ವಿಧಾನಸೌಧದ ಬಳಿಯೇ ಕಾರಿನಲ್ಲಿ ಸಾಗಿಸುತ್ತಿದ್ದ 2.5 ಕೋಟಿ ರೂ. ಹಣ ಜಪ್ತಿ
ಬೆಂಗಳೂರು,ಅ.21- ಧಾರವಾಡ ಮೂಲದ ವಕೀಲ ಸಿದ್ದಾರ್ಥ ಎಂಬುವವರ ಕಾರಿನಲ್ಲಿ 2.5 ಕೋಟಿ ರೂಪಾಯಿ ಸಾಗಿಸುವ ವೇಳೆ ವಿಧಾನಸೌಧದ ಭದ್ರತಾ ಸಿಬ್ಬಂಧಿಗಳ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ. ಯಶವಂತಪುರ ಕೆಎ 04 ಎಮ್ಎಮ್ 9018 ಸಂಖ್ಯೆಯ ಬಿಳಿ ಬಣ್ಣದ ವೋಲ್ಸ್ ವ್ಯಾಗನ್ ಕಾರಿನಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಸಿಕ್ಕಿದೆ. ವಿಧಾನಸೌಧಕ್ಕೆ ಬಂದಿದ್ದ ಸಿದ್ದಾರ್ಥ ಅವರು ಸಚಿವರೊಬ್ಬರಿಗೆ ಇದನ್ನು ನೀಡಲು ತಂದಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆ ಭಾರಿ ಕುತೂಹಲ ಕೆರಳಿಸಿದ್ದು ಸಿದ್ದಾರ್ಥ ಅವರನ್ನು ವಶಕ್ಕೆ ಪಡೆದು ಡಿಸಿಪಿ ಅವರು ತನಿಖೆ ನಡೆಸುತ್ತಿದ್ದಾರೆ.
ಸಿದ್ಧಾರ್ಥ್ ಸಿಕ್ಕಿ ಹಾಕಿಕೊಂಡಿದ್ದು ಹೇಗೆ ..?
ವಿಧಾನಸೌಧದ ಗೇಟ್ ಬಳಿ ಬಂದ ಸಿದ್ಧಾರ್ಥ್ ಅವರ ಕಾರಿನಲ್ಲಿ ಬ್ಯಾಗ್’ವೊಂದು ಕಂಡು ಬಂದಿದೆ. ಅದರಲ್ಲಿ ಏನಿದೆ ಎಂದು ಕೇಳಿದಾಗ ಸಿದ್ಧಾರ್ಥ್ ಉತ್ತರಿಸಲು ತಡಬಡಾಯಿಸಿದ್ದಾರೆ. ಆಗ ತಪಾಸಣೆ ನಡೆಸಿದಾಗ ಬ್ಯಾಗ್’ನಲ್ಲಿ 2.5 ಕೋಟಿ ನಗದು ಹಣ ಪತ್ತೆಯಾಗಿದೆ. ಕೂಡಲೇ ಸಿದ್ಧಾರ್ಥ್ ಮತ್ತು ಆ ಹಣವನ್ನು ವಶಕ್ಕೆ ಪಡೆಯಲಾಗಿದೆ. ವಿಧಾನಸೌಧದಲ್ಲಿ ಕ್ಯಾಷ್ ವಹಿವಾಟು ಮಾಡುವಂತಿಲ್ಲ.. ವಿಧಾನಸೌಧದಲ್ಲಿ ಹಣದ ವ್ಯವಹಾರ ಯಾವತ್ತೂ ಕ್ಯಾಷ್’ನಲ್ಲಿ ಇರುವುದಿಲ್ಲ. ಇಲ್ಲೇನಿದ್ದರೂ ಚೆಕ್ ಮೂಲಕ ಹಣದ ವಹಿವಾಟು ನಡೆಯುವುದು. ಅಷ್ಟೇ ಅಲ್ಲ, ವಿಧಾನಸೌಧದ ಬಹುತೇಕ ಕಾರ್ಯಚಟುವಟಿಕೆ ಆಡಳಿತಾತ್ಮಕವಾಗಿ ಇರುತ್ತದೆ. ಇಲ್ಲಿ ಹಣದ ವಹಿವಾಟಿನ ಪ್ರಮೇಯವೇ ಇರುವುದಿಲ್ಲ. ಹೀಗಿದ್ದರೂ ಇಲ್ಲಿ ಕ್ಯಾಷ್ ಹಣ ಸಾಗಿಹೋಗುತ್ತಿರುವುದು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ.