ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Spread the love

hanuru

ಹನೂರು, ಅ.25- ಸತತವಾಗಿ ಒಂದು ವಾರದಿಂದ ಪದೇ ಪದೇ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಸೆಸ್ಕಾಂ ಅಧಿಕಾರಿ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪಟ್ಟಣದ ಸೆಸ್ಕಂ ಕಛೇರಿ ಮುಂಭಾಗ ಪ್ರತಿಭಟಿಸಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ದ ಧಿಕ್ಕಾರ ಕೂಗಿದರು.ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿರುವ ಪಟ್ಟಣದ ಸೆಸ್ಕಂ ಕಛೇರಿ ಮುಂಭಾಗ ಜಮಾವಣೆಗೊಂಡ ರೈತ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ರೈತ ಮುಖಂಡ ಮಂಜುನಾಥ ಮಾತಾಡಿ ಹನೂರು ಸುತ್ತಮುತ್ತಲಿನ ಗ್ರಾಮಗಳಿಗೆ ಒಂದು ವಾರದಿಂದ ಯಾವುದೇ ಮುನ್ಸೂಚನೆ ನೀಡದೆ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದು , ದನಕರುಗಳಿಗೂ, ನಮಗೂ ನೀರಿಲ್ಲದೆ ತುಂಬಾ ತೊಂದರೆಯಾಗಿರುತ್ತದೆ. ಮತ್ತು ಕರೆಂಟ್ ಇಲ್ಲದೆ ರಾತ್ರಿ ವೇಳೆ ಭಯಭೀತಿಯಿಂದ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತಾನಾಡಿ ಸೆಸ್ಕಂ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಬೇಕು. ಜನಪ್ರತಿನಿಧಿಗಳು ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಬೇಕು.

ಎರಡು ವರ್ಷದ ಬರಪರಿಹಾರದ ಹಣವನ್ನು ಶೀಘ್ರವಾಗಿ ಜನರಿಗೆ ತಲುಪುವಂತಾಗಬೇಕು. ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆಗಳು ಸಂಪೂರ್ಣವಾಗಿ ಕೈಕೊಟ್ಟಿದ್ದು ಹಾಕಿದ ಫಸಲು ನಾಶವಾಗಿದೆ.ನಗರಗಳಿಗೆ ಗೂಳ್ಯ ವಲಸೆ ಹೋಗುವುದನ್ನು ತಪ್ಪಿಸಬೇಕು. ಮತ್ತು ಹನೂರು ಭಾಗದಲ್ಲಿ ಅಂತರ್ಜಲ ತಳಮಟ್ಟಕ್ಕೆ ಕುಸಿದಿದ್ದು ಕರೆಕಟ್ಟೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಬೇಕು. ಇಲ್ಲದಿದ್ದರೆ ನ.22ರಂದು ಜಿಲ್ಲೆಯ ನಾಲ್ಕು ಶಾಸಕರ ಮನೆ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಂಧರ್ಭದಲ್ಲಿ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಹೊನ್ನೂರು ಬಸವಣ್ಣ, ಹಸಿರು ಸೇನೆ ಅಧ್ಯಕ್ಷ ಮಂಜುನಾಥ ಚಿಂಗಡಿ ಗ್ರಾಮದ ಕರಿಯಪ್ಪ ಗುಂಡೇಗಾಲದ ಪಾಪಣ್ಣ , ಮಾದೇಶ , ಮಹದೇವಸ್ವಾಮಿ, ಶಿವಕುಮಾರ್ ಇತರರು ಇದ್ದರು.

► Follow us on –  Facebook / Twitter  / Google+

Facebook Comments

Sri Raghav

Admin