ವಿಷಪೂರಿತ ಆಹಾರ ಸೇವನೆಯಿಂದ 7 ಲಕ್ಷ ಬೆಲೆಯ 6 ಜರ್ಸಿ ಹಸುಗಳ ಸಾವು

chikkamangaluru

ಚಿಕ್ಕಮಗಳೂರು,ಫೆ.5-ವಿಷಪೂರಿತ ಆಹಾರ ಸೇವನೆಯಿಂದ 7 ಲಕ್ಷ ರೂ. ಬೆಲೆಯ ಆರು ಜರ್ಸಿ ಹಸುಗಳು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಗಿಡ್ಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೈತ ರೇಣುಕಪ್ಪ ಅವರಿಗೆ ಸೇರಿದ ಹಸುಗಳು ನಿನ್ನೆ ಮೇವು ತಿಂದ ಕ್ಷಣದಲ್ಲೆ ಹಸುನೀಗಿದ್ದು, ರೈತನ ಕುಟುಂಬ ಕಂಗಾಲಾಗಿದೆ. ಕುಟುಂಬ ನಿರ್ವಹಣೆಗೆ ನೆರವಾಗಿದ್ದ ಹಸುಗಳ ಸಾವಿನಿಂದ ಚಿಂತೆಗೀಡಾಗಿದ್ದಾರೆ. ಹಸುಗಳ ಕಳೆಬರದ ಎದುರು ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತು. ಯಾರೋ ದುಷ್ಕರ್ಮಿಗಳು ಹೊಟ್ಟೆಕಿಚ್ಚಿಗಾಗಿ ಮೇವಿಗೆ ವಿಷ ಬೆರಸಿರಬಹುದೆಂದು ಶಂಕಿಸಲಾಗಿದೆ. ಶಿವಮೊಗ್ಗದ ಪಶುವೈದ್ಯರಾದ ಡಾ.ಸುದರ್ಶನ್ ಅವರ ತಂಡ ಮರಣೋತ್ತರ ನಡೆಸಿದ್ದು , ಅಂಗಾಂಗಗಳ ಮಾದರಿಯನ್ನು ಬೆಂಗಳೂರಿನ ಐಎಎಚ್ ಮತ್ತು ವಿಬಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಇನ್ನೆರಡು ದಿನದಲ್ಲಿ ಮರಣೋತ್ತರ ಪರೀಕ್ಷೆ ವರದಿ ಬರಲಿದ್ದು ಹಸುಗಳ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. ಹಾಲು ಕೊಡುತ್ತಿದ್ದ ಸುಧಾರಿತ ತಳಿಯ ಹಸುಗಳ ಅಕಾಲಿಕ ಮರಣಕ್ಕೆ ಈಡಾಗಿದ್ದು , ಜಿಲ್ಲಾಧಿಕಾರಿ ಜಿ.ಸತ್ಯವತಿ, ತಹಸೀಲ್ದಾರ್ ಶಿವಣ್ಣ , ಪಶು ವೈದ್ಯಾಧಿಕಾರಿ, ರೈತ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಜಿಲ್ಲಾ ಬಿಜೆಪಿ ಮುಖಂಡ ವರಸಿದ್ದಿ ವೇಣುಗೋಪಾಲ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Sri Raghav

Admin