ವಿವಾದಾತ್ಮಕ ಹೇಳಿಕೆ ನೀಡಿದ ಭಾರತೀಯ ಇಮಾಮ್ಗೆ 4,000 ಡಾಲರ್ ದಂಡ, ಗಡಿಪಾರು
ಸಿಂಗಪುರ್, ಏ.4 – ಉಪನ್ಯಾಸವೊಂದರ ವೇಳೆ ಹಿಂದು, ಯಹೂದಿಗಳು ಮತ್ತು ಕ್ರೈಸ್ತರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಭಾರತೀಯ ಇಮಾಮ್ ಒಬ್ಬರಿಗೆ ಸಿಂಗಪುರ್ ನ್ಯಾಯಾಲಯವೊಂದು 4,000 ಡಾಲರ್ (1.86 ಲಕ್ಷ ರೂ.) ದಂಡ ವಿಧಿಸಿ, ಅವರನ್ನು ಗಡಿಪಾರು ಮಾಡಲು ಆದೇಶಿಸಿದೆ. ಜಾಮಿಯಾ ಚುಲಿಯಾ ಮಸೀದಿಯಲ್ಲಿ ಮುಖ್ಯ ಇಮಾಮ್ ಆಗಿರುವ ನಲ್ಲಾ ಮಹಮದ್ ಅಬ್ದುಲ್ ಜಮೀಲ್ ಇದಕ್ಕೂ ಮುನ್ನ ತಮ್ಮ ಹೇಳಿಕೆಗಾಗಿ ಸಮುದಾಯದ ಮುಖಂಡರಲ್ಲಿ ಕ್ಷಮೆ ಕೋರಿದ್ದರು. ಕೈಸ್ತ, ಸಿಖ್, ತಾವೋವಾದಿ, ಬೌದ್ಧ ಮತ್ತು ಹಿಂದು ಪ್ರತಿನಿಧಿಗಳು ಮತ್ತು ಫೆಡರೇಷನ್ ಆಫ್ ಇಂಡಿಯನ್ ಮುಸ್ಲಿಂ ಸದಸ್ಯರ ಸಮ್ಮುಖದಲ್ಲಿ ಕ್ಷಮೆ ಯಾಚಿಸಿದ್ದ ಅವರು, ತಮ್ಮ ಹೇಳಿಕೆಗಳಿಂದ ಉಂಟಾಗಿರುವ ಪ್ರಕ್ಷುಬ್ದತೆ, ಭಾವನೆಗಳಿಗೆ ಧಕ್ಕೆ ಮತ್ತು ತೊಂದರೆಗಾಗಿ ಪಶ್ಚಾತ್ತಾಪ ಪಡುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದರು.
ಇಮಾಮ್ ಜಮೀಲ್ ದಂಡ ಪಾವತಿಸಿದ್ದಾರೆ ಹಾಗೂ ಅವರನ್ನು ಗಡಿಪಾರು ಮಾಡಲಾಗುವುದು ಎಂದು ಸಿಂಗಪುರ್ ಗೃಹ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ. ವಿವಿಧ ಗುಂಪುಗಳ ನಡುವೆ ಧರ್ಮ ಮತ್ತು ಜನಾಂಗಗಳ ಆಧಾರದಲ್ಲಿ ವೈರತ್ವವನ್ನು ಪ್ರಚೋದಿಸಿರುವ ಆರೋಪವನ್ನು ಅವರು ಒಪ್ಪಿಕೊಂಡಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >