಳನ್ನು ದಾಖಲು ಮಾಡಿಕೊಂಡಿದೆ. ಎಲ್ಲಾ ಜಿಲ್ಲೆಗಳಲ್ಲೂ ಭ್ರಷ್ಟಚಾರ ನಿಗ್ರಹ ಕಚೇರಿಗಳು ಕಾರ್ಯ ಮಾಡುತ್ತಿವೆ. ಎಲ್ಲಾ ಇಲಾಖೆಗಳಲ್ಲಿ ವಿಚಕ್ಷಣ ಕೋಶಗಳನ್ನು ಸ್ಥಾಪಿಸಲಾಗಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿ ಕ್ರಮ ಜರುಗಿಸಲು ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ವಿಶೇಷ ಸ್ಥಾನಮಾನ ಪಡೆದಿರುವ ಹೈದರಾಬಾದ್ ಕರ್ನಾಟಕಕ್ಕೆ ಹೆಚ್ಚು ಅನುದಾನ ಕೊಟ್ಟು ಅಗತ್ಯ ಸಿಬ್ಬಂದಿಗಳನ್ನು ಒದಗಿಸಿ ಅಲ್ಲಿನ ಅಭಿವೃದ್ಧಿಗೆ ಆದ್ಯತೆ ನೀಡಿರುವುದಾಗಿ ಹೇಳಿದರು. ಪೊಲೀಸ್ ಇಲಾಖೆಯನ್ನು ಬಲಗೊಳಿಸಲು ಅಗತ್ಯ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 6 ವರ್ಷಗಳಿಂದಲೂ ಭೀಕರ ಬರ ಪರಿಸ್ಥಿತಿ ಇದೆ. ಮುಂಗಾರು ಮತ್ತು ಹಿಂಗಾರು ವಿಫಲತೆಯಿಂದ 160 ತಾಲ್ಲೂಕುಗಳು ಬರ ಪೀಡಿತವಾಗಿವೆ. ಬರ ನಿರ್ವಹಣೆಗೆ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ಕಳೆದ ಏಪ್ರಿಲ್‍ನಿಂದ ಈವರೆಗೆ 1195 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವುದಾಗಿ ಹೇಳಿದರು.

ಬರದ ಹಿನ್ನೆಲೆಯಲ್ಲಿ 2.25ಲಕ್ಷ ರೈತರು ಈ ವರ್ಷದ ಮಾರ್ಚ್ 31ರ ಮೊದಲು ತಾವು ಪಡೆದ ಕೃಷಿ ಸಾಲದ ಅಸಲನ್ನು ಪಾವತಿಸಿದರೆ ಬಾಕಿ ಇರುವ ಬಡ್ಡಿಯನ್ನು ಮನ್ನಾ ಮಾಡಲು ತೀರ್ಮಾನಿಸಲಾಗಿದೆ. ಈರುಳ್ಳಿ, ತೆಂಗು, ತೊಗರಿ, ಭತ್ತ ಸೇರಿದಂತೆ ವಿವಿಧ ಬೆಳೆಗಳ ಬೆಲೆ ಕುಸಿತವಾದಾಗ ಮಾರುಕಟ್ಟೆ ಮಧ್ಯ ಪ್ರವೇಶಿಸಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಿ ರೈತರ ನೆರವಿಗೆ ಧಾವಿಸಲಾಗಿದೆ ಎಂದರು.  ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದ ಸದಸ್ಯರಿಗೆ ನೆರವು ನೀಡಲು ಸುವರ್ಣ ಆರೋಗ್ಯ ಟ್ರಸ್ಟ್ ಅಡಿ ಇಂದಿರಾ ಸುರಕ್ಷಾ ಯೋಜನೆಯನ್ನು ಆರಂಭಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡುವವರಿಗೆ ಉಂಟಾಗುತ್ತಿರುವ ಕಿರುಕುಳ ತಪ್ಪಿಸಲು ಉತ್ತಮ ಪರೋಪಕಾರಿ ಅಧಿನಿಯಮವನ್ನು ಜಾರಿಗೊಳಿಸಲಾಗಿದೆ.

ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, ಗ್ರಾಮೀಣ ವಿಕೇಂದ್ರಿತ ಯೋಜನೆ ತಯಾರಿಕೆ ಪ್ರಕ್ರಿಯೆಯನ್ನು ಬಲ ಪಡಿಸಲು ನಮ್ಮ ಗ್ರಾಮ ನಮ್ಮ ಯೋಜನೆ ಜಾರಿಗೆ ತರಲಾಗಿದೆ. ಗ್ರಾಮೀಣ ಭಾಗದಲ್ಲಿ 21 ಲಕ್ಷ ಚಟುವಟಿಕೆಗಳನ್ನು ಗುರಿತಿಸಲಾಗಿದ್ದು ಅವುಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಲಾಗುವುದು. ಈಗಾಗಲೇ 8500 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದ್ದು, ಇನ್ನೂ ಒಂದು ಸಾವಿರ ಘಟಕಗಳನ್ನು ಈ ವರ್ಷದ ಮಾರ್ಚ್ ಒಳಗೆ ಸ್ಥಾಪಿಸಲಾಗುವುದು. 7 ದಿನಗಳ ಒಳಗೆ ಪಡಿತರ ಚೀಟಿ ನೀಡಬೇಕೆಂಬ ಉದ್ದೇಶದಿಂದ ಸಕಾಲ ನಿಯಮವನ್ನು ಜಾರಿಗೊಳಿಸಲಾಗಿದೆ.

ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಎರಡು ವರ್ಷದಲ್ಲಿ 4000ಕ್ಕಿಂತ ಹೆಚ್ಚು ನವೋದ್ಯಮಗಳಿಂದ ಒಂದು ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಯಾಗಿದೆ. ಬೆಂಗಳೂರು ಮೆಟ್ರೋ ಪಾಲಿಟನ್ ಪ್ರದೇಶಕ್ಕೆ ಉಪನಗರ ಕಾಮಗಾರಿ ಯೋಜನೆಗೆ ರೈಲ್ವೆ ಮಂತ್ರಾಲಯದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 2016ರಲ್ಲಿ 1,49,587 ಕೋಟಿ ರೂ. ಉದ್ದೇಶಿತ ಬಂಡವಾಳ ಹೂಡಿಕೆಯಿಂದ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.  ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆಯನ್ನು ಜಾಗತಿಕ ಸಮ್ಮೇಳನದೊಂದಿಗೆ ನಾನಾ ದರ್ಶನ ದಿನವನ್ನಾಗಿ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ.

…………….

 • ಕಲಿಕೆಯಲ್ಲಿ ಮಂದತೆಯನ್ನು ಹೊಂದಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ವ್ಯವಸ್ಥೆ : 

ಬೆಂಗಳೂರು, ಫೆ.6-ಕಲಿಕೆಯಲ್ಲಿ ಮಂದತೆಯನ್ನು ಹೊಂದಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿಕ್ಷಕ ಕಿರಣ ಎಂಬ ಹೊಸ ಪತ್ತೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ರಜಾ ಕಾಲದಲ್ಲೂ ಬೋಧನೆ ಮಾಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ಹೇಳಿದರು.  ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಕಲಿಕೆಯ ಮಟ್ಟವನ್ನು ಸುಧಾರಿಸಲು ಎರಡು ಜಿಲ್ಲೆಗಳಲ್ಲಿ ವಿದ್ಯಾರ್ಥಿ ಉತ್ತೇಜಕ ಕಾರ್ಯಕ್ರಮಗಳನ್ನು, 12 ಜಿಲ್ಲೆಗಳಲ್ಲಿ ಗಣಿತ ಕಲಿಕಾ ಕಾರ್ಯಕ್ರಮಗಳನ್ನು, ಮೂರು ಜಿಲ್ಲೆಗಳಲ್ಲಿ ಸಾಕ್ಷರತೆ ಮತ್ತು ಮೂಲಸೂತ್ರಗಳಿಗೆ ಪೂರಕ ಬೋಧನೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ ಎಂದರು.

ಕಲಿಕೆಯಲ್ಲಿ ಐಸಿಟಿಯನ್ನು ತರಲು ತಂತ್ರಜ್ಞಾನದ ನೆರವಿನ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ. ಕಡಿಮೆ ಕಲಿಕಾ ಸಾಮಥ್ರ್ಯದ ವಿದ್ಯಾರ್ಥಿಗಳನ್ನು ಶಿಕ್ಷಣ ಕಿರಣ ಯೋಜನೆ ಮೂಲಕ ಗುರುತಿಸಿ ರಜಾ ಕಾಲದಲ್ಲೂ ಅವರಿಗೆ ಬೋಧನೆ ಮಾಡಿ ಕಲಿಕೆಯ ಮಟ್ಟವನ್ನು ಸುಧಾರಿಸಲಾಗುವುದು ಎಂದು ತಿಳಿಸಿದರು.  62.59 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ, 47.45 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, 8ನೇ ತರಗತಿಯ 4.92 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್, 6.5 ಲಕ್ಷ ವಿದ್ಯಾರ್ಥಿಗಳಿಗೆ ಹಾಲಿನೊಂದಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಆರ್‍ಟಿಇ ಅಡಿ ಮೂರುವರ್ಷದಲ್ಲಿ 4.5ಲಕ್ಷ ಬಡ ಕುಟುಂಬದ ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲಿಸಿ ಸರ್ಕಾರ ಶುಲ್ಕ ಬರಿಸಿದೆ ಎಂದು ಹೇಳಿದರು.

ಉನ್ನತ ಶಿಕ್ಷಣದಲ್ಲಿ ರಾಜ್ಯ ಹೆಚ್ಚು ಸಾಧನೆ ಮಾಡಿದ್ದು, 71 ಕಾಲೇಜುಗಳು ನ್ಯಾಕ್ ಮನ್ನಣೆ ಪಡೆದಿವೆ. ಉನ್ನತ ಶಿಕ್ಷಣ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ. ಸಮಗ್ರ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.

…………….

 • ಮಾತೃಪೂರ್ಣ ಯೋಜನೆಯಿಂದ ತಾಯಿ ಮತ್ತು ಮಕ್ಕಳ ಪೌಷ್ಠಿಕತೆಯಲ್ಲಿ ಹೆಚ್ಚು ಸುಧಾರಣೆ :

ಬೆಂಗಳೂರು, ಫೆ.6- ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಾತೃಪೂರ್ಣ ಯೋಜನೆಯಿಂದ ತಾಯಿ ಮತ್ತು ಮಕ್ಕಳ ಪೌಷ್ಠಿಕತೆಯಲ್ಲಿ ಹೆಚ್ಚು ಸುಧಾರಣೆ ಕಾಣುತ್ತಿದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ತಿಳಿಸಿದರು. ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಬಡ ಗರ್ಭಿಣಿ ಮತ್ತು ಬಾಣಂತಿಯರಿಗೆ ವರ್ಷದಲ್ಲಿ 300ದಿನ ಬಿಸಿಯೂಟ ನೀಡುವ ಪ್ರಾಯೋಗಿಕ ಮಾತೃಪೂರ್ಣ ಯೋಜನೆ ಯಶಸ್ವಿಯಾಗಿದೆ. ಕ್ಷೀರಭಾಗ್ಯ ಯೋಜನೆಯಿಂದ ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಾಗಿದೆ. ಈ ವರ್ಷ 1400 ಅಂಗನವಾಡಿಗಳನ್ನು ಹೊಸದಾಗಿ ಪ್ರಾರಂಭಿಸಿರುವುದರಿಂದ ಅಂಗನವಾಡಿಗಳ ಸಂಖ್ಯೆ 66 ಸಾವಿರಕ್ಕೆ ಹೆಚ್ಚಾಗಿದೆ ಎಂದು ವಿವರಿಸಿದರು.

ಜತೆಗೆ ಮಹಿಳಾ ಸಬಲೀಕರಣಕ್ಕಾಗಿ 30 ಜಿಲ್ಲೆಗಳಲ್ಲಿ ಸ್ವಸಹಾಯ ಜಿಲ್ಲಾ ಸಂಘಗಳನ್ನು ಸ್ಥಾಪಿಸಲು ನೆರವು ನೀಡಿದೆ. ವಿಕಲಚೇತನರ ನೆರವಿಗೆ ಅನುದಾನ ಹೆಚ್ಚಿಸಲಾಗಿದ್ದು, 2007ರಲ್ಲಿ ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಅಧಿನಿಯಮವನ್ನು ಉತ್ತಮ ಅನುಷ್ಠಾನಗೊಳಿಸಿದ್ದಕ್ಕೆ ಪ್ರಶಸ್ತಿ ಪಡೆದ ರಾಜ್ಯವಾಗಿದೆ ಎಂದು ಶ್ಲಾಘಿಸಿದರು.

…………….

 • ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯನ್ನು ಜ್ಞಾನದರ್ಶನ ದಿನವನ್ನಾಗಿ ಆಚರಿಸಲು ನಿರ್ಧಾರ  :

ಬೆಂಗಳೂರು, ಫೆ.6- ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯನ್ನು ಜಾಗತಿಕ ಸಮ್ಮೇಳನದೊಂದಿಗೆ ಜ್ಞಾನದರ್ಶನ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ಹೇಳಿದರು. ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಈ ವರ್ಷ ಎಸ್ಸಿ-ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ 19543 ಕೋಟಿ ಅನುದಾನ ನೀಡಲಾಗಿದೆ. ಅಂಬೇಡ್ಕರ್ ಜಯಂತಿ ಅಂಗವಾಗಿ 125 ವಸತಿ ಶಾಲೆಗಳನ್ನು, 100 ಹೊಸ ಮೆಟ್ರಿಕ್ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡಲಾಗಿದೆ.
ಎಸ್ಸಿ-ಎಸ್ಟಿ ಸಮುದಾಯದ ವಿವಿಧ ನಿಗಮಗಳ 30ಸಾವಿರ ಫಲಾನುಭವಿಗಳಿಗೆ 4475 ಕೋಟಿ ಅನುದಾನ ನೀಡಲಾಗಿದೆ. ಕಾಲೋನಿಗಳ ಮೂಲ ಸೌಕರ್ಯಕ್ಕಾಗಿ 100 ಕೋಟಿ ಹಣ ಖರ್ಚು ಮಾಡಲಾಗಿದೆ.

12,722 ಅರಣ್ಯ ಬುಡಕಟ್ಟು ವಾಸಿಗಳಿಗೆ ಸ್ವಾಧೀನದ ಹಕ್ಕು ಮಂಜೂರು ಮಾಡಲಾಗಿದೆ. ಹಿಂದುಳಿದ ವರ್ಗದ ಮೆಟ್ರಿಕ್ ಪೂರ್ವ 12 ಲಕ್ಷ ವಿದ್ಯಾರ್ಥಿಗಳಿಗೆ 4.5 ಲಕ್ಷ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದ್ದು, ವಕ್ಫ್ ಸ್ವತ್ತುಗಳ ಗಣಕೀಕರಣ ಮತ್ತು ಎರಡನೇ ಹಂತ ಸಮೀಕ್ಷೆ ನಡೆಯುತ್ತಿದೆ ಎಂದು ಹೇಳಿದರು.

…………….

ಎತ್ತಿನಹೊಳೆ ಅನುಷ್ಠಾನಕ್ಕೆ ವಿಶ್ವೇಶ್ವರಯ್ಯ ಜಲನಿಗಮ ಸ್ಥಾಪನೆ  : 

ಬೆಂಗಳೂರು, ಫೆ.6- ಎತ್ತಿನಹೊಳೆ ಮತ್ತು ಭದ್ರಾಮೇಲ್ದಂಡೆ ಯೋಜನೆಗಳ ಅನುಷ್ಠಾನಕ್ಕೆ ವಿಶ್ವೇಶ್ವರಯ್ಯ ಜಲನಿಗಮವನ್ನು ಸ್ಥಾಪಿಸಲಾಗಿದೆ ಎಂದು ರಾಜ್ಯಪಾಲ ವಜುಬಾಯಿ ವಾಲಾ ಹೇಳಿದರು. ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಿದ ಅವರು ನೀರಾವರಿಗೆ ಐದು ವರ್ಷಗಳಲ್ಲಿ 50ಸಾವಿರ ಕೋಟಿ ಅನುದಾನ ನೀಡುವ ಭರವಸೆ ನೀಡಲಾಗಿತ್ತು. ನಾಲ್ಕು ವರ್ಷಗಳಲ್ಲಿ 42500ಕೋಟಿಗಳನ್ನು ಒದಗಿಸಲಾಗಿದೆ. ವಿಶ್ವ ಬ್ಯಾಂಕ್ ನೆರವಿನಲ್ಲಿ 276 ಕೋಟಿ ರೂ. ವೆಚ್ಚದಲ್ಲಿ ಅಣೆಕಟ್ಟು ಪುನಶ್ಚೇತನ ಮತ್ತು 27 ಬಾರಿ ಮಧ್ಯಮ ನೀರಾವರಿ ಅಣೆಕಟ್ಟುಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ. ನಾರಾಯಣಪುರ ಮತ್ತು ಆಲಮಟ್ಟಿ ಅಣೆಕಟ್ಟಿನ ಪುನಶ್ಚೇತನಕ್ಕಾಗಿ ಕೇಂದ್ರ ಜಲ ಆಯೋಗದಿಂದ ಅತ್ಯುತ್ತಮ ನಿರ್ವಹಣೆಯ ಗೌರವ ಪ್ರಶಸ್ತಿಯನ್ನು ಪಡೆಯಲಾಗಿದೆ ಎಂದರು.

…………….

 • ನಾಲ್ಕು ವರ್ಷದಲ್ಲಿ 3924 ಕೋಟಿ ಖರ್ಚು ಮಾಡಿ 921 ಕೆರೆಗಳನ್ನು ಭರ್ತಿ  : 

ಬೆಂಗಳೂರು, ಫೆ.6- ನಾಲ್ಕು ವರ್ಷದಲ್ಲಿ 3924 ಕೋಟಿ ಖರ್ಚು ಮಾಡಿ 921 ಕೆರೆಗಳನ್ನು ಭರ್ತಿ ಮಾಡಿರುವುದಾಗಿ ರಾಜ್ಯ ಸರ್ಕಾರ ಹೇಳಿಕೊಂಡಿದೆ.
ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಪಾಲ ವಿ.ಆರ್.ವಾಲಾ, ಕೃಷಿ ಭಾಗ್ಯ ಯೋಜನೆಯಡಿ 1 ಲಕ್ಷ ಹೊಂಡಗಳನ್ನು, 2450 ಶೆಡ್ ನೆಟ್, ಪಾಲಿಗೃಹಗಳನ್ನು ನಿರ್ಮಿಸಿದೆ. 3ಲಕ್ಷ ಹೆಕ್ಟೇರ್‍ಗೆ ಹನಿ ಹಾಗೂ ತುಂತುರು ನೀರಾವರಿ ಘಟಕ ಸ್ಥಾಪಿಸಲಾಗಿದೆ. ಈ ವರ್ಷ 58586 ಹೆಕ್ಟೇರ್ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಗುರಿ ಇದೆ ಎಂದು ಹೇಳಿದರು.
ಮಳೆ ಆಶ್ರಿತ 129 ಲಕ್ಷ ಹೆಕ್ಟೇರ್ ಪೈಕಿ 63 ಲಕ್ಷ ಹೆಕ್ಟೇರ್‍ನಲ್ಲಿ ಜಲಾನಯನವನ್ನು ಅಭಿವೃದ್ಧಿ ಪಡಿಸಲಾಗಿದೆ. 921 ಕೆರೆಗಳನ್ನು ಭರ್ತಿ ಮಾಡಲಾಗಿದೆ. ಮಳೆ ನೀರು ತಡೆದು ನಿಲ್ಲಿಸಲು ಚೆಕ್‍ಡ್ಯಾಮ್, ಪಿಕಪ್‍ಗಳನ್ನು ನಿರ್ಮಿಸಲಾಗುತ್ತಿದೆ.

…………….

 • ಬೆಳೆ ನಷ್ಟಕ್ಕೆ ವಿಮೆ ಪಾವತಿ:

ಮುಂಗಾರು ಬೆಳೆ ಹಾನಿಯಿಂದ ನಷ್ಟಕ್ಕೊಳಗಾಗಿರುವ ರೈತರಿಗೆ ವಿಮೆ ಹಣ ಪಾವತಿಸಲು ಪ್ರಕ್ರಿಯೆ ಆರಂಭಿಸಲಾಗಿದೆ. ಸುಮಾರು 1.5 ಲಕ್ಷ ಜನರು ವಿಮೆ ಯೋಜನೆಯಡಿ ನೋಂದಾಯಿಸಿದ್ದು, ಸರ್ಕಾರ ಇದಕ್ಕಾಗಿ 675 ಕೋಟಿ ಮೀಸಲಿರಿಸಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ನಿಗದಿತ ಅವಧಿಯಲ್ಲಿ ಕೃಷಿ ವಿಮೆ ಹಣ ನೀಡುತ್ತಿರುವುದಾಗಿ ಅವರು ಹೇಳಿದರು. ಉದ್ಯೋಗ ಖಾತ್ರಿ ಯೋಜನೆ ಹಣ ಬಳಸಿಕೊಂಡು 7436 ಹೆಕ್ಟೇರ್ ತೋಟಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಲಾಗಿದೆ. ತೋಟಗಾರಿಕೆ ರೈತ ಉತ್ಪನ್ನಗಳ ಯೋಜನೆಯಡಿ 57 ಕಂಪೆನಿಗಳು ನೋಂದಣಿಯಾಗಿವೆ. ಅವಕ್ಕೆ ಅನುದಾನವನ್ನು ಸರ್ಕಾರ ನೀಡಿದೆ ಎಂದು ತಿಳಿಸಿದರು.  ಜಾನುವಾರುಗಳಿಗೆ ತಗಲುವ ಸಾಂಕ್ರಾಮಿಕ ರೋಗ ತಡೆಯಲು ಈ ವರ್ಷ 645 ಲಕ್ಷ ಲಸಿಕೆಗಳನ್ನು ಹಾಕಲಾಗಿದೆ ಎಂದು ಅವರು ಹೇಳಿದರು.

…………….

 • ಹೈ-ಕ ಭಾಗಕ್ಕೆ 50ಸಾವಿರ ಹುದ್ದೆ ಮೀಸಲು : 

ಬೆಂಗಳೂರು, ಫೆ.6- ವಿಶೇಷ ಸ್ಥಾನಮಾನ ಪಡೆದಿರುವ ಹೈದರಾಬಾದ್ ಕರ್ನಾಟಕ ಭಾಗದ 6 ಜಿಲ್ಲೆಗಳಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ 50ಸಾವಿರ ಹುದ್ದೆಗಳನ್ನು ಮೀಸಲಿರಿಸಲಾಗಿದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.  ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಮಾತನಾಡಿರುವ ಅವರು, 2013ರ ಸಾರ್ವಜನಿಕ ಉದ್ಯೋಗ ಆದೇಶ ಅನುಸಾರ ಹೈದರಾಬಾದ್- ಕರ್ನಾಟಕದ 6 ಜಿಲ್ಲೆಗಳ ಅಭ್ಯರ್ಥಿಗಳಿಗಾಗಿ 5301 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಅದರಲ್ಲಿ ಕರ್ತವ್ಯ ನಿರತ ಸಿಬ್ಬಂದಿಗಳನ್ನು 12326 ಹುದ್ದೆಗಳಿಗೆ, 13135 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗಿದೆ. ನಂಜುಂಡಪ್ಪ ಸಮಿತಿ ವರದಿ ಅನುಷ್ಠಾನಕ್ಕಾಗಿ 3ಸಾವಿರ ಕೋಟಿ ರೂ.ಗಳನ್ನು ವಿಶೇಷ ಅನುದಾನ ನೀಡಲಾಗಿದೆ. ಒಂದು ಸಾವಿರ ಕೋಟಿ ಹೈ-ಕ ಭಾಗಕ್ಕೆ ಅನುದಾನ ಒದಗಿಸಲಾಗಿದೆ ಎಂದರು.

…………….

 • ಸಂಚಾರ ದಟ್ಟಣೆ ನಿವಾರಿಸಿ : 

ಬೆಂಗಳೂರು,ಫೆ.6- ಬೆಂಗಳೂರು ಮಹಾನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿವಾರಿಸಿ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಲು ಪ್ರಾರಂಭಿಸಿರುವ ಬೆಂಗಳೂರು ಮೆಟ್ರೋ ಒಂದನೇ ಹಂತವು ಏಪ್ರಿಲ್ ತಿಂಗಳಿಗೆ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಸಮರ್ಪಣೆಯಾಗಲಿದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ತಿಳಿಸಿದ್ದಾರೆ. ವಿಧಾನಮಂಡಲದ ಜಂಟಿ  ಅಧಿವೇಶನದಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ವಿಶ್ವದ ಅತ್ಯಂತ ಕ್ರಿಯಾಶೀಲನಗರ ಎಂದು ಪರಿಗಣಿಸಿದೆ. ಸಾರ್ವಜನಿಕರ ಸಾರಿಗೆ ಮತ್ತು ವೈಜ್ಞಾನಿಕ ಸಂಚಾರ ನಿರ್ವಣೆಗಾಗಿ ಬೆಂಗಳೂರು ಮೆಟ್ರೊ ಮೊದಲ ಹಂತದ 4238 ಕಿ.ಮೀ ಏಪ್ರಿಲ್ ತಿಂಗಳಿಗೆ ಅಂತ್ಯವಾಗಲಿದೆ. ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ಇನ್ನಷ್ಟು ಸುಧಾರಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

2ನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ಶೀಘ್ರಗತಿಯಲ್ಲಿ ಯೋಜನೆ ಕಾರ್ಯಗತಗೊಳಿಸಲಾಗುವುದು. ಬೆಂಗಳೂರು ಮಹಾನಗರಕ್ಕಾಗಿಯೇ ರೈಲ್ವೆ ಇಲಾಖೆ ಸಹಯೋಗದಲ್ಲಿ ಉಪನಗರ ರೈಲ್ವೆ ಕಾಮಗಾರಿ ಆರಂಭಿಸಲು ರೈಲ್ವೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಳ್ಳಾಗಿದೆ. ಇದು ಅನುಷ್ಠಾನವಾದರೆ ಸಾರ್ವಜನಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ.  ಪ್ರಸಕ್ತ ವರ್ಷ ಹಾಗೂ ಮುಂದಿನ ಸಾಲಿನ ಅವಧಿಯಲ್ಲಿ ಬೆಂಗಳೂರು ಮಹಾನಗರದಲ್ಲಿ ಮೂಲಭೂತ ಸೌಲಭ್ಯ ಕೈಗೊಳ್ಳಲು ನೀಲಿನಕ್ಷೆ ತಯಾರಿಸಲಾಗಿದೆ. ಒಟ್ಟು 7300 ಕೋಟಿ ರೂ. ವೆಚ್ಚದಲ್ಲಿ ವಿವಿಧ ರಸ್ತೆಗಳ ಕಾಮಗಾರಿ, ಒಳಚರಂಡಿ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ವಿವಿಧ ರೀತಿಯ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.  ಬೆಂಗಳೂರು ನೀರು ಸರಬರಾಜು ಮತ್ತು  ಒಳಚರಂಡಿ ಮಂಡಳಿ ಜೊತೆ ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಗ್ರಾಮಗಳಿಗೆ ಕಾವೇರಿ ನೀರು ಒದಗಿಸಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಹೇಳಿದರು.

ಬೆಂಗಳೂರು ವಿಶ್ವದಲ್ಲಿ ಗುರುತಿಸಿಕೊಂಡಿರುವ ಮಹಾನಗರ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಲಯದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಪ್ರತಿ ವರ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವುದು ನಮ್ಮ ಸರ್ಕಾರದ ಮೊದಲ ಗುರಿಯಾಗಿದೆ ಎಂದು ಅವರು ಹೇಳಿದರು.

…………….

 • ಹಸಿವು ಮುಕ್ತ ರಾಜ್ಯ ಮಾಡಲು ಸರ್ಕಾರ ಬದ್ಧ :

ಬೆಂಗಳೂರು, ಫೆ.6-ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಲು ಸರ್ಕಾರ ಶ್ರಮಿಸುತ್ತಿದ್ದು, ಅನ್ನಭಾಗ್ಯ ಯೋಜನೆಯಡಿ ಆದ್ಯತಾ ಮತ್ತು ಅಂತ್ಯೋದಯ ಕುಟುಂಬಗಳಿಗೆ ಅರ್ಧ ಬೆಲೆಯಲ್ಲಿ ತಿಂಗಳಿಗೆ ಒಂದು ಕೆಜಿ ದ್ವಿದಳ ಧಾನ್ಯವನ್ನು ಹೆಚ್ಚುವರಿಯಾಗಿ ನೀಡಲಾಗುವುದು ಎಂದು ರಾಜ್ಯಪಾಲ ವಿ.ಆರ್.ವಾಲಾ ತಿಳಿಸಿದ್ದಾರೆ. ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ  ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯಡಿ ಒಂದು ಕೋಟಿಗೂ ಹೆಚ್ಚುವರಿ ಆದ್ಯತಾ ಕುಟುಂಬಗಳನ್ನು ಗುರುತಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕಬ್ಬಿಣಾಂಶವಿರುವ ಉಪ್ಪು, ವಿಟಮಿನ್-ಎ,ಬಿ ಧಾನ್ಯಗಳನ್ನು ವಿತರಿಸಲಾಗುವುದು ಎಂದರು.

ಈ ತಿಂಗಳಿನಿಂದಲೇ ಯೋಜನೆ ಜಾರಿಗೆ ಬರಲಿದ್ದು, ಆದ್ಯತಾ ಮತ್ತು ಅಂತ್ಯೋದಯ ಕುಟುಂಬಗಳಿಗೆ ಒಂದು ಕೆಜಿ ದ್ವಿದಳ ಧಾನ್ಯವನ್ನು ಹೆಚ್ಚುವರಿಯಾಗಿ ನೀಡಲಾಗುವುದು. ಹೊಸ ಪಡಿತರ ವಿತರಣೆ ಮಂಜೂರು ಮಾಡುವ ಕ್ರಮವನ್ನು ಸರ್ಕಾರಿ ವ್ಯಾಪ್ತಿಗೆ ತರಲಾಗಿದೆ ಎಂದರು.  ರಾಜ್ಯವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡಲು ಪ್ರತಿವರ್ಷ 3 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಪ್ರಸಕ್ತ ವರ್ಷದಲ್ಲಿ 1.93 ಲಕ್ಷ ಮನೆಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿರುವ ಸರ್ಕಾರ 2013-14ರಿಂದ ಇಲ್ಲಿಯವರೆಗೂ ಒಟ್ಟು 10.45 ಲಕ್ಷ ಮನೆ ನಿರ್ಮಾಣ ಮಾಡಿದೆ. ಒಟ್ಟು 6ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಫಲಾನುಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳಿಗೆ ಸರ್ಕಾರ ಒತ್ತು ನೀಡಿದ ಪರಿಣಾಮ ವಿದ್ಯುತ್ ಉತ್ಪಾದನಾ ಸಾಮಥ್ರ್ಯ ಹೆಚ್ಚಳವಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ 200 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಘಟಕ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ವಿಕೇಂದ್ರಿಕೃತ ಹಂಚಿಕೆ ಮಾಡಲು ಸೋಲಾರ್‍ಘಟಕ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯನ್ನು ಭೂ ಒಡೆತನ ರೈತರಿಗೆ ಪ್ರೊತ್ಸಾಹ ನೀಡಲು ಜಾರಿಗೆ ತರಲಾಗಿದೆ ಎಂದು ಹೇಳಿದರು.  ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಸುವ ಸಲುವಾಗಿ 129 ತಾಲೂಕುಗಳಲ್ಲಿ ನಿರಂತರ ಜ್ಯೋತಿ ಅನುಷ್ಠಾನಗೊಂಡಿದೆ ಎಂದು ತಿಳಿಸಿದರು.

…………….

 • 1,000 ಸಾವಿರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ :

ಬೆಂಗಳೂರು, ಫೆ.6-ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಉತ್ತಮ ನೀರು ಪೂರೈಕೆ ಮಾಡುವ ಸದುದ್ದೇಶದಿಂದ ಮಾರ್ಚ್ ತಿಂಗಳ ಅಂತ್ಯದವರೆಗೆ ಹೆಚ್ಚುವರಿಯಾಗಿ ಒಂದು ಸಾವಿರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು ಎಂದು ರಾಜ್ಯಪಾಲ ವಿ.ಆರ್.ವಾಲಾ ಘೋಷಿಸಿದರು.  ವಿಧಾನಮಮಂಡಲದ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ನಮ್ಮ ಸರ್ಕಾರದ ಪ್ರಮುಖ ಉದ್ದೇಶ. 2016ರ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟು 8500 ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯಾರಂಭವಾಗಿದೆ. ಮಾರ್ಚ್ ತಿಂಗಳ ಅಂತ್ಯಕ್ಕೆ ಒಂದು ಸಾವಿರ ಘಟಕಗಳನ್ನು ಸ್ಥಾಪನೆ ಮಾಡುವ ಗುರಿ ಹೊಂದಲಾಗಿದೆ ಎಂದರು.

ಗ್ರಾಮೀಣ ಭಾಗದ ಒಂದು ಕೋಟಿ ಜನತೆಗೆ ಶುದ್ಧ ನೀರು ಪೂರೈಸುವುದು ನಮ್ಮ ಉದ್ದೇಶವಾಗಿದ್ದು, ವೈಯಕ್ತಿಕ ಶೌಚಾಲಯಗಳ ನಿರ್ಮಾಣದಲ್ಲಿ ಬಹು ದೊಡ್ಡ ಕ್ರಾಂತಿಕಾರಿ ಬದಲಾವಣೆಯನ್ನು ಸಾಧಿಸಿದ್ದೇವೆ. 2016ಕ್ಕೆ 26 ಲಕ್ಷಕ್ಕೂ ಹೆಚ್ಚು ಶೌಚಾಲಯ ನಿರ್ಮಾಣ ಮಾಡಲಾಗಿದೆ. ರಾಜ್ಯದ 1035 ಗ್ರಾ.ಪಂ.ಗಳಲ್ಲಿ 4954 ಗ್ರಾಮಗಳು 26 ತಾಲೂಕುಗಳು, 5 ಜಿಲ್ಲೆಗಳನ್ನು ಸಂಪೂರ್ಣ ಬಹಿರ್ದೆಸೆ ಮುಕ್ತವನ್ನಾಗಿಸಲು ಕ್ರಮ ಕೈಗೊಳ್ಳಲಾಗಿದೆ.  ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ ಇನ್ನು 2 ಜಿಲ್ಲೆಗಳಲ್ಲಿ 20 ತಾಲೂಕುಗಳು 500 ಗ್ರಾ.ಪಂಗಳು ಮತ್ತು 3 ಸಾವಿರ ಗ್ರಾಮಗಳನ್ನು ಬಹಿರ್ದೆಸೆ ಮುಕ್ತಗೊಳಿಸುವುದಾಗಿ ತಿಳಿಸಿದರು.

ನಮ್ಮ ಸರ್ಕಾರವು ಗ್ರಾಮೀಣರಿಗೆ ಉದ್ಯೋಗಾವಕಾಶ ಕಲ್ಪಿಸಲು ದಾಪುಗಾಲಿಟ್ಟಿದೆ. ಪ್ರಸಕ್ತ ವರ್ಷ 6ರಿಂದ 10 ಕೋಟಿವರೆಗೂ ಮಾನವ ದಿನಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಹಣ ನೀಡಲು ವಿಳಂಬ ಮಾಡಿತ್ತು. ಈ ವೇಳೆ ರಾಜ್ಯ ಸರ್ಕಾರವೇ 900 ಕೋಟಿ ರೂ. ಬಿಡುಗಡೆ ಮಾಡಿದೆ. ಶೇ.50ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಜನಸಂಖ್ಯೆ ಹೊಂದಿರುವ ಗ್ರಾಮಗಳ ಪೈಕಿ 150 ಗ್ರಾಮಗಳಲ್ಲಿ ಮುಖ್ಯಮಂತ್ರಿ ಮಾದರಿ ಗ್ರಾಮದಡಿ ಸಮಗ್ರವಾಗಿ ಯೋಜನೆ ಅನುಷ್ಠಾನಗೊಳಿಸುವುದು ಎಂದರು.  ಗ್ರಾಮ ವಿಕಾಸ ಯೋಜನೆಯಡಿ 939 ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ 750 ಕೋಟಿ ಅನುದಾನ ನಿಗದಿಪಡಿಸಿದ್ದು, ಇದುವರೆಗೂ 470 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸರ್ಕಾರ ತಿಳಿಸಿದೆ. ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸಲು ಸರ್ಕಾರ ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.

…………….

* ನೂತನ ವೈದ್ಯಕೀಯ ಕಾಲೇಜುಗಳ ಪ್ರಾರಂಭ  :

ಬೆಂಗಳೂರು, ಫೆ.6-ಕಲಬುರಗಿ, ಗದಗ, ಕೊಪ್ಪಳ, ಕಾರವಾರ, ಕೊಡಗು, ಮತ್ತುಚಾಮರಾಜನಗರಗಳಲ್ಲಿ ನೂತನ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಿರುವುದರಿಂದ ರಾಜ್ಯಕ್ಕೆ 900 ಎಂಬಿಬಿಎಸ್ ಸೀಟುಗಳು ಸಿಗಲಿದ್ದು ವಿದ್ಯಾರ್ಥಿಗಳೀಗೆ ಅನುಕೂಲವಾಗಲಿದೆ. ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ತಮ ಆರೋಗ್ಯ ನೀಡಲು ಸಹಕಾರಿಯಾಗಲಿದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ತಿಳಿಸಿದರು.  ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ನೂತನ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡಿರುವ ಪರಿಣಾಮ ರಾಜ್ಯಕ್ಕೆ 900 ಎಂಬಿಬಿಎಸ್ ಸೀಟುಗಳು ಲಭಿಸಲಿವೆ.

ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ 4 ಹೊಸ ಶಸ್ತ್ರ ಚಿಕಿತ್ಸೆ ವಿಭಾಗಗಳು ಮತ್ತು 198 ಹೆಚ್ಚುವರಿ ಹಾಸಿಗೆಗಳ ಸೌಲಭ್ಯಗಳನ್ನು ಆರಂಭಿಸಿವೆ ಎಂದರು.  ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ನೀಡುವುದು ನಮ್ಮ ಗುರಿ. ಇದಕ್ಕಾಗಿ ಕಳೆದ 3 ವರ್ಷಗಳಲ್ಲಿ ಸರ್ಕಾರಿ ಬೋಧನೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 2708 ಹಾಸಿಗೆಗಳ ಸೌಲಭ್ಯವನ್ನು ಒದಗಿಸಲಾಗಿದೆ. ಪ್ರಸಕ್ತ ವರ್ಷ ಮೈಸೂರಿನಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಘಟಕ ಪ್ರಾರಂಭ ಮಾಡುವುದಾಗಿ ಘೋಷಿಸಿದರು.  ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರ ತೀರ್ಮಾನಿಸಿದ್ದು, ರೆಬಿಯಾ ವೇಗೋತ್ಕರ್ಷ ಸಲಕರಣೆಗಳು ಮತ್ತು ರೋಬೊಟೆಕ್ ಸಲಕರಣೆ ಸ್ಥಾಪಿಸುವುದು ನಮ್ಮ ಉದ್ದೇಶವಾಗಿದೆ ಎಂದರು.

ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಇಂದಿರಾ ಸುರಕ್ಷಾ ಯೋಜನೆ, ತೀವ್ರ ಶ್ರವಣ ದೋಷವುಳ್ಳ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡುವುದು, ಆಧುನಿಕ ಶ್ರವಣ ಸಾಧನ ಅಳವಡಿಕೆ ಜಾರಿಗೆ ತಂದಿದೆ ಎಂದರು.  ಪ್ರಾಥಮಿಕ ಆರೋಗ್ಯ ಬಲಪಡಿಸಲು ಹೆಚ್ಚು ಆದ್ಯತೆ ನೀಡಲಾಗಿದೆ. ಶಿಶು ಮರಣ ಪ್ರಮಾಣ, ಬಾಣಂತಿಯರ ಮರಣ ಪ್ರಮಾಣ ಕಡಿಮೆ ಮಾಡುವ ಜತೆಗೆ ವಿವಿಧ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಕ್ರಮಕೈಗೊಂಡಿದ್ದೇವೆ ಎಂದು ತಿಳಿಸಿದರು.   ಎಲ್ಲ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಜೆನರಿಕ್ ಔಷಧಾಲಯ ತೆರೆಯುವುದು, ಕಡ್ಡಾಯ ಆ್ಯಂಬುಲೆನ್ಸ್ ಸೇವೆ, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಡಯಾಲಿಸಿಸ್ ಘಟಕಗಳ ಸ್ಥಾಪನೆ ಜತೆಗೆ ಎಲ್ಲಾ ಜಿಲ್ಲಾ ಆಸ್ಪತ್ರೆಗಲ್ಲಿ ರಕ್ತ ಘಟಕದ ಪ್ರತ್ಯೇಕ ಸೌಲಭ್ಯಗಳ ತೀವ್ರ ನಿಗಾ ಘಟಕ ಪ್ರಾರಂಭಿಸಿದ್ದೇವೆ ಎಂದರು.

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ನೆರವು ನೀಡಲು ಸುವರ್ಣ ಟ್ರಸ್ಟ್‍ನಡಿ ಆರೋಗ್ಯ ಇಂದಿರಾ ಸುರಕ್ಷಾ ಯೋಜನೆ ಪ್ರಾರಂಭಿಸಲಾಗಿದೆ. ದೇಶದಲ್ಲಿ ಅಪಘಾತಕ್ಕೀಡಾದವರಿಗೆ ಸೂಕ್ತ ಸಮಯದಲ್ಲಿ ನೆರವು ನೀಡುವುದು ಮತ್ತು ಸಕಾಲದಲ್ಲಿ ಸಹಾಯ ಮಾಡಿದವರಿಗೆ ಯಾವುದೇ ಕಿರುಕುಳ ನೀಡಬಾರದು ಎಂಬ ಕಾರಣಕ್ಕೆ ಇದೇ ಮೊದಲ ಬಾರಿ ಉತ್ತಮ ಪರೋಪಕಾರಿ ಅಧಿನಿಯಮ ಜಾರಿಗೊಳಿಸಲಾಗಿದೆ. ಇದರ ಜತೆಗೆ ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿಗೆ ಆಹಾರ ಒದಗಿಸಲು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಕ್ಯಾಂಟೀನ್ ಸ್ಥಾಪಿಸುವುದಾಗಿ ಘೋಷಿಸಿದರು.

…………….

 • ಖಾಲಿ ಇರುವ 8,885 ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಕ :

ಬೆಂಗಳೂರು, ಫೆ.6-ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಖಾಲಿ ಇರುವ 8,885 ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.  ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಬಲಗೊಳಿಸುವುದು ಹಾಗೂ ಆಧುನಿಕ ರೀತಿಯಲ್ಲಿ ಸಜ್ಜುಗೊಳಿಸಲು ಹಲವು ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ಪ್ರಸಕ್ತ ವರ್ಷ 8,885 ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಹೇಳಿದರು.

2015-16ನೆ ಸಾಲಿನಲ್ಲಿ 282 ಪೊಲೀಸ್ ಇನ್ಸ್‍ಪೆಕ್ಟರ್, 5,653 ಪೊಲೀಸ್ ಕಾನ್‍ಸ್ಟೆಬಲ್‍ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಪೊಲೀಸ್ ಇಲಾಖೆ ಆಧುನೀಕರಣಕ್ಕಾಗಿ 475 ಕೋಟಿ ರೂ. ವೆಚ್ಚದಲ್ಲಿ 72 ಪೊಲೀಸ್ ಠಾಣೆಗಳು, 5 ಪೊಲೀಸ್ ತರಬೇತಿ ಶಾಲೆಗಳು, 10 ಪೊಲೀಸ್ ಔಟ್‍ಪೋಸ್ಟ್‍ಗಳು, 13 ಬ್ಯಾರೆಲ್‍ಗಳು, 87 ವಸತಿಯೇತರ ಕಟ್ಟಡ ಹಾಗೂ 72 ಇತರೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.  ಕಷ್ಟಕರ ಪರಿಸ್ಥಿತಿಯಲ್ಲೂ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಾಗಿ ಹಲವಾರು ರೀತಿಯ ಹೊಸ ಕಲ್ಯಾಣ ಕಾರ್ಯಕ್ರಮ ಕೈಗೊಂಡಿದೆ. ಮಾಸಿಕ ಭತ್ಯೆಯನ್ನು 100 ರೂ.ಗಳಿಂದ 2,100ಕ್ಕೆ ಏರಿಕೆ, ಪೊಲೀಸ್ ಕಾನ್‍ಸ್ಟೆಬಲ್, ಹೆಡ್‍ಕಾನ್‍ಸ್ಟೆಬಲ್ ಮತ್ತು ಎಎಸ್‍ಐಗಳಿಗೆ ಕಾಲಮಿತಿ ಬಡ್ತಿ ಯೋಜನೆ, 46 ಕ್ಯಾಂಟೀನ್‍ಗಳ ಸ್ಥಾಪನೆ, ಪೊಲೀಸ್ ಸಿಬ್ಬಂದಿಗಳಿಗೆ 2,782 ವಸತಿ ಗೃಹಗಳ ನಿರ್ಮಾಣ, 822 ಕೋಟಿ ರೂ. ವೆಚ್ಚದಲ್ಲಿ 4,016 ವಸತಿ ಗೃಹಗಳ ನಿರ್ಮಾಣ ಮಾಡಲು ಕ್ರಮಕೈಗೊಂಡಿರುವುದಾಗಿ ತಿಳಿಸಿದರು.

ಪೊಲೀಸರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ತ್ವರಿತ ಕ್ರಮಗಳನ್ನು ಕೈಗೊಂಡಿದೆ. ಪ್ರಜೆಗಳ ರಕ್ಷಣೆಯೇ ನಮ್ಮ ಸರ್ಕಾರದ ಪ್ರಮುಖ ಆದ್ಯತೆ ಎಂದರು.  ಕ್ರಮ ಜರುಗಿಸಲು ಅನುಮತಿ  ಜನಪರ, ಪಾರದರ್ಶಕ ಮತ್ತು ಪರಿಣಾಮಕಾರಿ ಆಡಳಿತ ನೀಡಲು ಸರ್ಕಾರ ಬದ್ಧವಾಗಿದೆ. ಭ್ರಷ್ಟಾಚಾರ ನಿಗ್ರಹ ಮತ್ತು ವಿಚಕ್ಷಣ ಸಿಬ್ಬಂದಿ ಬಲಪಡಿಸುವ ಸಂಬಂಧ ನಮ್ಮ ಸರ್ಕಾರ ಸ್ವಾಯತ್ತ ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪಿಸಿದೆ.  ಅತ್ಯಂತ ಕಡಿಮೆ ಅವಧಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳವು ಸ್ವೀಕರಿಸಿದ 3401 ಅರ್ಜಿಗಳ ಪೈಕಿ 2294ಅರ್ಜಿಗಳನ್ನು ವಿಲೇವಾರಿ ಮಾಡಿದೆ. 100 ಪತ್ತೆ ಮಾಡಿದ ಪ್ರಕರಣಗಳು, 37 ದಾಳಿ ಪ್ರಕರಣಗಳು ಹಾಗೂ 21 ಶೋಧನೆ ಮಾಡಿದ ಪ್ರಕರಣ ಸೇರಿದಂತೆ 153 ಪ್ರಕರಣಗಳನ್ನು ದಾಖಲು ಮಾಡಿಕೊಂಡಿದೆ.  ಎಲ್ಲಾ ಜಿಲ್ಲೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪ್ರತ್ಯೇಕ ಕಚೇರಿಗಳು, ಸಿಬ್ಬಂದಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲಾಗಿದೆ ಎಂದರು.  ಕಳೆದ ಒಂದು ವರ್ಷದ ಅವಧಿಯಲ್ಲಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಲು ಅನುಮತಿ ನೀಡಿರುವುದಾಗಿ ರಾಜ್ಯಪಾಲರು ತಮ್ಮ ಭಾಷಣದಲ್ಲಿ ವಿವರಿಸಿದರು.

…………….

* ಬೆಂಗಳೂರಿನಲ್ಲಿ ಒತ್ತುವರಿಯಾಗಿದ್ದ 4700 ಎಕರೆ ರಾಜ್ಯ ಸರ್ಕಾರ ವಶಕ್ಕೆ :

ಬೆಂಗಳೂರು, ಫೆ.6- ಬೆಂಗಳೂರಿನಲ್ಲಿ ಒತ್ತುವರಿಯಾಗಿದ್ದ 4700 ಎಕರೆಯನ್ನು ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ತಿಳಿಸಿದರು. ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಒತ್ತುವರಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ಜತೆಗೆ 22 ಹೊಸ ಕೌಟುಂಬಿಕ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. 21 ಲಕ್ಷ ಪ್ರಕರಣಗಳನ್ನು ಲೋಕ ಅದಾಲತ್‍ನಲ್ಲಿ ಇತ್ಯರ್ಥ ಪಡಿಸಲಾಗಿದೆ. 22 ಜಿಲ್ಲಾ ನ್ಯಾಯಾಧೀಶರು, 119 ಸಿವಿಲ್ ನ್ಯಾಯಾಧೀಶರನ್ನು ನೇಮಿಸಲಾಗಿದೆ ಎಂದರು.

ಉತ್ತಮ ಸಾರಿಗೆ ವ್ಯವಸ್ಥೆಗಾಗಿ ಕೆಎಸ್‍ಆರ್‍ಟಿಸಿ ಆರಂಭದಿಂದ ಈವರೆಗೂ 164, ಬಿಎಂಟಿಸಿ 100 ಪ್ರಶಸ್ತಿಗಳನ್ನು ಪಡೆದಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಶಸ್ತಿಗಳನ್ನು ನಮ್ಮ ಸಂಸ್ಥೆಗಳು ಪಡೆದುಕೊಂಡಿವೆ. ಮೂರು ವರ್ಷದಲ್ಲಿ 3533 ಹೊಸ ಬಸ್‍ಗಳನ್ನು ಸೇರ್ಪಡೆ ಮಾಡಲಾಗಿದ್ದು, 21 ಹೊಸ ಡಿಪೆÇೀ ಮತ್ತು ಹೊಸ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. 6262 ನೌಕರರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದರು.

…………….

 • ಕೌಶಲ್ಯ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ 4 ಪ್ರಾವೀಣ್ಯ ಕೇಂದ್ರಗಳ  ಸ್ಥಾಪನೆ :

ಬೆಂಗಳೂರು, ಫೆ.6-ಕೌಶಲ್ಯ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಸಿಮೆನ್ಸ್ ಕಂಪೆನಿಯ ಸಹಯೋಗದಲ್ಲಿ ರಾಜ್ಯದಲ್ಲಿ 4 ಪ್ರಾವೀಣ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯಪಾಲ ವಜುಬಾಯಿ ವಾಲಾ ಹೇಳಿದ್ದಾರೆ. ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು, ಕಲಬುರಗಿ, ದಾಂಡೇಲಿ ಮತ್ತು ಮೈಸೂರಿನಲ್ಲಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಉಪ ಕೇಂದ್ರಗಳಲ್ಲಿ 4 ಪ್ರಾವೀಣ್ಯತೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.

ಸಾರಥಿ, ಚಿಕ್ಕಹೊಸಹಳ್ಳಿ, ಮುತುಕದ ಹಳ್ಳಿ, ಉಳ್ಳಾರ್ತಿ ಕಾವಲ್, ಕುದಾಪುರ ಮತ್ತು ಹಿರೆಶಕುನಹಳ್ಳಿಗಳಲ್ಲಿ ಹೊಸ ಕೈಗಾರಿಕಾ ಎಸ್ಟೇಟ್‍ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದರು.
ರಾಜ್ಯ ಸರ್ಕಾರ ಕೈಗಾರಿಕಾ ಪ್ರೊತ್ಸಾಹ ನೀತಿಯಿಂದಾಗಿ ನವೋದ್ಯಮ ಸ್ಥಾಪನೆಯ ಪ್ರಮಾಣ ಶೇ.10ರಿಂದ 12ರಷ್ಟು ಹೆಚ್ಚಳವಾಗಿದೆ. ನಾಲ್ಕುಸಾವಿರ ನವೋದ್ಯಮಗಳಿಂದ ಎರಡು ವರ್ಷದಲ್ಲಿ ಒಂದು ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಯಾಗಿದೆ. 2016ರಲ್ಲಿ 1.49 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ನಿರೀಕ್ಷೆ ಇದೆ. ಏರೋ ಸ್ಪೇಸ್ ಕೈಗಾರಿಕೆಯ ಬಂಡವಾಳ ಹೂಡಿಕೆಗಾಗಿ ಹೊಸ ನೀತಿಯನ್ನು ಜಾರಿಗೆ ತರಲಾಗಿದೆ ಎಂದರು. ಇತ್ತೀಚಿಗೆ ನಡೆದ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ 7200 ಪ್ರತಿನಿಧಿಗಳು ಭಾಗವಹಿಸಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

…………….

 • ಹೆಚ್ಚು ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವುದು ಕರ್ನಾಟಕ ರಾಜ್ಯ :

ಬೆಂಗಳೂರು, ಫೆ.6- ಭಾರತೀಯ ರೈಲ್ವೆ ಸಹಭಾಗಿತ್ವದಲ್ಲಿ ಹೆಚ್ಚು ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವುದು ಕರ್ನಾಟಕ ರಾಜ್ಯ ಎಂದು ರಾಜ್ಯಪಾಲ ವಜುಬಾಯಿ ವಾಲಾ ಹೆಮ್ಮೆಯಿಂದ ಹೇಳಿಕೊಂಡರು. ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಶೇ.50ರ ವೆಚ್ಚ ಹಂಚಿಕೆ ಮತ್ತು ಉಚಿತ ಭೂಮಿ ನೀಡುವ ಮೂಲಕ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ರಾಮನಗರ-ಮೈಸೂರು, ಹಾಸನ-ಬೆಂಗಳೂರು, ಬೀದರ್-ಕಲಬುರಗಿ, ಬಾಗಲಕೋಟೆ-ಕುಡುಚಿ ವಿಭಾಗದ ಬಾಗಲಕೋಟೆ-ಕಜ್ಜಿದೋಣಿ ಸುರಂಗ ಮಾರ್ಗಗಳು ಮತ್ತು ಯಾದಗಿರಿ ರೈಲ್ವೆ ಭೋಗಿ ಕಾರ್ಖಾನೆ ಯೋಜನೆ ಈ ವರ್ಷ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.

ರಸ್ತೆ ಸಂಪರ್ಕ ವಿಸ್ತರಣೆಗೂ ಹೆಚ್ಚು ಒತ್ತು ನೀಡಲಾಗಿದ್ದು, ಕಳೆದ 3 ವರ್ಷಗಳಲ್ಲಿ 8927 ಕಿ.ಮೀ. ರಾಜ್ಯ ಹೆದ್ದಾರಿ, 17,163 ಜಿಲ್ಲಾ ಪ್ರಮುಖ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ವರ್ಷ 717ಕಿ.ಮೀ. ರಾಜ್ಯ ಹೆದ್ದಾರಿ, 3570 ಕಿ.ಮೀ. ಜಿಲ್ಲಾ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ವಿವರಿಸಿದರು. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಮೂರನೇ ಹಂತದಲ್ಲಿ 2795 ಕಿ.ಮೀ. ರಾಜ್ಯ ಹೆದ್ದಾರಿ, 1520ಕಿ.ಮೀ. ಜಿಲ್ಲಾ ಹೆದ್ದಾರಿಯನ್ನು, 3500ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ರನ್ವೆ, ಎರಡನೇ ಟರ್ಮಿನಲ್ ಕಟ್ಟಡ ನಿರ್ಮಾಣ ಮೊದಲ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಬೆಳಗಾವಿ ಮತ್ತು ಹುಬ್ಬಳ್ಳಿಯ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯಪಾಲರು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin