ವಿಶ್ವ ವಿಖ್ಯಾತ ದಸರಾ ಉದ್ಘಾಟಿಸಲು ಮೈಸೂರಿಗೆ ಆಗಮಿಸಿದ ನಾಡೋಜ ಚನ್ನವೀರ ಕಣವಿ

Channaveera

ಮೈಸೂರು, ಸೆ.29- ಕಾವೇರಿ ನೀರಿನ ವಿಷಯದಲ್ಲಿ ಕರ್ನಾಟಕಕ್ಕೆ ಮೊದಲಿನಿಂದಲೂ ಅನ್ಯಾಯವಾಗುತ್ತಾ ಬಂದಿರುವುದು ನಿಜವೇ. ಅದಕ್ಕಾಗಿ ಹೋರಾಟ ಅನಿವಾರ್ಯ. ಆದರೆ ನಮ್ಮ ಹೋರಾಟ ಶಾಂತಿಯುತವಾಗಿ , ಅಹಿಂಸಾತ್ಮಕವಾಗಿ ಇರಬೇಕು ಎಂದು ನಾಡಿನ ಹಿರಿಯ ಕವಿ ನಾಡೋಜ ಪುರಸ್ಕøತ ಚನ್ನವೀರ ಕಣವಿ ಹೇಳಿದರು. ವಿಶ್ವ ವಿಖ್ಯಾತ ದಸರಾ ಉದ್ಘಾಟನೆಗೆ ಇಂದು ಬೆಳಗ್ಗೆ ಧಾರವಾಡ ಎಕ್ಸ್‍ಪ್ರೆಸ್ ರೈಲಿನ ಮೂಲಕ ಇಲ್ಲಿಗೆ ಆಗಮಿಸಿದ ಅವರನ್ನು ರೈಲ್ವೆ ನಿಲ್ದಾಣದಲ್ಲಿ ಸ್ವಾಗತಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹೋರಾಟದಿಂದ ಯಾವುದೇ ಆಸ್ತಿ-ಪಾಸ್ತಿ ಹಾನಿಯಾಗಬಾರದು ಮತ್ತು ಹಿಂಸೆಯಿಂದ ಯಾವ ಸಮಸ್ಯೆಯೂ ಬಗೆಹರಿಯುವುದಿಲ್ಲ ಎಂದರು.

ಕಾವೇರಿ ಪ್ರಶ್ನೆ ಬರಿ ಹಳೇ ಮೈಸೂರಿಗೆ ಮಾತ್ರ ಸೀಮಿತವಾಗಿಲ್ಲ. ಮಹದಾಯಿ ಅಥವಾ ಕಾವೇರಿ ಯಾವುದೇ ನೀರಿನ ಹೋರಾಟ ಇಡೀ ಕರ್ನಾಟಕದ ಜನತೆಗೆ ಸೇರಿದ್ದು. ಈ ಬಗ್ಗೆ ಎಲ್ಲರೂ ದನಿ ಎತ್ತಬೇಕು ಎಂದು ಅವರು ತಿಳಿಸಿದರು. ನಾನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಮೈಸೂರು ದಸರಾ ನೋಡಲು ಬಂದಿದ್ದೆ. ಅದಾದ ನಂತರ ಒಮ್ಮೆ ದಸರಾ ಕವಿಗೋಷ್ಠಿ ಉದ್ಘಾಟನೆಗೆ ಬಂದಿದ್ದೆ. ಈ ಬಾರಿ ಜಗದ್ವಿಖ್ಯಾತ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಲು ಸರ್ಕಾರ ದೂರದ ಊರಿನಲ್ಲಿರುವ ನನ್ನನ್ನು ಗುರುತಿಸಿ ಕರೆದಿರುವುದು ನನಗೆ ಅತೀವ ಸಂತೋಷವಾಗಿದೆ.
ಈ ಸಂದರ್ಭ ಕರ್ನಾಟಕದ ಜನತೆ, ಸರ್ಕಾರ ಹಾಗೂ ಮೈಸೂರು ನಾಗರಿಕರಿಗೆ ನಾನು ತುಂಬಾ ಆಭಾರಿಯಾಗಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದರು.

