ವಿಶ್ವಾಸ ಗೆದ್ದ ಪಳನಿ, ಸಿಎಂ ಕುರ್ಚಿ ಭದ್ರ, ಮುಗಿಯಿತು ಹೈಡ್ರಾಮಾ

Palanisamy

ಚೆನ್ನೈ, ಫೆ.18-ಹಲವು ನಾಟಕೀಯ ಬೆಳವಣಿಗೆಗಳನ್ನು ಕಂಡ ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಬಹುಮತ ಸಾಬೀತು ಪಡಿಸುವ ಮೂಲಕ ಅಗ್ನಿಪರೀಕ್ಷೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಧ್ವನಿ ಮತದ ಮೂಲಕ ನಡೆದ ವಿಶ್ವಾಸ ಮತ ಯಾಚನೆಯಲ್ಲಿ ಪಳನಿ ಸ್ವಾಮಿ ಪರ 122 ಮತಗಳು ಬಂದರೆ ವಿರುದ್ಧವಾಗಿ 11 ಮತಗಳು ಚಲಾಯಿಸಿದ್ದವು.  ಡಿಎಂಕೆ 89 ಮಂದಿ ಶಾಸಕರನ್ನು ಅನುಚಿತ ವರ್ತನೆಯ ಆರೋಪದ ಮೇಲೆ ಸದನದಿಂದ ಹೊರ ಹಾಕಿದರೆ ಕಾಂಗ್ರೆಸ್‍ನ 8 ಮಂದಿ ಶಾಸಕರು ಸಭಾತ್ಯಾಗ ಮಾಡಿದರು.
ವಿಧಾನಸಭೆಯ 234 ಮಂದಿ ಸದಸ್ಯರಲ್ಲಿ ಡಿಎಂಕೆಯ ಓರ್ವ, ಎಐಎಡಿಎಂಕೆಯ ಇಬ್ಬರು ಶಾಸಕರು ಗೈರು ಹಾಜರಾಗಿದ್ದರು. ಡಿಎಂಕೆಯ 89 ಶಾಸಕರು ಉಚ್ಛಾಟನೆಗೊಂಡ ಹಿನ್ನೆಲೆಯಲ್ಲಿ ಪನ್ನೀರ್ ಸೆಲ್ವಂಗೆ ಬಹುಮತ ಸಾಬೀತುಪಡಿಸುವ ಹಾದಿ ಸುಗಮವಾಯಿತು.

3 ಗಂಟೆ ನಂತರ ಮುಂದೂಡಲ್ಪಟ್ಟ ಕಲಾಪ ಆರಂಭವಾಗುತ್ತಿದ್ದಂತೆ ವಿಧಾನಸಭೆ ಸ್ಪೀಕರ್ ಧನಪಾಲ್ ಧ್ವನಿ ಮತದ ಮೂಲಕ ವಿಶ್ವಾಸ ಮತ ಯಾಚನೆ ಅಂಗೀಕರಿಸಿದರು.  ಸರ್ಕಾರದ ಪರವಾಗಿ 122 ಶಾಸಕರು ಬೆಂಬಲ ಸೂಚಿಸಿದರೆ, ವಿರುದ್ಧವಾಗಿ ಕೇವಲ 11 ಮಂದಿ ಶಾಸಕರು ಹಕ್ಕು ಚಲಾಯಿಸಿದರು. ಇದರಿಂದ ತಮಿಳುನಾಡು ಆಡಳಿತಾರೂಢ ಎಐಎಡಿಎಂಕೆಯಲ್ಲಿ ಚಿನ್ನಮ್ಮನ ಕೈ ಮೇಲಾಗಿದ್ದು, ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರವೇ ಶಕ್ತಿ ಕೇಂದ್ರವಾಗಲಿದೆ.  ರಣರಂಗವಾದ ತಮಿಳುನಾಡು ವಿಧಾನಸಭೆ. ಸ್ಪೀಕರ್‍ರನ್ನೇ ಹಿಡಿದು ಎಳೆದಾಡಿ ಮೈಕ್ ಕಿತ್ತು ಹಾಕಿದ ಶಾಸಕರು, ಭಾರೀ ಕೋಲಹಲ, ಗದ್ದಲ, ಪೀಠೋಪಕರಣಗಳ ಧ್ವಂಸ, ಮಾಧ್ಯಮದವರ ಮೇಲೆ ಹಲ್ಲೆ, ಡಿಎಂಕೆ ಶಾಸಕರ ಅಮಾನತು, ಪರಸ್ಪರ ಕೈ, ಕೈ ಮಿಲಾಯಿಸಿದ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವಂತಹ ನಾಟಕೀಯ ಬೆಳವಣಿಗೆಗೆ ಇಂದು ತಮಿಳುನಾಡು ವಿಧಾನಸಭೆ ಸಾಕ್ಷಿಯಾಯಿತು. ಅಧಿಕಾರ ಉಳಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯುತ್ತೇವೆ ಎಂಬುದನ್ನು ಜನಪ್ರತಿನಿಧಿಗಳು ಸಾಬೀತು ಮಾಡಿದ್ದಾರೆ.  ದೇಶವೇ ಕುತೂಹಲದಿಂದ ಎದುರು ನೋಡುತ್ತಿದ್ದ ತಮಿಳುನಾಡು ವಿಧಾನಸಭೆಯ ವಿಶ್ವಾಸ ಮತಯಾಚನೆಯಲ್ಲಿ ಭಾರೀ ಕೋಲಾಹಲ, ಗದ್ದಲ ನಡೆದು ಅಧಿಕಾರ ಶಕ್ತಿಕೇಂದ್ರ ವಿಧಾನಸೌಧ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು.  ಒಂದೆಡೆ ಅಧಿಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸ್ಪೀಕರ್ ಮೂಲಕ ಎಲ್ಲ ವಾಮಮಾರ್ಗ ಅನುಸರಿಸಿದರೆ, ಮತ್ತೊಂದೆಡೆ ಪ್ರತಿಪಕ್ಷ ಡಿಎಂಕೆ ಸರ್ಕಾರವನ್ನು ಉರುಳಿಸಲು ನಡೆಸಿದ ಪ್ರಯತ್ನ ಫಲ ಕೊಡಲಿಲ್ಲ.

ಅಂತಿಮವಾಗಿ ಸ್ಪೀಕರ್ ಮಧ್ಯಾಹ್ನ 3 ಗಂಟೆಯವರೆಗೂ ಕಲಾಪವನ್ನು ಮುಂದೂಡಿದ್ದು, ಡಿಎಂಕೆಯ 89 ಶಾಸಕರನ್ನು ಸದನದಿಂದ ಅಮಾನತು ಮಾಡಿರುವ ಕಾರಣ ಪಳನಿಸ್ವಾಮಿ ಹಾದಿಯನ್ನು ಸುಗಮಗೊಳಿಸಿದ್ದಾರೆ.

ಡಿಎಂಕೆ ಶಾಸಕರ ಅಮಾನತು:

ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ವೇಳೆ ಸ್ಪೀಕರ್ ಜೊತೆ ಅನುಚಿತವಾಗಿವರ್ತಿಸಿದ ಪ್ರತಿಪಕ್ಷ ಡಿಎಂಕೆಯ 89 ಮಂದಿ ಶಾಸಕರನ್ನು ವಿಧಾನಸಭೆಯ ಸ್ಪೀಕರ್ ಧನಪಾಲ್ ಅಮಾನತು ಮಾಡಿದರು.  ಒಂದು ಹಂತದಲ್ಲಿ ಡಿಎಂಕೆ ಶಾಸಕರು ಸ್ಪೀಕರ್ ಅವರ ಕುರ್ಚಿ ಮುಂದೆ ನುಗ್ಗಿ ಅವರ ಶರ್ಟ್ ಕಿತ್ತುಹಾಕಿದ್ದಲ್ಲದೆ, ಕುರ್ಚಿಯಿಂದ ಬಲವಂತವಾಗಿ ಹೊರ ತಳ್ಳಿದರು. ಅಲ್ಲದೆ ಕೆಲ ಶಾಸಕರು ಸ್ಪೀಕರ್ ಕುರ್ಚಿಯಲ್ಲಿ ಕುಳಿತು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.ಈ ವೇಳೆ ಸ್ಪೀಕರ್ ಅವರ ರಕ್ಷಣೆಗೆ ಧಾವಿಸಿದ ಮಾರ್ಷಲ್‍ಗಳ ಮೇಲೆ ಶಾಸಕರು ಹಲ್ಲೆ  ನಡೆಸಿದ್ದಾರೆ. ಪರಸ್ಪರ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿದರು. ಸ್ಪೀಕರ್ ಮೈಕ್ ಕಿತ್ತು ಹಾಕಿದರಲ್ಲದೆ, ಕಡತಗಳನ್ನು ಹರಿದು ಹಾಕಿ ಗಾಳಿಗೆ ತೂರಿದರು. ಇದರಿಂದ ಕಲಾಪವನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು. ಬಳಿಕ ಒಂದು ಗಂಟೆ ನಂತರ ಪುನಃ ಕಲಾಪ ಆರಂಭಗೊಂಡಾಗ ಡಿಎಂಕೆ ಶಾಸಕರು ಗದ್ದಲ ಆರಂಭಿಸಿದರು.

ನನಗೆ ನೋವಾಗಿದೆ:

ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಧನಪಾಲ್ ಇಂದು ನಡೆದಿರುವ ಘಟನೆ ನನ್ನ ಮನಸ್ಸಿಗೆ ಅತ್ಯಂತ ನೋವು ಉಂಟು ಮಾಡಿದೆ. ಸ್ಪೀಕರ್ ಸ್ಥಾನದಲ್ಲಿರುವ ನನ್ನನ್ನು ಹಿಡಿದು ಎಳೆದಾಡಿದ್ದು, ಹಲ್ಲೆ ಮಾಡಿದ್ದಾರೆ. ಸಾಲದ್ದಕ್ಕೆ ಮೈಕ್ ಕಿತ್ತು ಹಾಕಲಾಗಿದೆ. ಸ್ಪೀಕರ್ ಸ್ಥಾನಕ್ಕೆ ಗೌರವವಿಲ್ಲವೇ ಎಂದು ಪ್ರಶ್ನಿಸಿದರು.  ಪುನಃ ಡಿಎಂಕೆ ಶಾಸಕರು ಸ್ಪೀಕರ್ ಕುರ್ಚಿ ಬಳಿ ಧಾವಿಸುತ್ತಿದ್ದಂತೆ ಮಾರ್ಷಲ್‍ಗಳು ರಕ್ಷಣೆಗೆ ಬಂದರು. ಸದನದಲ್ಲಿ ಅನುಚಿತವಾಗಿ ವರ್ತಿಸಿರುವ ಡಿಎಂಕೆಯ ಎಲ್ಲಾ ಶಾಸಕರನ್ನು ಅಮಾನತು ಮಾಡಲಾಗಿದೆ. ವಿಶ್ವಾಸ ಮತ ಯಾಚನೆಯಲ್ಲಿ ಅವರು ಪಾಲ್ಗೊಳ್ಳದಂತೆ ಹೊರ ಹಾಕಿ ಎಂದು ಮಾರ್ಷಲ್‍ಗಳಿಗೆ ಆದೇಶಿಸಿದರು.  ಇದರಿಂದ ಮತ್ತೆ ಗದ್ದಲ ಹೆಚ್ಚಾಗಿದ್ದರಿಂದ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು.

ರಣರಂಗವಾದ ವಿಧಾನಸಭೆ:

ರಾಜ್ಯಪಾಲರ ನಿರ್ದೇಶನದಂತೆ ಎಡಪ್ಪಾಡಿ ಪಳನಿಸ್ವಾಮಿ ಇಂದು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಮುಂದಾದರು. ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದ ಎಐಎಡಿಎಂಕೆ ಶಾಸಕರು ಬೆಳಗ್ಗೆ ಸಚಿವರ ವಾಹನಗಳಲ್ಲಿ ಕರೆತರಲಾಯಿತು.  ಬೆಳಗ್ಗೆ 11 ಗಂಟೆಗೆ ಸರಿಯಾಗಿ ವಿಶೇಷ ಅಧಿವೇಶನವನ್ನು ಸ್ಪೀಕರ್ ಧನಪಾಲ್ ಪಳನಿಸ್ವಾಮಿ ವಿಶ್ವಾಸ ಮತಯಾಚನೆ ಮಾಡಲು ಸೂಚಿಸಿದರು. ಬಳಿಕ ಪಳನಿಸ್ವಾಮಿ ವಿಶ್ವಾಸ ಮತ ಯಾಚನೆಗೆ ಮುಂದಾದರು. ಮೊದಲು ಸದನದಲ್ಲಿ ಹಾಜರಿದ್ದ 230 ಸದಸ್ಯರನ್ನು ಒಟ್ಟು ಆರು ಸರತಿಯಲ್ಲಿ ವಿಂಗಡಣೆ ಮಾಡಿ ಪ್ರತಿ ಸಾಲಿನಲ್ಲಿ  38 ಸದಸ್ಯರಿಗೆ ಕುರ್ಚಿಗಳನ್ನು ನಿಗದಿಪಡಿಸಲಾಗಿತ್ತು.  ಮೊದಲ ಸಾಲಿನಲ್ಲಿದ್ದ 38 ಸದಸ್ಯರು ಪಳನಿಸ್ವಾಮಿ ಪರ ಮತ ಚಲಾಯಿಸುತ್ತಿದ್ದಂತÉ ಪ್ರತಿಪಕ್ಷದ ನಾಯಕ ಎಂ.ಕೆ.ಸ್ಟಾಲಿನ್ ಆಕ್ಷೇಪ ವ್ಯಕ್ತಪಡಿಸಿದರು.

ಸದನ ಕೋಲಾಹಲ:

ವಿಶ್ವಾಸ ಮತ ಯಾಚನೆ ವೇಳೆ ಪ್ರತಿಪಕ್ಷದ ನಾಯಕರು ಸೇರಿದಂತೆ ಕೆಲವರಿಗೆ ಮಾತನಾಡಲು ಅವಕಾಶ ಕೊಡಬೇಕೆಂದು ಪ್ರತಿಪಕ್ಷದ ನಾಯಕ ಸ್ಟಾಲಿನ್, ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ, ಕಾಂಗ್ರೆಸ್ ಮುಖಂಡ ರಾಮಸ್ವಾಮಿ ಮತ್ತಿತರರು ಸ್ಪೀಕರ್‍ಗೆ ಮನವಿ ಮಾಡಿದರು.  ಆದರೆ ಸದಸ್ಯರ ಮನವಿಯನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದ ಸ್ಪೀಕರ್ ಮೊದಲೇ ನಿಗದಿಯಾಗಿರುವಂತೆ ತಲೆ ಎಣಿಕೆ ಮೂಲಕವೇ ವಿಶ್ವಾಸ ಮತಯಾಚನೆಗೆ ಅವಕಾಶ ಕೊಡುವುದಾಗಿ ತಿರುಗೇಟು ನೀಡಿದರು.  ಈ ಸದನದಲ್ಲಿ ಸ್ಪೀಕರ್ ಅವರ ನಿರ್ಣಯವೇ ಅಂತಿಮ. ನನ್ನ ನಿರ್ಧಾರವನ್ನು ಯಾರೊಬ್ಬರೂ ಪ್ರಶ್ನಿಸುವಂತಿಲ್ಲ ಎಂದು ಪ್ರತಿಪಕ್ಷದ ಸದಸ್ಯರ ಆಕ್ಷೇಪಕ್ಕೆ ಸ್ಪಷ್ಟನೆ ನೀಡಿದರು. ಇದರಿಂದ ಡಿಎಂಕೆ, ಎಐಎಡಿಎಂಕೆಯ ಭಿನ್ನ ಮತ ಶಾಸಕರು ಹಾಗೂ ಕಾಂಗ್ರೆಸ್‍ನ 8 ಮಂದಿ ಶಾಸಕರು ಸದನದಲ್ಲಿ ಕೋಲಾಹಲ ಸೃಷ್ಟಿಸಿದರು.

ವಿಶ್ವಾಸ ಮತ ಯಾಚನೆ ಪ್ರಜಾಪ್ರಭುತ್ವದ ವ್ಯವಸ್ಥೆಯಡಿಯೇ ನಡೆಯಬೇಕು. ಶಾಸಕರನ್ನು ನೀವು ಅಪರಾಧಿ(ಕ್ರಿಮಿನಲ್ಸ್)ಗಳಂತೆ ನೋಡುವುದು ಸರಿಯಲ್ಲ. ಗುಪ್ತ ಮತದಾನಕ್ಕೆ ಅವಕಾಶ ಕೊಡಬೇಕು. ಒಂದು ದಿನ ಬಹುಮತ ಯಾಚನೆಯನ್ನು ಮುಂದೂಡಿದರೆ ಪ್ರಪಂಚ ಕಳಚಿ ಬಿದ್ದು ಹೋಗುವುದಿಲ್ಲ ಎಂದು ಸ್ಟಾಲಿನ್ ಸ್ಪೀಕರ್ ಅವರನ್ನು ತರಾಟೆಗೆ ತೆಗೆದುಕೊಂಡರು.  ಕಳೆದ ಹದಿನೈದು ದಿನಗಳಿಂದ ತಮಿಳುನಾಡಿನಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಗಳು, ಶಾಸಕರ ರೆಸಾರ್ಟ್ ವಾಸ್ತವ್ಯ, ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಹೆಚ್ಚುತ್ತಿರುವ ಭ್ರಷ್ಟಾಚಾರ ಸೇರಿದಂತೆ ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚಿಸಲು ಅವಕಾಶ ಕೊಡುವಂತೆ ಮನವಿ ಮಾಡಿದರು. ಇದನ್ನು ತಿರಸ್ಕರಿಸಿದ್ದರಿಂದ ಸದನ ರಣರಂಗವಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin