ವಿಶ್ವಸಂಸ್ಥೆಯಲ್ಲಿ ಸುಷ್ಮಾ ಭಾಷಣ : ಪಾಕ್ ವಿರುದ್ಧ ವಾಗ್ದಾಳಿಗೆ ಸಜ್ಜು

ನ್ಯೂಯಾರ್ಕ್, ಸೆ.25-ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ನಾಳೆ ವಿಶ್ವಸಂಸ್ಥೆಯ 71ನೇ ಸಾಮಾನ್ಯ ಮಹಾಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದು, ಭಾರತವನ್ನು ಟೀಕಿಸಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ಗೆ ದಿಟ್ಟ ಪ್ರತ್ಯುತ್ತರ ನೀಡುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಅವರ ಭಾಷಣದ ಮೇಲೆ ಎಲ್ಲರ ಕಣ್ಣುಗಳು ಮತ್ತು ಕಿವಿಗಳು ನೆಟ್ಟಿವೆ. ನ್ಯೂಯಾರ್ಕ್ಗೆ ನಿನ್ನೆ ಮಧ್ಯಾಹ್ನ ಆಗಮಿಸಿರುವ ಅವರು ನಾಳೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
ವಿಶ್ವಸಂಸ್ಥೆಯ 71ನೇ ಸಾಮಾನ್ಯ ಮಹಾಧಿವೇಶನಕ್ಕೆ ಭಾರತದ ನಿಯೋಗದ ನೇತೃತ್ವ ವಹಿಸಿರುವ ಸುಷ್ಮಾ ಸ್ವರಾಜ್ ನ್ಯೂಯಾರ್ಕ್ನಲ್ಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ. ಕಾಶ್ಮೀರ ವಿಷಯವನ್ನು ಅನಗತ್ಯವಾಗಿ ಪ್ರಸ್ತಾಪಿಸಿ ಈಗಾಗಲೇ ಭಾರಿ ಮುಖಭಂಗಕ್ಕೆ ಒಳಗಾಗಿರುವ ಪಾಕ್ ಪ್ರಧಾನಿ ಮೇಲೆ ಮತ್ತೊಮ್ಮ ವಾಕ್ ಪ್ರಹಾರ ನಡೆಸಲು ಸುಷ್ಮಾ ಈ ಅಂತಾರಾಷ್ಟ್ರೀಯ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳಲಿದ್ದಾರೆ. ಆ ಮೂಲಕ ಮತ್ತೊಮ್ಮೆ ಪಾಕಿಸ್ತಾನ ನಿಜ ಬಣ್ಣವನ್ನು ಜಗಜ್ಜಾಹೀರು ಮಾಡಲಿದ್ದಾರೆ.
ಕಾಶ್ಮೀರದ ಉರಿ ಭಯೋತ್ಪಾದಕ ದಾಳಿ ನಂತರ ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಏಷ್ಯಾದ ರಾಷ್ಟ್ರಗಳಿಂದಲೂ ತೀವ್ರ ಟೀಕೆಗೆ ಒಳಗಾಗಿ ಬಹುತೇಕ ಮೂಲೆಗುಂಪಾಗಿರುವ ಪಾಕಿಸ್ತಾನಕ್ಕೆ ಮತ್ತೊಮ್ಮೆ ಬಿಸಿ ಮುಟ್ಟಿಸಲು ಭಾರತ ಸನ್ನದ್ಧವಾಗಿದೆ.
► Follow us on – Facebook / Twitter / Google+