ವಿಧಾನಸಭಾ ಚುನಾವಣೆಗಿಳಿಯುವ ಬಿಜೆಪಿ ಹಾಲಿ ಸಂಸದರ ಆಸೆಗೆ ತಣ್ಣೀರೆರಚಿದ ಹೈಕಮಾಂಡ್..!

BJP-MP-S--01

ಬೆಂಗಳೂರು, ಜ.20-ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿಯಲು ಮುಂದಾಗಿದ್ದ ಬಿಜೆಪಿಯ ಹಾಲಿ ಸಂಸದರ ಆಸೆಗೆ ಹೈಕಮಾಂಡ್ ತಣ್ಣೀರೆರೆಚಿದೆ.  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊರತುಪಡಿಸಿ ಯಾವುದೇ ಸಂಸದರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸದೆ, ಪಕ್ಷದ ಗೆಲುವಿಗೆ ಎಲ್ಲರೂ ಶ್ರಮಿಸಬೇಕೆಂದು ಹುಕುಂ ಹೊರಡಿಸಲಾಗಿದೆ.  ಹೈಕಮಾಂಡ್‍ನ ಈ ಆದೇಶದಿಂದಾಗಿ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದ ಸುಮಾರು 10ಕ್ಕೂ ಹೆಚ್ಚು ಸಂಸದರಿಗೆ ನಿರಾಸೆಯಾಗಿದೆ.

ಏಪ್ರಿಲ್ ಅಥವಾ ಮಾರ್ಚ್‍ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಮಾತ್ರ ಸ್ಪರ್ಧಿಸುವುದನ್ನು ಬಿಟ್ಟರೆ ಯಾವುದೇ ಸಂಸದರು ವಿಧಾನಸಭೆಗೆ ಸ್ಪರ್ಧೆ ಮಾಡದೆ ಪ್ರತಿಯೊಬ್ಬರು ಎರಡೆರಡು ಕ್ಷೇತ್ರಗಳನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕೆಂದು ಸೂಚಿಸಲಾಗಿದೆ. ಕೇಂದ್ರದಲ್ಲಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕೆಲವರು ಸ್ಥಾನ ಸಿಗದೆ ನಿರಾಸೆಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈವರೆಗೂ ಎರಡು ಬಾರಿ ಸಂಪುಟ ಪುನಾರಚನೆ ಮಾಡಿದ್ದಾರೆ. ರಾಜ್ಯದಿಂದ ಕೆಲವರನ್ನು ಸಂಪುಟಕ್ಕೆ ತೆಗೆದುಕೊಳ್ಳಬಹುದೆಂಬ ನಿರೀಕ್ಷೆಯಿತ್ತು.  ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಸಂಪುಟಕ್ಕೆ ಸೇರ್ಪಡೆಯಾದಾಗ ಬಹುತೇಕರು ಒಳಗೊಳಗೆ ಕುದಿಯತೊಡಗಿದರು.

ಕೇಂದ್ರ ಸರ್ಕಾರದ ಅವಧಿ ಇನ್ನು ಒಂದೂವರೆ ವರ್ಷ ಇದ್ದರೂ ಸದ್ಯಕ್ಕೆ ಸಂಪುಟಕ್ಕೆ ರಾಜ್ಯದಿಂದ ಯಾರೊಬ್ಬರೂ ಸೇರ್ಪಡೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಯಾವಾಗ ಸಂಪುಟಕ್ಕೆ ಮೋದಿ ತಮ್ಮನ್ನು ತೆಗೆದುಕೊಳ್ಳುವುದಿಲ್ಲ ಎಂಬುದು ಖಾತರಿಯಾಯಿತೊ ಕೆಲವು ಸಂಸದರು ವಿಧಾನಸಭೆ ಚುನಾವಣೆ ಮೇಲೂ ಕಣ್ಣಿಟ್ಟಿದ್ದರು. ಈ ಹಿಂದೆ 2008 ಹಾಗೂ 2013ರಲ್ಲಿ ಹಾಲಿ ಸಂಸದರು ಸ್ಪರ್ಧಿಸಿದ್ದರು. ಕೆಲವರಿಗೆ ಅದೃಷ್ಟ ಕೈ ಹಿಡಿದರೆ, ಉಳಿದವರಿಗೆ ಕೈ ಕೊಟ್ಟಿತ್ತು. 2008ರ ಚುನಾವಣೆಯಲ್ಲಿ ಬಳ್ಳಾರಿ ಸಂಸದರಾಗಿದ್ದ ಕರುಣಾಕರ ರೆಡ್ಡಿ ಹರಪನಹಳ್ಳಿಯಿಂದ ಸ್ಪರ್ಧಿಸಿ ವಿಜೇತರಾಗಿ ಸಚಿವರೂ ಆದರು. 2013ರಲ್ಲಿ ಪಿ.ಸಿ.ಮೋಹನ್ ಗಾಂಧಿನಗರದಿಂದ ಸ್ಪರ್ಧಿಸಿದರಾದರೂ ವಿಜಯಲಕ್ಷ್ಮಿ ಮಾತ್ರ ಒಲಿಯಲಿಲ್ಲ. ಇದೀಗ ಒಂದು ಡಜನ್ ಸಂಸದರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಹೈಕಮಾಂಡ್ ಮಾತ್ರ ಇದಕ್ಕೆ ಬ್ರೇಕ್ ಹಾಕಿದೆ.

ಯಾರ್ಯಾರು:

ಬೆಳಗಾವಿ ಸಂಸದ ಸುರೇಶ್ ಅಂಗಡಿ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಹುಣಸೂರಿನಿಂದ ಚಿಕ್ಕಮಗಳೂರು-ಉಡುಪಿಯ ಶೋಭಾ ಕರಂದ್ಲಾಜೆ ಬೆಂಗಳೂರು ಸೆಂಟ್ರಲ್, ಸಂಸದ ಪಿ.ಸಿ.ಮೋಹನ್ ಗಾಂಧಿನಗರ, ಬಳ್ಳಾರಿಯ ಶ್ರೀರಾಮುಲು ಬಳ್ಳಾರಿ ಗ್ರಾಮೀಣ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್, ಬಾಗಲಕೋಟೆಯ ಪಿ.ಸಿ.ಗದ್ದಿಗೌಡರ್ ಬಾದಾಮಿ ಸೇರಿದಂತೆ ಮತ್ತಿತರರು ಸ್ಪರ್ಧಿಸಲು ಸಜ್ಜಾಗಿದ್ದರು.

ಈಗಾಗಲೇ ಕ್ಷೇತ್ರದಲ್ಲಿ ತಾವೇ ಮುಂದಿನ ಅಭ್ಯರ್ಥಿಗಳೆಂದು ಮತದಾರರ ಓಲೈಕೆಗೆ ಮುಂದಾಗಿದ್ದರು. ಕೇಂದ್ರ ಬಿಜೆಪಿ ವರಿಷ್ಠರು ಮಾತ್ರ ಸಂಸದರ ಸ್ಪರ್ಧೆಗೆ ಒಪ್ಪುತ್ತಿಲ್ಲ. ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡುವ ಅಗತ್ಯವಿರುವುದರಿಂದ ಸಂಸದರು ನಿಮ್ಮ ನಿಮ್ಮ ಕ್ಷೇತ್ರ ವ್ಯಾಪ್ತಿಯ ಎರಡು ಕ್ಷೇತ್ರಗಳನ್ನು ಗೆಲ್ಲಿಸಲು ಮುಂದಾಗುವಂತೆ ಸೂಚಿಸಿದ್ದಾರೆ. ಯಡಿಯೂರಪ್ಪ ಮಾತ್ರವೇ ಸ್ಪರ್ಧಿಸಲು ಹಸಿರು ನಿಶಾನೆ ತೋರಿದೆ.

Sri Raghav

Admin