ವಿಧಾನಸೌಧದಲ್ಲಿ ವಾಟಾಳ್ ಧರಣಿ

Vatal-NAgaraj--01

ಬೆಂಗಳೂರು,ಮಾ.30- ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ನಿಯಂತ್ರಣ ಹಾಗೂ ಅಧ್ಯಯನಕ್ಕೆ ಸಂಬಂಧಿಸಿದಂತೆ ರಚಿಸಿರುವ ಜಂಟಿ ಸದನ ಸಮಿತಿ ವಿರೋಧಿಸಿ ವಿಧಾನಸೌಧದಲ್ಲಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೂ ಮುನ್ನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರನ್ನು ಭೇಟಿ ಮಾಡಿ ಸದನ ಸಮಿತಿ ವಾಪಸ್ ಪಡೆಯುವಂತೆ ಮನವಿ ಮಾಡಿದರು. ಇದಕ್ಕೆ ಸಭಾಧ್ಯಕ್ಷರು ಒಪ್ಪದಿದ್ದಾಗ ಕಪ್ಪುಬಟ್ಟೆ ಪ್ರದರ್ಶಿಸಿ ಕೆಲ ಕಾಲ ಧರಣಿ ನಡೆಸಿದರು.

ಧರಣಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ. ಮಾಧ್ಯಮಗಳನ್ನು ನಿಯಂತ್ರಿಸುವುದರಿಂದ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದ್ದು , ಕೂಡಲೇ ಸದನ ಸಮಿತಿಯನ್ನು ಸಭಾಧ್ಯಕ್ಷರು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.   ಆರೋಗ್ಯ ಸಚಿವ ಕೆ.ಆರ್.ರಮೇಶ್‍ಕುಮಾರ್ ಸದನ ಸಮಿತಿಯ ಅಧ್ಯಕ್ಷರಾಗಲು ಒಪ್ಪಿಕೊಂಡಿದ್ದಾರೆ. ಇದನ್ನು ಅವರು ಕೈಬಿಡಬೇಕು. ವಿಧಾನಸಭೆ ಇತಿಹಾಸದಲ್ಲೇ ಇಂತಹ ಘಟನೆ ನಡೆದಿಲ್ಲ. ಸದನದಲ್ಲಿ ಶಾಸಕರ ಹಾಜರಾತಿ ಕೊರತೆ ಇದ್ದ ವೇಳೆ ಅವರ ನಿದ್ರೆ , ಆಕಳಿಸುವ ದೃಶ್ಯಗಳನ್ನು ಮಾಧ್ಯಮಗಳು ತೋರಿಸುವುದರಲ್ಲಿ ತಪ್ಪೇನಿಲ್ಲ. ಹಾಗಾಗಿ ಮಾಧ್ಯಮಗಳ ವಿರುದ್ಧ ತೆಗೆದುಕೊಳ್ಳುತ್ತಿರುವ ಇಂತಹ ಕ್ರಮ ಅಪಾಯಕಾರಿ ಬೆಳವಣಿಗೆ ಎಂದು ವಾಟಾಳ್ ವಿಷಾದ ವ್ಯಕ್ತಪಡಿಸಿದರು.

ನಿರಾಕರಣೆ:

ಮಾಧ್ಯಮಗಳ ನಿಯಂತ್ರಣ ಹಾಗೂ ಅಧ್ಯಯನ ಮಾಡಲು ರಚಿಸಿರುವ ಜಂಟಿ ಸದನ ಸಮಿತಿ ಹಿಂದಕ್ಕೆ ಪಡೆಯುವುದಿಲ್ಲ ಎಂದು ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು.  ಸದನದಲ್ಲಿ ತೀರ್ಮಾನಿಸಿರುವ ಜಂಟಿ ಸಮಿತಿ ರಚನೆಯ ನಿರ್ಧಾರವನ್ನು ಕೈ ಬಿಡುವಂತಿಲ್ಲ. ಮಾಧ್ಯಮಗಳ ಸ್ವಾತಂತ್ರವನ್ನು ಕಸಿಯುವ ಯಾವುದೇ ಪ್ರಯತ್ನವಿಲ್ಲ ಹಾಗೂ ಮಾಧ್ಯಮಗಳ ನಿಯಂತ್ರಿಸುವ ಉದ್ದೇಶವೂ ಇಲ್ಲ. ಮಾಧ್ಯಮಗಳ ಗುಣಮಟ್ಟ ಹಾಗೂ ಅಧ್ಯಯನ ಮಾಡುವ ಸಲುವಾಗಿ ಸಮಿತಿ ರಚಿಸಲಾಗಿದೆ ಎಂದರು.  ನಿಯಮ 69ರಡಿ ಹಲವು ಶಾಸಕರು ಪಕ್ಷಾತೀತವಾಗಿ ಮಾತನಾಡಿ ಮಾಧ್ಯಮಗಳ ಗುಣಮಟ್ಟ ಕೆಳಮಟ್ಟಕ್ಕೆ ಹೋಗಬಾರದು. ಹಾಗಾಗಿ ಸದನ ಸಮಿತಿ ರಚಿಸಲಾಗಿದೆ ಎಂದು ಕೆ.ಬಿ.ಕೋಳಿವಾಡ ಸ್ಪಷ್ಟಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin