ವಿಧಾನಸೌಧದ ಸುತ್ತಮುತ್ತ 2ಕಿಮೀ ವರೆಗೂ 144 ಸೆಕ್ಷನ್ ಜಾರಿ

Vidhanasoudha--01

ಬೆಂಗಳೂರು, ಮೇ 19-ಬಿಜೆಪಿ ವಿಶ್ವಾಸ ಮತ ಯಾಚನೆ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಇಂದು ಪೊಲೀಸ್ ಸರ್ಪಗಾವಲು. ಇತಿಹಾಸದಲ್ಲೇ ಕಂಡು ಕೇಳರಿಯದ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಸುಮಾರು 6 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ವಿಧಾನಸೌಧದ ಸುತ್ತ ಹಾಗೂ 2 ಕಿ.ಮೀ.ವರೆಗೆ 144 ಸೆಕ್ಷನ್ ಜಾರಿ ಮಾಡಿ ಯಾವುದೇ ರೀತಿಯ ಪ್ರತಿಭಟನೆ ನಡೆಯದಂತೆ ನಿರ್ಬಂಧ ಹಾಕಲಾಗಿದೆ.

ಪ್ರಮುಖವಾಗಿ ಚಾಲುಕ್ಯ ವೃತ್ತ, ಕೆ.ಆರ್.ವೃತ್ತ, ರಾಜಭವನ, ವಿಕಾಸಸೌಧ, ಹೈಕೋರ್ಟ್ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಪ್ಯಾರಾಮಿಲಿಟರಿ, ಆರ್‍ಎಫ್, ಕೆಎಸ್‍ಆರ್‍ಪಿ, ಶ್ವಾನದಳವನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ವಿಧಾನಸೌಧದ ಐದೂ ಗೇಟ್‍ಗಳಲ್ಲಿ 100 ರಿಂದ 200 ಪೊಲೀಸರನ್ನು ನಿಯೋಜಿಸಲಾಗಿದೆ. ಒಬ್ಬರು ಇನ್ಸ್‍ಪೆಕ್ಟರ್, ಮೂವರು ಸಬ್‍ಇನ್ಸ್‍ಪೆಕ್ಟರ್‍ಗಳನ್ನು ಹಾಕಲಾಗಿದೆ.  ವಿಧಾನಸೌಧದ ಒಳಗಡೆ ಇರುವ ಗೇಟ್‍ಗಳಲ್ಲೂ ಅಷ್ಟೇ ಪೊಲೀಸರನ್ನು ನಿಯೋಜಿಸಲಾಗಿದೆ. ಎಂಎಲ್‍ಎಗಳು ಪ್ರವೇಶಿಸುವ ಪಶ್ಚಿಮ ದ್ವಾರ ಕೆಂಗಲ್ ಪ್ರತಿಮೆ ಬಳಿ ಇಬ್ಬರು ಡಿಸಿಪಿಗಳೇ ಭದ್ರತಾ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ.

ಪತ್ರಕರ್ತರು, ಅಧಿಕಾರಿಗಳಿಗೆ ಪೂರ್ವ ದ್ವಾರದಲ್ಲಿ ಪ್ರವೇಶ ಕಲ್ಪಿಸಲಾಗಿದೆ. ವಿಧಾನಸೌಧದೊಳಗಿನ ಪಾರ್ಕಿಂಗ್ ವ್ಯವಸ್ಥೆಗೆ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ. ಹೆಚ್ಚಿನ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.   ಕೆಲವರು ಬೆಳಗ್ಗೆ 8 ಗಂಟೆಗೆ ವಿಧಾನಸೌಧದೊಳಗೆ ನುಸುಳಿದ್ದು, ಅವರನ್ನು ಹೊರಗಡೆ ಕಳುಹಿಸಲಾಗುತ್ತಿದೆ.ಮಫ್ತಿಯಲ್ಲಿ ನೂರಾರು ಜನರನ್ನು ನಿಯೋಜನೆ ಮಾಡಲಾಗಿದೆ. ಗಲಾಟೆ, ಗದ್ದಲವಿರಲಿ ಮಿಸುಕಾಡಲೂ ಆಗದಂತೆ ಪೊಲೀಸ್ ಭದ್ರತೆಯನ್ನು ಮಾಡಲಾಗಿದೆ. ಭದ್ರತಾ ಉಸ್ತುವಾರಿಯನ್ನು ಖುದ್ದು ಡಿಜಿ ನೀಲಮಣಿ ಎನ್.ರಾಜು, ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ, ಡಿಸಿಪಿಗಳು ವಹಿಸಿದ್ದರು.

ಹೈಕೋರ್ಟ್ ಕಡೆಯಿಂದ ವಿಧಾನಸೌಧಕ್ಕೆ ಆಗಮಿಸುವ ಹಾಗೂ ಎಂ.ಎಸ್.ಬಿಲ್ಡಿಂಗ್ ಶಾಸಕರ ಭವನದಿಂದ ಬರುವ ಎಲ್ಲರನ್ನು ಹಾಗೂ ವಾಹನಗಳನ್ನು ತಪಾಸಣೆ ಮಾಡಿಯೇ ವಿಧಾನಸೌಧದೊಳಗೆ ಕಳುಹಿಸುತ್ತಿದ್ದುದು ಕಂಡುಬಂತು. ಇಂದು ವಿಧಾನಸೌಧದ ಸಿಬ್ಬಂದಿಗೂ ಸಹ ಗುರುತಿನ ಚೀಟಿ ಕಡ್ಡಾಯವಾಗಿತ್ತು. ಮಾಜಿ ಶಾಸಕರಿಗೆ ವಿಧಾನಸೌಧಕ್ಕೆ ಪ್ರವೇಶವಿರಲಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಯಲ್ಲಿ ಇರಬೇಕೆಂದು ಸೂಚಿಸಲಾಗಿತ್ತು. ಒಟ್ಟಾರೆ ಕಟ್ಟುನಿಟ್ಟಿನ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಮುನ್ನೆಚ್ಚರಿಕೆಯಾಗಿ ಅಗ್ನಿಶಾಮಕದಳದ ವ್ಯವಸ್ಥೆ ಮಾಡಲಾಗಿತ್ತು.

 

Sri Raghav

Admin