ದಸರೆ ಕಾರ್ಯಕ್ರಮ ಯಾವುದೇ ತೊಂದರೆಗಳಿಲ್ಲದೆ ನಿರ್ವಿಘ್ನವಾಗಿ, ಸುಗಮವಾಗಿ ಮತ್ತು ಅಚ್ಚುಕಟ್ಟಾಗಿ ನಡೆಯಬೇಕು ಎಂಬುದು ನನ್ನ ಆಸೆ. ಅದಕ್ಕೆಂದೇ ಎರಡು ದಿನ ಮುಂಚಿತವಾಗಿಯೇ ನಾನು ಇಲ್ಲಿಗೆ ಆಗಮಿಸಿದೆ. ಎರಡು ದಿನ ವಿಶ್ರಾಂತಿ ತೆಗೆದುಕೊಂಡು ದಸರಾ ಉದ್ಘಾಟನೆಗೆ ಸಜ್ಜಾಗುತ್ತೇನೆ. ಮೈಸೂರಿಗೆ ಬಂದಿರುವುದು ನನ್ನ ಸ್ವಂತ ಮನೆಗೆ ಬಂದಂತಾಗಿದೆ ಎಂದು ಅವರು ಧನ್ಯತಾ ಭಾವ ಪ್ರದರ್ಶಿಸಿದರು. ಇದಕ್ಕೂ ಮುನ್ನ ಇಂದು ಮುಂಜಾನೆ ರೈಲು ನಿಲ್ದಾಣದಲ್ಲಿ ಬಂದಿಳಿದ ಅವರನ್ನು ತಹಸೀಲ್ದಾರ್ ರಮೇಶ್‍ಬಾಬು ಮತ್ತು ಸಂಸದ ಪ್ರತಾಪ ಸಿಂಹ ಅವರು ಹಿರಿಯ ಸಾಹಿತಿಗೆ ಮೈಸೂರು ಪೇಟ ತೊಡಿಸಿ ರೇಷ್ಮೆ ಶಾಲು ಹೊದಿಸಿ ಗಂಧದ ಹಾರ ಹಾಕಿ ಆತ್ಮೀಯವಾಗಿ ಸ್ವಾಗತಿಸಿದರು.

ದಸರಾ ಉದ್ಘಾಟನೆಗೆ ಆಗಮಿಸಿದ ರಾಜ್ಯದ ಹಿರಿಯ ಸಾಹಿತಿ ಒಬ್ಬರನ್ನು ಸ್ವಾಗತಿಸಲು ಸ್ಥಳಿಯ ಶಾಸಕರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಧಿಕಾರಿಯಾಗಲಿ ಬರದಿರುವುದು ಜನರಲ್ಲಿ ಅಸಮಾಧಾನ ಉಂಟು ಮಾಡಿತು. ಸಾಮಾನ್ಯವಾಗಿ ಶಿಷ್ಟಾಚಾರದ ಪ್ರಕಾರ ಜಿಲ್ಲಾಧಿಕಾರಿಯವರು ಅತಿಥಿಗಳನ್ನು ಸ್ವಾಗತಿಸಲು ಬರಬೇಕು. ಆದರೆ ಜಿಲ್ಲಾಧಿಕಾರಿಯವರು ಬರದೆ ಇರುವುದು ಶಿಷ್ಟಾಚಾರ ಉಲ್ಲಂಘಿಸಿದಂತಾಗಿದೆ. ಈ ಕುರಿತಂತೆ ಪ್ರಸ್ತಾಪಿಸಿದಾಗ ತಮ್ಮ ಪರವಾಗಿ ತಹಸೀಲ್ದಾರ್ ಅವರನ್ನು ಕಳುಹಿಸಿದ್ದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Sri Raghav

Admin